ನವದೆಹಲಿ: ನೋಟು ನಿಷೇಧ ಬಳಿಕ ಕಾಳಧನಿಕರನ್ನು ಗುರಿ ಮಾಡಿಕೊಂಡಿರುವ ಕೇಂದ್ರ ಸರ್ಕಾರ ದಿನಕ್ಕೊಂದು ನಿಯಮಗಳನ್ನು ಜಾರಿಗೆ ತರುತ್ತಿದ್ದು, ಇದೀಗ ಡಿಸೆಂಬರ್ 30ರ ಬಳಿಕವೂ ಹಳೆಯ ನಿಷೇಧಿತ ನೋಟುಗಳನ್ನು ಹೊಂದಿದ್ದರೆ 50 ಸಾವಿರ ದಂಡ ವಿಧಿಸಲು ಮುಂದಾಗಿದೆ.
ಮೂಲಗಳ ಪ್ರಕಾರ ಕಾಳಧನಿಕರನ್ನು ಗುರುತಿಸಲು ಮತ್ತು ಕಪ್ಪುಹಣ ಬಿಳಿಯಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮತ್ತೊಂದು ಸುಗ್ರೀವಾಜ್ಞೆ ಹೊರಡಿಸಲು ಸಿದ್ಧತೆ ನಡೆಸಿಕೊಂಡಿದೆ. ನೂತನ ಸುಗ್ರೀವಾಜ್ಞೆಯಂತೆ ಡಿಸೆಂಬರ್ 30ರ ಬಳಿಕ ಯಾವುದೇ ವ್ಯಕ್ತಿ ತನ್ನ ಬಳಿ ದಾಖಲೆ ಇಲ್ಲದ 10ಕ್ಕಿಂತಲೂ ಹೆಚ್ಚು ನಿಷೇಧಿತ ಹಳೆಯ ನೋಟುಗಳನ್ನು ಹೊಂದಿದ್ದರೆ ಆತನಿಗೆ ಕನಿಷ್ಠ 50 ಸಾವಿರ ರು. ಅಥವಾ ಇರುವ ಹಣಕ್ಕಿಂತ ಐದು ಪಟ್ಟು ದಂಡ ವಿಧಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಹಳೆಯ ನೋಟುಗಳನ್ನು ಬ್ಯಾಂಕುಗಳಿಗೆ ಜಮಾ ಮಾಡಲು ಡಿಸೆಂಬರ್ 31ರವರೆಗೂ ಕಾಲಾವಕಾಶವಿದ್ದು, ಡಿಸೆಂಬರ್ 31 ರ ಬಳಿಕ ಜಮೆಯಾಗುವ ಹಣಕ್ಕೆ ಬ್ಯಾಂಕು ಅಧಿಕಾರಿಗಳಿಗೆ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಈ ಅಫಿಡವಿಟ್ ನಲ್ಲಿ ಹಣ ಜಮಾವಣೆಗೆ ಏಕೆ ತಡವಾಯಿತು? ಮತ್ತು ಹಣದ ಮೂಲ ಸೇರಿದಂತೆ ವಿವಿಧ ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರಿಸಬೇಕಿರುತ್ತದೆ. ಒಂದು ವೇಳೆ ಆ ಉತ್ತರಗಳು ಸಮರ್ಪಕವಾಗಿರದೇ ಇದ್ದಲ್ಲಿ ಆಗ ಅಂತಹ ವ್ಯಕ್ತಿಗೆ ದುಬಾರಿ ಪ್ರಮಾಣದ ದಂಡ ಹಾಗೂ ಕಾನೂನು ರೀತ್ಯ ಕ್ರಮ ಅನುಸರಿಸುವುದಾಗಿ ಈ ಹಿಂದೆಯೇ ಕೇಂದ್ರ ಸರ್ಕಾರ ಹೇಳಿತ್ತು. ಹೀಗಾಗಿ ಪ್ರಸ್ತುತ ಕೇಂದ್ರ ಸರ್ಕಾರ ಹೊರಡಿಸಲು ಮುಂದಾಗಿರುವ ನೂತನ ಸುಗ್ರೀವಾಜ್ಞೆ ಕುರಿತಂತೆ ಭಾರಿ ಕುತೂಹಲ ಮೂಡಿದೆ.
ಆದರೆ ಸುಗ್ರೀವಾಜ್ಞೆ ಕುರಿತಂತೆ ಕೇಂದ್ರ ಸರ್ಕಾರವಾಗಲೀ ಅಥವಾ ವಿತ್ತ ಇಲಾಖೆಯಾಗಲೀ ಅಥವಾ ಅಧಿಕಾರಿಗಳಾಗಲೂ ಯಾವುದೇ ಅಧಿಕೃತ ಮಾಹಿತಿಯನ್ನೂ ನೀಡಿಲ್ಲ.
ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಹಳೆಯ 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರು. ನಿಷೇಧಕ್ಕೂ ಮೊದಲು 500 ಮತ್ತು 1000 ರು, ಮುಖಬೆಲೆಯ ಸುಮಾರು 15.44 ಲಕ್ಷ ಕೋಟಿ ಮೌಲ್ಯದ ಹಳೆಯ ನೋಟುಗಳು ದೇಶಾದ್ಯಂತ ಚಲಾವಣೆಯಲ್ಲಿತ್ತು. ಆದರೆ ನೋಟು ನಿಷೇಧ ಬಳಿಕ ಸುಮಾರು 13 ಲಕ್ಷ ಕೋಟಿ ಹಳೆಯ ನೋಟುಗಳು ಬ್ಯಾಂಕುಗಳಿಗೆ ಜಮೆಯಾಗಿದ್ದು, ಕಾಳಧನಿಕರ ಬಳಿ ಇರುವ ಉಳಿದ 2.44 ಲಕ್ಷ ಕೋಟಿ ಹಣ ಮತ್ತೆ ಚಲಾವಣೆಗೆ ಬಾರದಿರಲು ಕೇಂದ್ರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.