ರಾಷ್ಟ್ರೀಯ

ಸಣ್ಣ ವ್ಯಾಪಾರಿಗಳ ಡಿಜಿಟಲ್ ವಹಿವಾಟಿಗೆ ಆದಾಯ ತೆರಿಗೆ ಮೇಲೆ ಶೇ. 2 ವಿನಾಯ್ತಿ: ಜೇಟ್ಲಿ

Pinterest LinkedIn Tumblr

jetly
ನವದೆಹಲಿ: ಸಣ್ಣ ವ್ಯಾಪಾರಿಗಳ ವಾರ್ಷಿಕ ವಹಿವಾಟು 2 ಕೋಟಿಯವರೆಗೆ ಇದ್ದರೆ ಅವರು ಶೇಕಡ 8ರಷ್ಟು ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಅದೇ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಮಾಡಿದರೆ ಶೇಕಡ 2ರಷ್ಟು ವಿನಾಯಿತಿ ನೀಡಲಾಗುವುದು. ತಮ್ಮ ಆದಾಯದ ಮೇಲೆ ಶೇಕಡಾ 6ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದ ಅವರಿಗೆ ಭಾರೀ ಅನುಕೂಲವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಇಂದು ಮಾಧ್ಯಮಗಳಿಗೆ ನೋಟುಗಳ ಅಮಾನ್ಯತೆ ಕುರಿತು ವಿವರಿಸಿದ ಅವರು, ಹಳೆ ನೋಟು ಹೊಂದಿರುವವರು ಒಂದೇ ಸಲ ಬ್ಯಾಂಕಿಗೆ ಹೋಗಿ ಠೇವಣಿ ಇಡಬೇಕು. ಪ್ರತಿದಿನ ಹೋಗುತ್ತಿದ್ದರೆ ಸಂಶಯ ಮೂಡುತ್ತದೆ ಎಂದರು.
ಆರ್ ಬಿಐ ಬಳಿ ಸಾಕಷ್ಟು ಹಣವಿದೆ. ಅದು ಕೇವಲ ಡಿಸೆಂಬರ್ 30ರವರೆಗೆ ಚಲಾವಣೆಗೆ ಮಾತ್ರವಲ್ಲ. ನಂತರ ಚಲಾವಣೆ ನಡೆಸಲು ಕೂಡ ಆರ್ ಬಿಐ ಬಳಿ ಹಣವಿದೆ.
ಅಕ್ರಮವನ್ನು ತಡೆಗಟ್ಟಲು ಬ್ಯಾಂಕುಗಳು ತನ್ನ ಸಿಬ್ಬಂದಿಗಳ ಚಟುವಟಿಕೆ ಮೇಲೆ ಗಮನವಿರಿಸಿದೆ. ಇದು ಕೇವಲ ಆಕ್ಸಿಸ್ ಬ್ಯಾಂಕಿಗೆ ಮಾತ್ರವಲ್ಲ, ಎಲ್ಲಾ ಬ್ಯಾಂಕುಗಳ ನೌಕರರಿಗೂ ಅನ್ವಯವಾಗುತ್ತದೆ. ಆಕ್ಸಿಸ್ ಬ್ಯಾಂಕಿನ ಅಕ್ರಮದ ಬಗ್ಗೆ ಅದರ ಅಧ್ಯಕ್ಷರಿಂದ ಹೇಳಿಕೆ ತರಿಸಿಕೊಂಡಿದ್ದೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡುಗಳ ಬಳಕೆ ಜಾಸ್ತಿಯಾಗಿದೆ. ವ್ಯಾಪಾರ, ವಹಿವಾಟುಗಳಲ್ಲಿ ಮೊಬೈಲ್ ವ್ಯಾಲೆಟ್ ಮತ್ತು ಇ-ಪೇಮೆಂಟ್ ಗಳು ಕೂಡ ಹೆಚ್ಚಾಗಿವೆ ಎಂದು ಜೇಟ್ಲಿ ಹೇಳಿದರು.
ಈ ತಿಂಗಳ 30ರವರೆಗೆ ಹಳೆಯ 500 ಮತ್ತು 1000 ರೂ ನೋಟುಗಳಲ್ಲಿ ಬ್ಯಾಂಕುಗಳಲ್ಲಿ ವ್ಯವಹಾರ ನಡೆಸಬಹುದು. ನಂತರ ಎಲ್ಲಾ ವಹಿವಾಟುಗಳನ್ನು ನಿಲ್ಲಿಸಲಾಗುವುದು. ಹಳೆ ನೋಟುಗಳಲ್ಲಿ ಬೇರೆ ಯಾವುದೇ ವಹಿವಾಟು ಸಾಧ್ಯವಿಲ್ಲವೆಂದಾದರೆ ಅದನ್ನು ಒಂದೇ ಸಲಕ್ಕೆ ಜನರು ಬ್ಯಾಂಕಿನಲ್ಲಿ ಏಕೆ ಹೂಡಿಕೆ ಮಾಡಬಾರದು ಎಂದು ಪ್ರಶ್ನಿಸಿದರು.

Comments are closed.