ನವದೆಹಲಿ: ರದ್ದಾದ ನೋಟುಗಳನ್ನು ಬ್ಯಾಂಕುಗಳಿಗೆ ಜಮೆ ಮಾಡುವ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿರುವ ಆರ್ಬಿಐ ನಿರ್ಧಾರವನ್ನು ಸಮರ್ಥಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಒಂದು ಖಾತೆಗೆ ₹5,000ಕ್ಕಿಂತ ಹೆಚ್ಚು ಹಣವನ್ನು ಒಂದು ಬಾರಿ ಮಾತ್ರ ಜಮೆ ಮಾಡಿದರೆ ಅದನ್ನು ಪ್ರಶ್ನಿಸುವಂತಿಲ್ಲ.
ಆದರೆ ಒಂದಕ್ಕಿಂತ ಹೆಚ್ಚು ಬಾರಿ ಅದೇ ಖಾತೆಗೆ ₹5,000ಕ್ಕಿಂತ ಹೆಚ್ಚು ಹಣವನ್ನು ಜಮೆ ಮಾಡುವುದಾದರೆ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಹೇಳಿದ್ದಾರೆ.
ನವೆಂಬರ್ 8 ರಂದು ಗರಿಷ್ಠ ಮುಖಬೆಲೆ ನೋಟುಗಳನ್ನು ರದ್ದು ಮಾಡಿದ ನಂತರ ಬ್ಯಾಂಕ್ನಲ್ಲಿ ₹15.4 ಲಕ್ಷ ಕೋಟಿ ಹಣ ಜಮೆ ಆಗಿದ್ದು, ಅದರಲ್ಲಿ ಸರಿಸುಮಾರು ₹13 ಲಕ್ಷ ಕೋಟಿಯಷ್ಟು ರದ್ದಾದ ₹500 ಮತ್ತು ₹1000 ನೋಟುಗಳಿವೆ.
ರದ್ದಾದ ನೋಟುಗಳಲ್ಲಿ ಒಂದು ಖಾತೆಗೆ ₹5,000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಜಮೆ ಮಾಡಲು ಅವಕಾಶ ನೀಡಲಾಗಿದ್ದು, ಡಿಸೆಂಬರ್ 30ರೊಳಗೆ ಹಣ ಜಮೆ ಮಾಡಬೇಕಾಗಿದೆ. ಅದೇ ವೇಳೆ ಹೀಗೆ ಜಮೆ ಮಾಡುವಾಗ ಈವರೆಗೆ ಯಾಕೆ ಜಮೆ ಮಾಡಿಲ್ಲ ಎಂಬುದಕ್ಕೆ ಬ್ಯಾಂಕ್ ಅಧಿಕಾರಿಗಳಿಗೆ ವಿವರಣೆ ನೀಡಬೇಕು ಎಂದು ಆರ್ಬಿಐ ನಿನ್ನೆ ಹೊಸ ಆದೇಶ ಹೊರಡಿಸಿತ್ತು.
ರದ್ದಾದ ನೋಟುಗಳನ್ನು ಬಳಸಿ ಯಾವುದೇ ರೀತಿಯ ವ್ಯಾಪಾರ ನಡೆಸುವಂತಿಲ್ಲ. ಅಂಥಾ ನೋಟುಗಳು ಕೈಯಲ್ಲಿದ್ದರೆ ಅದನ್ನು ಬ್ಯಾಂಕ್ನಲ್ಲಿ ಜಮೆ ಮಾಡಬೇಕು.
ಒಂದು ವೇಳೆ ಅವರ ಬಳಿಯಲ್ಲಿ ₹5,000ಕ್ಕಿಂತ ಹೆಚ್ಚು ಹಣ ಇದ್ದರೆ ಅದನ್ನು ಒಂದೇ ಬಾರಿ ಜಮೆ ಮಾಡಿದರೆ ಯಾರೂ ಪ್ರಶ್ನಿಸುವುದಿಲ್ಲ. ಪದೇ ಪದೇ ಹೋಗಿ ಹಣ ಜಮೆ ಮಾಡುವ ತೊಂದರೆಯೂ ಇರಲ್ಲ.
ಒಬ್ಬ ವ್ಯಕ್ತಿ ಪದೇ ಪದೇ ಒಂದೇ ಖಾತೆಗೆ ಹಣವನ್ನು ಜಮೆ ಮಾಡುತ್ತಲೇ ಇದ್ದರೆ, ಅಲ್ಲಿ ಸಂಶಯ ಮೂಡುತ್ತದೆ. ಹಾಗೆ ಮಾಡುವವರಿಗೆ ಮಾತ್ರ ಈ ನಿಯಮದಿಂದ ಸಮಸ್ಯೆ ಎದುರಿಸಬೇಕಾಗಿ ಬರುತ್ತದೆ. ಆದ್ದರಿಂದ ನಿಮ್ಮ ಬಳಿ ರದ್ದಾದ ನೋಟುಗಳು ಎಷ್ಟು ಇವೆಯೋ ಅವುಗಳನ್ನೆಲ್ಲಾ ಒಂದೇ ಬಾರಿ ಖಾತೆಯಲ್ಲಿ ಜಮೆ ಮಾಡಿಬಿಡಿ ಎಂದು ಜೇಟ್ಲಿ ಹೇಳಿದ್ದಾರೆ.
Comments are closed.