ರಾಷ್ಟ್ರೀಯ

ರಾಹುಲ್ ಗಾಂಧಿ ಆರೋಪಿಸಿದ್ದ 50 ಕುಟುಂಬಗಳಲ್ಲಿ ಗಾಂಧಿ ಪರಿವಾರವೂ ಇದೆಯೇ?: ಬಿಜೆಪಿ

Pinterest LinkedIn Tumblr

rahul
ನವದೆಹಲಿ: ದೇಶದ ಶೇ.60 ರಷ್ಟು ಸಂಪನ್ಮೂಲ 50 ಕುಟುಂಬಗಳ ಕೈಸೇರಲು ನೋಟು ನಿಷೇಧದ ಕ್ರಮದಿಂದ ಸಾಧ್ಯವಾಗಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ನೋಟು ನಿಷೇಧದಿಂದ ಕಾಂಗ್ರೆಸ್ ಕಪ್ಪುಹಣ ಕಳೆದುಕೊಂಡಿದ್ದು, ಇದರಿಂದ ಹತಾಶರಾಗಿರುವ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ರಾಹುಲ್ ಗಾಂಧಿ ಹೇಳಿರುವ 50 ಕುಟುಂಬಗಳ ಸದಸ್ಯರು ರಾತ್ರೋ ರಾತ್ರಿ ಕೋಟ್ಯಾಧಿಪತಿಗಳಾಗಲಿಲ್ಲ ಅಥವಾ ಕಳೆದ 2 ವರೆ ವರ್ಷಗಳಲ್ಲಿ ಶ್ರೀಮಂತರಾಗಲಿಲ್ಲ. ಅವರೆಲ್ಲರ ಬಳಿ ಸಂಪನ್ಮೂಲ ಕ್ರೋಡೀಕರಣವಾಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ. ಆದ್ದರಿಂದ ಬಿಜೆಪಿಯನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ ಅವರು ಸ್ವತಃ ಉತ್ತರ ನೀಡಬೇಕಿದೆ ಎಂದು ಸಂಬಿಪ್ ಪಾತ್ರ ಹೇಳಿದ್ದಾರೆ.
ಕಪ್ಪುಹಣವನ್ನು ಕಳೆದುಕೊಂಡಿರುವ ರಾಹುಲ್ ಗಾಂಧಿ ಹತಾಶೆಗೊಳಗಾಗಿದ್ದಾರೆ. ರಾಹುಲ್ ಗಾಂಧಿ ಹೇಳಿರುವ 50 ಕುಟುಂಬಗಳ ಪೈಕಿ ಹಲವು ಹಗರಣಗಳಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಗಾಂಧಿ ಕುಟುಂಬವೂ ಸೇರಿದೆಯೇ ಎಂದು ಬಿಜೆಪಿಯ ವಕ್ತಾರರು ಪ್ರಶ್ನಿಸಿದ್ದಾರೆ.
ಡಿ.19 ರಂದು ಉತ್ತರ ಪ್ರದೇಶದಲ್ಲಿ ಭಾಷಣ ಮಾಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ನೋಟು ನಿಷೇಧ ಭ್ರಷ್ಟರ ವಿರುದ್ಧದ ಕ್ರಮ ಆಗಿರಲಿಲ್ಲ. ಕೇಂದ್ರ ಸರ್ಕಾರದ ಕ್ರಮದಿಂದ ದೇಶದ ಶೇ.60 ರಷ್ಟು ಸಂಪನ್ಮೂಲ 50 ಕುಟುಂಬಗಳ ಕೈಸೇರಲು ಸಾಧ್ಯವಾಗಿದೆ ಎಂದು ಆರೋಪಿಸಿದ್ದರು.

Comments are closed.