ರಾಷ್ಟ್ರೀಯ

ವಿವಾದತ್ತ ಮುಖ ಮಾಡಿರುವ ಭೂಸೇನಾ ಮುಖ್ಯಸ್ಥರ ನೇಮಕ

Pinterest LinkedIn Tumblr

raavat

ನವದೆಹಲಿ: ಭೂ ಸೇನೆಯ ಮುಖ್ಯಸ್ಥರ ಹುದ್ದೆಗೆ ಲೆ.ಜ. ಬಿಪಿನ್‌ರಾವತ್‌ ಅವರನ್ನು ನೇಮಕ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಇಬ್ಬರು ಸೇನಾಧಿಕಾರಿಗಳ ಸೇವಾ ಹಿರಿತನವನ್ನು ಕಡೆಗಣಿಸಿ ರಾವತ್‌ಅವರನ್ನು ನೇಮಕ ಮಾಡುವ ಕೇಂದ್ರದ ನಿರ್ಧಾರವನ್ನು ಕಾಂಗ್ರೆಸ್‌ಮತ್ತು ಸಿಪಿಐ ಪ್ರಶ್ನಿಸಿವೆ. ಇದಕ್ಕೆ ಏನು ಕಾರಣ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿವೆ.

ವಿರೋಧ ಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ರಕ್ಷಣಾ ಪಡೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದೆ.

ದೇಶದ ಈಗಿನ ಭದ್ರತಾ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ರಾವತ್‌ಅವರಿಗೆ ಬಡ್ತಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಕೇಂದ್ರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್‌ಮುಖಂಡ ಮನೀಷ್‌ತಿವಾರಿ, ‘ಸಂಸ್ಥೆಗಳೊಂದಿಗೆ ಸರ್ಕಾರ ಆಟವಾಡುತ್ತಿದೆ. ಸೇನೆಯ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

ಅಲ್ಲದೇ, ರಾವತ್‌ನೇಮಕವು ‘ಹುಚ್ಚಾಟಿಕೆಯ ಆಯ್ಕೆ’ಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

‘ರಾವತ್‌ಅವರಿಗೆ ಸೇನಾ ಮುಖ್ಯಸ್ಥರಾಗುವ ಎಲ್ಲ ಅರ್ಹತೆಗಳು ಇದ್ದಿರಬಹುದು. ಆದರೆ, ಶ್ರೇಣಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ, ಸೇವಾ ಹಿರಿತನ ಪಾಲಿಸಿಕೊಂಡು ಬರಲಾಗುತ್ತಿರುವ ಸಂಸ್ಥೆಗೆ ಮುಖ್ಯಸ್ಥರನ್ನು ನೇಮಿಸುವಾಗ ಮೂವರು ಹಿರಿಯ ಅಧಿಕಾರಿಗಳಾದ ಲೆಫ್ಟಿನೆಂಟ್‌ಜನರಲ್‌ಪ್ರವೀಣ್‌ಬಕ್ಷಿ, ಲೆಫ್ಟಿನೆಂಟ್ ಪಿ.ಎಂ.ಹರೀಜ್‌ಮತ್ತು ಲೆಫ್ಟಿನೆಂಟ್ ಜನರಲ್‌ಬಿ.ಎಸ್‌. ನೇಗಿ ಅವರನ್ನು ಪರಿಗಣಿಸದೇ ಇರುವುದು ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ’ ಎಂದು ಹೇಳಿದ್ದಾರೆ.

ಆದರೆ, ಪ್ರವೀಣ್‌ಬಕ್ಷಿ ಮತ್ತು ಹರೀಜ್‌ಅವರು ಮಾತ್ರ ರಾವತ್‌ಅವರಿಗಿಂತ ಸೇವಾ ಹಿರಿತನ ಹೊಂದಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಎರಡು ದಶಕಗಳಿಂದ ಅನುಸರಿಸಿಕೊಂಡು ಬರುತ್ತಿದ್ದ ಸೇವಾ ಹಿರಿತನದ ನಿಯಮವನ್ನು ಸರ್ಕಾರ ಯಾಕೆ ಗೌರವಿಸಿಲ್ಲ? ಕಡೆಗಣಿಸಲಾಗಿರುವ ಅಧಿಕಾರಿಗಳು ಅಸಮರ್ಥರೇ? ಅಥವಾ ಇದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಾಡಿರುವ ಹುಚ್ಚಾಟಿಕೆಯ ಆಯ್ಕೆಯೇ’ ಎಂದು ತಿವಾರಿ ಪ್ರಶ್ನಿಸಿದ್ದಾರೆ.

ಸಿಪಿಐ ಮುಖಂಡ ಡಿ. ರಾಜಾ ಕೂಡ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಸರ್ಕಾರ ಮಾಡುವ ಎಲ್ಲ ನೇಮಕಗಳೂ ವಿವಾದಕ್ಕೀಡಾಗುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸೇನೆಗೆ ಮಾಡಿದ ನೇಮಕ ವಿವಾದಕ್ಕೆ ಗುರಿಯಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾಡಿರುವ ನೇಮಕಾತಿಗಳು ಈಗಾಗಲೇ ವಿವಾದ ಸೃಷ್ಟಿಸಿವೆ. ಕೇಂದ್ರ ಜಾಗೃತಿ ಆಯೋಗದ ಮುಖ್ಯಸ್ಥರು, ಸಿಬಿಐ ನಿರ್ದೇಶಕರಿಂದ ಹಿಡಿದು ಕೇಂದ್ರ ಮಾಹಿತಿ ಆಯೋಗದವರೆಗಿನ ಉನ್ನತ ಮಟ್ಟದ ನೇಮಕಾತಿಗಳೆಲ್ಲವೂ ವಿವಾದದ ಗೂಡಾಗಿವೆ’ ಎಂದು ಅವರು ಹೇಳಿದ್ದಾರೆ.

ಹಿಂದೆ ಒಂದು ಬಾರಿ ಹೀಗೆ ಆಗಿತ್ತು…

1983ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸೇವಾ ಹಿರಿತನವನ್ನು ಕಡೆಗಣಿಸಿ ಸೇನಾ ಮುಖ್ಯಸ್ಥರನ್ನು ನೇಮಿಸಲಾಗಿತ್ತು.
ಆ ಸಂದರ್ಭದಲ್ಲಿ ಲೆಫ್ಟಿನೆಂಟ್‌ಜನರಲ್‌ಎಸ್‌.ಕೆ. ಸಿನ್ಹಾ ಅವರು ಅತ್ಯಂತ ಹಿರಿಯ ಅಧಿಕಾರಿಯಾಗಿದ್ದರು. ಆದರೆ, ಇಂದಿರಾ ಗಾಂಧಿ ಹಾಗೂ ರಕ್ಷಣಾ ಸಚಿವರಾಗಿದ್ದ ಆರ್‌. ವೆಂಕಟ್‌ರಾಮನ್‌ಅವರು ಸೇವಾ ಹಿರಿತನದಲ್ಲಿ ಸಿನ್ಹಾ ಅವರಿಗಿಂತ ಎರಡು ತಿಂಗಳು ಕಿರಿಯರಾಗಿದ್ದ ಜನರಲ್‌ಎ.ಎಸ್‌.ವೈದ್ಯ ಅವರನ್ನು ಭೂ ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದರು. ನಂತರ ಸಿನ್ಹಾ ಅವರು ರಾಜೀನಾಮೆ ನೀಡಿದ್ದರು.

ಐವರ ಪೈಕಿ ರಾವತ್‌ ಆಯ್ಕೆ: ಬಿಜೆಪಿ
ಕಾಂಗ್ರೆಸ್‌ನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಂಠ ಶರ್ಮ, ದೇಶದ ಸದ್ಯದ ಭದ್ರತಾ ಚಿತ್ರಣವನ್ನು ಗಮನದಲ್ಲಿಟ್ಟುಕೊಂಡು ರಾವತ್‌ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

‘ಸೇನೆಯ ಐವರು ಅತ್ಯಂತ ಹಿರಿಯ ಅಧಿಕಾರಿಗಳ ಪೈಕಿ ಬಿಪಿನ್‌ರಾವತ್‌ಅವರನ್ನು ಆಯ್ಕೆ ಮಾಡಲಾಗಿದೆ. ಎಲ್ಲ ಅಧಿಕಾರಿಗಳೂ ಸಮರ್ಥರೇ. ರಾವತ್‌ನೇಮಕವನ್ನು ಉಳಿದವರ ವಿರುದ್ಧದ ನಕಾರಾತ್ಮಕ ಕ್ರಮ’ ಎಂದು ಯಾರೂ ಭಾವಿಸಬಾರದು ಎಂದು ಹೇಳಿದ್ದಾರೆ.

ಕಾಂಗ್ರೆಸ್‌ವಿರುದ್ಧ ಟೀಕೆ ಮಾಡಿರುವ ಶರ್ಮಾ, ಸೇನಾ ಮುಖ್ಯಸ್ಥರ ನೇಮಕ ವಿಚಾರವನ್ನು ಕಾಂಗ್ರೆಸ್‌ರಾಜಕೀಯಗೊಳಿಸುತ್ತಿದೆ. ಚುನಾವಣೆಗಳಲ್ಲಿ ಸೋತು ಮೂಲೆಗುಂಪಾಗಿರುವ ಕಾಂಗ್ರೆಸ್‌ನ ‘ಹತಾಶೆ’ಯನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ನೇಮಕಾತಿ ಸಮರ್ಥಿಸಿದ ಕೇಂದ್ರ

ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಲೆಫ್ಟಿನೆಂಟ್‌ಜನರಲ್ ಬಿಪಿನ್‌ರಾವತ್‌ಅವರ ನೇಮಕಾತಿಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ, ಅವರಿಗಿರುವ ಕಾರ್ಯಾಚರಣೆ ಅನುಭವ ಮತ್ತು ಅವರ ಸಾಮರ್ಥ್ಯವನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ.

ಭೂಸೇನೆಯ ಮುಖ್ಯಸ್ಥರನ್ನು ನೇಮಕಮಾಡುವ ವಿಶೇಷ ಹಕ್ಕು ಸರ್ಕಾರಕ್ಕೆ ಇದೆ. ಯಾವ ಅಧಿಕಾರಿ, ಯಾವ ಪಡೆಗೆ ಸೇರಿದವರು ಎಂಬುದನ್ನು ಪರಿಗಣಿಸದೇ ಕೇವಲ ಅರ್ಹತೆಯ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.

* ಇಬ್ಬರು ಹಿರಿಯ ಅಧಿಕಾರಿಗಳನ್ನು ಕಡೆಗಣಿಸಲು ಏನು ಕಾರಣ ಎಂಬುದನ್ನು ಸ್ವತಃ ಪ್ರಧಾನಿ ಅವರೇ ಬಹಿರಂಗ ಪಡಿಸಬೇಕು

–ತಿವಾರಿ, ಕಾಂಗ್ರೆಸ್‌ಮುಖಂಡ

Comments are closed.