ರಾಷ್ಟ್ರೀಯ

ಆರ್‍‌ಬಿಐ ಗವರ್ನರ್ ಸಂಬಳ 2.09 ಲಕ್ಷ: ಆರ್‍‍ಟಿಐ ಅರ್ಜಿಗೆ ಆರ್‍‌ಬಿಐ

Pinterest LinkedIn Tumblr

Urjitನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ₹2.09 ಲಕ್ಷ ಸಂಬಳ ಪಡೆಯುತ್ತಿದ್ದು, ಅವರು ಮನೆಯಲ್ಲಿ ಸಹಾಯಕರನ್ನಿಟ್ಟುಕೊಂಡಿಲ್ಲ ಎಂದು ಆರ್‍‌ಬಿಐ ಹೇಳಿದೆ.

ಸಪ್ಟೆಂಬರ್ ತಿಂಗಳಲ್ಲಿ ಆರ್‍‌ಬಿಐ ಗವರ್ನರ್ ಆಗಿ ನೇಮಕಗೊಂಡಿದ್ದ ಉರ್ಜಿತ್, ಮುಂಬೈನಲ್ಲಿ ಫ್ಲಾಟ್‍ನಲ್ಲೇ (ಉಪ ಗವರ್ನರ್ ಫ್ಲಾಟ್) ವಾಸವಾಗಿದ್ದಾರೆ.

ಅವರ ಮನೆಯಲ್ಲಿ ಯಾವುದೇ ಸಹಾಯಕರನ್ನಿಟ್ಟುಕೊಂಡಿಲ್ಲ. ಸರ್ಕಾರ ಅವರಿಗೆ ಎರಡು ಕಾರು ಮತ್ತು ಇಬ್ಬರು ಚಾಲಕರನ್ನು ನೀಡಿದೆ ಎಂದು ಮಾಹಿತಿ ಹಕ್ಕು (ಆರ್‍ಟಿಐ) ಅರ್ಜಿ ಮೂಲಕ ಕೇಳಲಾದ ಪ್ರಶ್ನೆಗೆ ಆರ್‍‌ಬಿಐ ಉತ್ತರಿಸಿದೆ.

ಅಕ್ಟೋಬರ್ ತಿಂಗಳಲ್ಲಿ ಉರ್ಜಿತ್ ಅವರು ₹2.09 ಲಕ್ಷ ಸಂಬಳ ಪಡೆದಿದ್ದಾರೆ. ಇಷ್ಟೇ ಮೊತ್ತವನ್ನು ಈ ಹಿಂದೆ ಗವರ್ನರ್ ಆಗಿದ್ದ ರಘುರಾಂ ರಾಜನ್ ಅವರು ಆಗಸ್ಟ್ ತಿಂಗಳಲ್ಲಿ ಪಡೆದಿದ್ದರು. ರಾಜನ್ ಅವರು ಸೆಪ್ಟೆಂಬರ್ 4ನೇ ತಾರೀಖಿಗೆ ಗವರ್ನರ್ ಹುದ್ದೆಯಿಂದ ಕೆಳಗಿಳಿದಾಗ ಅವರಿಗೆ ನಾಲ್ಕುದಿನದ ಸಂಬಳ ₹27,933 ನೀಡಲಾಗಿತ್ತು.

ಸೆಪ್ಟೆಂಬರ್5, 2013ರಲ್ಲಿ ರಾಜನ್ ಗವರ್ನರ್ ಹುದ್ದೆ ವಹಿಸಿಕೊಂಡಾಗ ಅವರ ಸಂಬಳ ₹1.69 ಲಕ್ಷ ಆಗಿತ್ತು. ಆಮೇಲೆ 2014ರಲ್ಲಿ ₹1.78 ಲಕ್ಷ ಮತ್ತು 2015 ಮಾರ್ಚ್ ತಿಂಗಳಲ್ಲಿ ₹1.87 ಲಕ್ಷವಾಗಿ ಏರಿಕೆ ಮಾಡಲಾಗಿತ್ತು.

ಪ್ರಸ್ತುತ ವರ್ಷ ಜನವರಿಯಲ್ಲಿ ₹2.04 ಲಕ್ಷವಿದ್ದ ಅವರ ಸಂಬಳವನ್ನು ₹2.09 ಲಕ್ಷ ಆಗಿ ಏರಿಕೆ ಮಾಡಲಾಗಿತ್ತು ಎಂದು ಆರ್‍‍ಟಿಐ ಪ್ರಶ್ನೆಗೆ ಉತ್ತರಿಸಲಾಗಿದೆ.

ರಾಜನ್ ಅವರಿಗೆ ಮೂರು ಕಾರು ಮತ್ತು 4 ಚಾಲಕರನ್ನು ನೀಡಲಾಗಿತ್ತು. ಮುಂಬೈನಲ್ಲಿ ಬ್ಯಾಂಕ್ ಬಂಗ್ಲೆಯಲ್ಲಿ ವಾಸಿಸುತ್ತಿದ್ದ ಅವರು 9 ಸಹಾಯಕರನ್ನಿಟ್ಟುಕೊಂಡಿದ್ದರು.

ಇತ್ತೀಚೆಗೆ ಆರ್‍‌ಬಿಐ ಗವರ್ನರ್ ಹುದ್ದೆ ನೇಮಕಾತಿ ಪ್ರಕ್ರಿಯೆಯ ಮಾಹಿತಿಗಳನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರ ನಿರಾಕರಿಸಿತ್ತು.

ರಾಜನ್ ಅವರು ಆರ್‍‌ಬಿಐ ಗವರ್ನರ್ ಹುದ್ದೆಯಿಂದ ನಿರ್ಗಮಿಸಿದ ನಂತರ ಆಗಸ್ಟ್ 20ರಂದು ಉರ್ಜಿತ್ ಅಧಿಕಾರ ಸ್ವೀಕರಿಸಿದ್ದರು.

Comments are closed.