ಮೀರಟ್: ಐಎಎಸ್ ಟಾಪರ್ಸ್ ಟೀನಾ ಡಾಬಿ ಮತ್ತು ಅಥರ್ ಆಮೀರ್ ಉಲ್ ಶಫಿ ಖಾನ್ ಅವರ ಅಂತರಧರ್ಮೀಯ ವಿವಾಹಕ್ಕೆ ಹಿಂದೂ ಮಹಾಸಭಾ ತಗಾದೆ ತೆಗೆದಿದೆ. ಅಥರ್ ಆಮೀರ್ ಖಾನ್ ಹಿಂದೂ ಧರ್ಮಕ್ಕೆ ಮತಾಂತರವಾದ ಬಳಿಕ ವಿವಾಹ ನಡೆಸಿ ಎಂದು ಹಿಂದೂ ಮಹಾಸಭಾ ಟೀನಾ ಪೋಷಕರಿಗೆ ಪತ್ರ ಬರೆದಿದೆ.
‘ಅಂತರಧರ್ಮೀಯ ವಿವಾಹಕ್ಕೆ ನಿಮ್ಮ ಕುಟುಂಬ ಮುಂದಾಗಿರುವುದು ಲವ್ ಜಿಹಾದ್‍ಗೆ ಉತ್ತೇಜನ ಕೊಟ್ಟಂತಾಗುತ್ತದೆ. ಅಲ್ಲದೆ ಈ ವಿವಾಹ ನಡೆಯಲು ನಾವು ಅವಕಾಶ ಕೊಡುವುದಿಲ್ಲ. ಒಂದು ವೇಳೆ ಈ ವಿವಾಹ ನಡೆಯಬೇಕು ಎಂದಾದರೆ ಆಮೀರ್ ಹಿಂದೂ ಧರ್ಮಕ್ಕೆ ಮತಾಂತರವಾಗಲಿ. ಆ ನಂತರ ಮದುವೆ ನಡೆಯಲಿ’ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುನ್ನಾ ಕುಮಾರ್ ಶರ್ಮಾ ಪತ್ರದಲ್ಲಿ ತಿಳಿಸಿದ್ದಾರೆ.
2015ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲ ಮತ್ತು ಎರಡನೇ ರ್ಯಾಂಕ್ ಪಡೆದಿರುವ ಟಿನಾ ಮತ್ತು ಆಮೀರ್ ಮೊದಲು ಭೇಟಿಯಾಗಿದ್ದು ‘ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಫಾರ್ ಆಡ್ಮಿನಿಸ್ಟ್ರೇಶನ್’ ತರಬೇತಿ ಕೇಂದ್ರದಲ್ಲಿ. ತರಬೇತಿಗಾಗಿ ಇಲ್ಲಿಗೆ ಬಂದಿದ್ದ ಟೀನಾ ಮತ್ತು ಆಮೀರ್ ಪ್ರೇಮದ ಬಲೆಯಲ್ಲಿ ಬಂಧಿಯಾದರು.