ರಾಷ್ಟ್ರೀಯ

ವಿಶ್ವದ ಅತ್ಯಂತ ಅಗ್ಗದ ಸ್ಮಾರ್ಟ್’ಫೋನ್ ‘ಫ್ರೀಡಂ-251’ ಏನಾಯಿತು ಗೊತ್ತಾ..?

Pinterest LinkedIn Tumblr

freedom-251

ನವದೆಹಲಿ: ದೇಶದಾದ್ಯಂತ ಸಂಚಲನ ಮೂಡಿಸಿದ್ದ ಅಗ್ಗದ ಸ್ಮಾರ್ಟ್ ಫೋನ್ ಫ್ರೀಡಂ 251 ಎಲ್ಲಿ ಹೋಯ್ತು? ಕೇವಲ ₹251 ಬೆಲೆಯಿರುವ ಈ ಸ್ಮಾರ್ಟ್ ಫೋನ್‍ನ್ನು ನೋಯ್ಡಾ ಮೂಲದ ಕಂಪನಿ ತಯಾರಿಸಿತ್ತು. ಸರಿ ಸುಮಾರು 2,00,000 ಫೋನ್‍ಗಳನ್ನು ಗ್ರಾಹಕರಿಗೆ ಒದಗಿಸುವುದಾಗಿ ಭರವಸೆ ನೀಡಿದ್ದ ಈ ಕಂಪನಿ ಆಮೇಲೆ ಸುದ್ದಿಯಾಗಲೇ ಇಲ್ಲ. ಮುಂಗಡ ಕಾಯ್ದಿರಿಸಿದರೆ ಮಾತ್ರ ಸ್ಮಾರ್ಟ್ ಫೋನ್ ತಮ್ಮದಾಗಿಸಿಕೊಳ್ಳಬಹುದು ಎಂದು ಕಂಪನಿ ಜಾಹೀರಾತು ನೀಡಿದ್ದರಿಂದ ಜನ ಮುಗಿಬಿದ್ದು ಸ್ಮಾರ್ಟ್ ಫೋನ್‍ಗೆ ಆರ್ಡರ್ ನೀಡಿದ್ದರು.

ಜುಲೈ ತಿಂಗಳಲ್ಲಿ 5,000 ಫೋನ್‍ಗಳನ್ನು ನೀಡಿರುವುದಾಗಿ ಹೇಳಿದ್ದ ರಿಂಗಿಂಗ್ ಬೆಲ್ಸ್ ಪ್ರೈ.ಲಿಮಿಟೆಡ್ ಕಂಪನಿ, ಗ್ರಾಹಕರು ಕ್ಯಾಶ್ ಆನ್ ಡೆಲಿವರಿ ಮೂಲಕ ಹಣ ಪಾವತಿ ಮಾಡುವ ವಿಧಾನ ಆಯ್ಕೆ ಮಾಡಿದ್ದರೆ 65,000 ಕ್ಕಿಂತ ಹೆಚ್ಚು ಫೋನ್‍ಗಳನ್ನು ವಿತರಣೆ ಮಾಡುವುದಾಗಿ ಹೇಳಿತ್ತು. ಆದರೆ ಇದರ ನಂತರ ಪ್ರಸ್ತುತ ಕಂಪನಿ ಫೋನ್‌ಗಳ ಲೆಕ್ಕವನ್ನಾಗಲೀ, ಗ್ರಾಹಕರಿಗೆ ವಿತರಣೆ ಮಾಡಿರುವ ಫೋನ್‍ಗಳ ಬಗ್ಗೆಯಾಗಲೀ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

2016ರಲ್ಲಿ ಅತೀ ಹೆಚ್ಚು ಸುದ್ದಿ ಮಾಡಿದ ಸ್ಮಾರ್ಟ್ ಫೋನ್ ಆಗಿತ್ತು ಫ್ರೀಡಂ 251. ಆಮೇಲೆ ಅದೇನಾಯಿತು?
ಜನರಿಗೆ ಈ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ತಂತ್ರಜ್ಞಾನದ ಮಾಹಿತಿ ಇರುವವರು ಇದನ್ನು ಪ್ರಶ್ನಿಸಿದ್ದರು. ಕೆಲವರು ಕುತೂಹಲಕ್ಕಾಗಿ ಫೋನ್ ಬುಕ್ಕಿಂಗ್ ಮಾಡಿದ್ದರೂ, ಆಮೇಲೆ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅಂತಾರೆ ಸೈಬರ್ ಮೀಡಿಯಾ ರಿಸರ್ಚ್‍ನ ಪ್ರಧಾನ ವಿಶ್ಲೇಷಕ ಫೈಸಲ್ ಕವೂಸಾ.

ಜೂನ್ 30ರೊಳಗೆ 2.5 ಲಕ್ಷ ಹ್ಯಾಂಡ್‍ಸೆಟ್‍ಗಳನ್ನು ವಿತರಣೆ ಮಾಡಲು ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ರಿಂಗಿಂಗ್ ಬೆಲ್ಸ್ ಕಂಪನಿ ಫೆಬ್ರವರಿ ತಿಂಗಳಲ್ಲಿ ಹೇಳಿತ್ತು. ಅಷ್ಟರೊಳಗೆ 70 ಲಕ್ಷ ಜನರು ಫೋನ್‍ ಖರೀದಿಗಾಗಿ ಮುಂಗಡ ಬುಕ್ಕಿಂಗ್ ಮಾಡಲು ಮುಗಿಬಿದ್ದಿದ್ದರಿಂದ ಪೇಮೆಂಟ್ ಗೇಟ್‍ವೇ ಕೂಡಾ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿತ್ತು.

ತಂತ್ರಜ್ಞಾನದ ಯುಗದಲ್ಲಿ ಇದೊಂದು ದೊಡ್ಡ ನಿರಾಶಾದಾಯಕ ವಿಷಯ ಎಂದು ಹೇಳುವ ಬದಲು ಇದೊಂದು ದೊಡ್ಡ ವಂಚನೆ ಎಂದು ಕವೂಸಾ ಹೇಳಿದ್ದಾರೆ.

ಸರ್ಕಾರವೂ ಈ ಫೋನ್‍ ತಯಾರಿಸಬಹುದು. ಆದರೆ ನಮ್ಮ ಬ್ರಾಂಡ್ ಹೆಸರಡಿಯಲ್ಲೇ ತಯಾರಿಸಬೇಕಾಗುತ್ತೆ. ಇದರ ಬಗ್ಗೆ ನನಗೇನೂ ಅಭ್ಯಂತರವಿಲ್ಲ, ಎಲ್ಲ ಭಾರತೀಯನಿಗೆ ಸುಲಭವಾಗಿ ಲಭಿಸುವಂತೆ ಮಾಡಲು ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆಯಿಂದ ಒಂದಷ್ಟು ಮೊತ್ತವನ್ನು ನೀಡಬೇಕಾಗುತ್ತದೆ ಎಂದು ರಿಂಗಿಂಗ್ ಬೆಲ್ಸ್ ಸಿಇಒ ಮೋಹಿತ್ ಗೋಯೆಲ್ ಹೇಳಿದ್ದರು.

ಸಾಮಾನ್ಯ ಫೋನ್‍ಗಳಿಂದ ದೇಶದ ಜನರು ಸ್ಮಾರ್ಟ್ ಫೋನ್‍ನತ್ತ ವಾಲುತ್ತಿದ್ದಾರೆ. ಅವರಿಗೆ ಹೆಚ್ಚೆಚ್ಚು ವಿಷಯಗಳನ್ನು ಸಂಗ್ರಹಿಸಲು ಸಾಧ್ಯವಾಗುವ, ವಿಡಿಯೋ ನೋಡುವ, ಹಾಡು ಕೇಳುವ, ಹೆಚ್ಚು ಬಾಳಿಕೆ ಬರುವ ಫೋನ್‍ಗಳ ಅಗತ್ಯವಿರುತ್ತದೆ. ಇಂಥಾ ಫೋನ್‌ಗಳಿಗೆ ಉತ್ತಮ ಹಾರ್ಡ್‍ವೇರ್ ಕೂಡಾ ಅಗತ್ಯವಿರುತ್ತದೆ.

ಈ ಎಲ್ಲ ವೈಶಿಷ್ಟ್ಯಗಳಿರುವ ಫೋನ್ ತಯಾರಿಸಲು ಮೂರ್ನಾಲ್ಕು ಸಾವಿರ ರೂಪಾಯಿ ಬೇಕು. ಹೀಗಿರುವಾಗ 251 ರೂಪಾಯಿಯಲ್ಲಿ ಫೋನ್ ತಯಾರಿಸಲು ಸಾಧ್ಯವಿಲ್ಲ. ಫ್ರೀಡಂ 251 ಗ್ರಾಹಕರ ಬೇಡಿಕೆಯನ್ನು ಪೂರೈಸಲು ವಿಫಲವಾಗಿದೆ. ಆದ್ದರಿಂದ ಕಂಪನಿಯು ಪ್ರಿ ಆರ್ಡರ್‍ ರದ್ದು ಗೊಳಿಸಿ, ಜನರಿಗೆ ಅವರ ಹಣವನ್ನು ಹಿಂತಿರುಗಿಸಬೇಕಿದೆ ಎಂದು ನವದೆಹಲಿ ಮೂಲದ ಕೌಂಟರ್ ಪಾಯಿಂಟ್ ರಿಸರ್ಚ್‍ನ ರಿಸರ್ಚ್ ಅಸೋಸಿಯೇಟ್ ಪಾರ್ವ್ ಶರ್ಮಾ ಒತ್ತಾಯಿಸಿದ್ದಾರೆ.

ಜನರಿಗೆ ಭರವಸೆ ನೀಡಿ ಮೋಸ ಮಾಡುವ ಕಂಪನಿಗಳ ಬಗ್ಗೆ ಸರ್ತಾರ ಎಚ್ಚೆತ್ತು ಕೊಳ್ಳಬೇಕು. ಹೀಗಿರುವ ಕಂಪನಿಗಳಿಗೆ ಸರ್ಕಾರ ಬೆಂಬಲ ನೀಡಲೇ ಬಾರದು. ಗ್ರಾಹಕರ ಹಿತವನ್ನು ಕಾಯುವ ಹಲವಾರು ಕಾನೂನುಗಳು ನಮ್ಮ ದೇಶದಲ್ಲಿವೆ ಎಂದಿದ್ದಾರೆ ಶರ್ಮಾ.

₹2,000 ಗಿಂತ ಕಡಿಮೆ ವೆಚ್ಚದಲ್ಲಿ ಯಾವುದೇ ಸ್ಮಾರ್ಟ್ ಫೋನ್‍ಗಳನ್ನು ತಯಾರಿಸಲು ಸಾಧ್ಯವಿಲ್ಲ ಎಂದು ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ರಿಂಗಿಂಗ್ ಬೆಲ್ಸ್ ನ ಸ್ಮಾರ್ಟ್ ಫೋನ್ ಗುಣಮಟ್ಟದ ಬಗ್ಗೆ ಸಂದೇಹಗಳು ಎದ್ದಿದ್ದವು.

Comments are closed.