ರಾಷ್ಟ್ರೀಯ

ಕಪ್ಪುಹಣ ಘೋಷಣೆ ತಡ ಮಾಡಿದರೆ, ಶೇ.90ರಷ್ಟು ತೆರಿಗೆ!

Pinterest LinkedIn Tumblr

noteನವದೆಹಲಿ: 500 ಮತ್ತು 1000 ರು. ನೋಟುಗಳನ್ನು ನಿಷೇಧಿಸಿ ಕಾಳಧನಿಕರ ಮೇಲೆ ಹೋರಾಟ ಎಂದು ಹೇಳುತ್ತಿದ್ದ ಕೇಂದ್ರ ಸರ್ಕಾರ ಈಗ ತನ್ನ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ತಾನು ನಿಗದಿ ಪಡಿಸಿರುವ ಅವಧಿಯಲ್ಲಿ ಕಪ್ಪುಹಣ ಘೋಷಣೆ ಮಾಡದ ಕಾಳಧನಿಕರಿಗೆ ಶೇ.90ರಷ್ಟು ತೆರಿಗೆಯೊಂದಿಗೆ, ಶಿಕ್ಷೆ ವಿಧಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸ್ವಯಂ ಪ್ರೇರಿತರಾಗಿ ಕಪ್ಪುಹಣ ಘೋಷಣೆ ಮಾಡುವವರ ವಿರುದ್ಧ ಶೇ.50ರಷ್ಟು ತೆರಿಗೆ ವಿಧಿಸಿ ಮುಂದಿನ ನಾಲ್ಕು ವರ್ಷಗಳ ಕಾಲ ಆ ಹಣವನ್ನು ಬಳಕೆ ಮಾಡದಂತೆ ನಿರ್ಬಂಧ ಹೇರುವ ಕುರಿತು ನಿರ್ಧರಿಸಿದೆ. ಆದರೆ ಈ ಹಂತದಲ್ಲೂ ಕಪ್ಪುಹಣ ಘೋಷಣೆ ಮಾಡದ ಕಾಳಧನಿಕರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿರುವ ಕೇಂದ್ರ ಶೇ.90ರಷ್ಟು ತೆರಿಗೆಯೊಂದಿಗೆ ಶಿಕ್ಷೆ ವಿಧಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ತುರ್ತು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಮುಂದಿನ ವಾರ ಆದಾಯ ತೆರಿಗೆ ಕಾಯಿದೆಗೆ ತಿದ್ದುಪಡಿಯನ್ನು ತರಲಿದೆ ಎನ್ನಲಾಗಿದೆ. ಚಳಿಗಾಲದ ಅಧಿವೇಶನದಲ್ಲೇ ಹೊಸ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಮಂಡಿಸಲಿದ್ದು, ಉಭಯ ಸದನಗಳ ಅನುಮೋದನೆ ಪಡೆದು ಕಾಯ್ದೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಇನ್ನು ಅಕ್ರಮ ಚಿನ್ನದ ಮೇಲೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿರುವ ಕೇಂದ್ರ, ಪ್ರಸ್ತುತ ಅಂತಹ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

Comments are closed.