ಕಾಶ್ಮೀರ: ನೋಟು ನಿಷೇಧ ಕುರಿತಂತೆ ಒಂದೆಡೆ ವಿರೋಧ ಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಪ್ರತಿಭಟನೆಗಳನ್ನು ತೀವ್ರಗೊಳಿಸುತ್ತಿದ್ದರೆ, ಮತ್ತೊಂದೆಡೆ ಮೋದಿಯವರು ಕಠಿಣ ನಿರ್ಧಾರಕ್ಕೆ ಬೆಂಬಲಗಳು ವ್ಯಕ್ತವಾಗತೊಡಗಿವೆ.
ಕೇಂದ್ರ ಸರ್ಕಾರದ ನಿರ್ಧಾರ ವಿರುದ್ಧ ಬಾಯಿಬಡಿದುಕೊಳ್ಳುತ್ತಿರುವ ಪ್ರತಿಪಕ್ಷಗಳಿಗೆ ಬಾಯಿಮುಚ್ಚಿಸುವ ಅಸ್ತ್ರಗಳು ಈಗಷ್ಟೇ ಬಹಿರಂಗಗೊಳ್ಳಲು ಆರಂಭವಾಗಿದೆ.
ಈ ಹಿಂದಷ್ಟೇ ಪ್ರಧಾನಮಂತ್ರಿ ಮೋದಿಯವರು 500 ಮತ್ತು 1000 ರೂ ನೋಟುಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ನಡೆಯನ್ನು ರೇಟ್ ಮಾಡಿ ತಮ್ಮ ವೈಯಕ್ತಿಕ ಅನುಭವದ ನಿಲುವನ್ನು ತಿಳಿಸುವಂತೆ ಸಾರ್ವಜನಿಕರ ಬಳಿ ಮನವಿ ಮಾಡಿಕೊಂಡಿದ್ದರು.
ಮೋದಿಯವರ ಮನವಿಯಂತೆ ಸಾರ್ವಜನಿಕರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದು, ಶೇ.90 ರಷ್ಟು ಜನರು ನೋಟು ನಿಷೇಧಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಕಪ್ಪುಹಣ ನಿರ್ನಾಮಕ್ಕೆ ರು.500 ಹಾಗೂ 1,000 ನೋಟುಗಳ ಮೇಲಿನ ನಿಷೇಧ ಸೂಕ್ತ ಕ್ರಮ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಕಾಶ್ಮೀರಿ ಮುಸ್ಲಿಮರು ಬರೆದಿರುವ ಪತ್ರವೊಂದು ಪ್ರಧಾನಿ ಮೋದಿಯವರ ನಡೆಗೆ ಮತ್ತಷ್ಟು ಬಲವನ್ನು ನೀಡಿದಂತಾಗಿದೆ.
ನೋಟು ನಿಷೇಧ ನಿರ್ಧಾರ ಬೆಂಬಲಿಸಿ ಅಫ್ಜಲ್ ರೆಹ್ಮಾನ್ ಎಂಬುವವರು ಪ್ರಧಾನಿ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದು, ಈ ಪತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಫ್ಜಲ್ ರೆಹ್ಮಾನ್ ಅವರು ಮೋದಿಯವರಿಗೆ ಬರೆದಿರುವ ಪತ್ರದ ಸಾರಾಂಶ ಈ ಕೆಳಗಿನಂತಿದೆ…
ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿರುವ ಜನರ ಜೀವನ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಷ್ಟು ಕಠೋರವಾಗಿದೆ. ಪ್ರತೀನಿತ್ಯ ಪ್ರತ್ಯೇಕತಾವಾದಿಗಳು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ವಾಗ್ವಾದಗಳು ನಡೆಯುತ್ತಲೇ ಇರುತ್ತದೆ. ದಿನಗೂಲಿ ಕೆಲಸಕ್ಕೆ ಹೋಗಿ ದುಡಿಯುವ ಜನರ ಸಂಕಷ್ಟ ಹೇಳತೀರದಂತಹ ಪರಿಸ್ಥಿತಿ ಎದುರಾಗಿದೆ. ಎಷ್ಟೇ ಕಷ್ಟಗಳು ಎದುರಾದರೂ ನಾವು ಇಲ್ಲಿಯೇ ನೆಲೆಯೂರಿದ್ದೇವೆ.
ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು, ನನ್ನ ಹೆಸರು ಅಫ್ಜಲ್ ರೆಹ್ಮಾನ್. 4 ಮಕ್ಕಳ ತಂದೆ. ಭಾರತೀಯನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಶ್ರೀನಗರದಲ್ಲಿ ಗಾರ್ಮೆಂಟ್ಸ್ ಅಂಗಡಿ ನಡೆಸುತ್ತಿದ್ದೇನೆ. ಸಾಕಷ್ಟು ಬೆದರಿಕೆಗಳು ಬಂದಿದ್ದರೂ, ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ಹಿಂದೆ ಸರಿದಿಲ್ಲ. ನನ್ನ ಮಗಳು 12 ತರಗತಿಯಲ್ಲಿ ಓದುತ್ತಿದ್ದು, ಈ ವರ್ಷ ಆಕೆಯ ಭವಿಷ್ಯಕ್ಕೆ ಅತ್ಯಂತ ಪ್ರಮುಖವಾದ ವರ್ಷವಾಗಿದೆ. ಕಾಶ್ಮೀರದಲ್ಲಿ ಹಿಂಸಾಚಾರ ಆರಂಭವಾಗಿ 4 ತಿಂಗಳು ಕಳೆದಿದ್ದರೂ, ಇಂದಿಗೂ ಪರಿಸ್ಥಿತಿ ಸುಧಾರಿಸಿಲ್ಲ. 4 ತಿಂಗಳಿನಿಂದಲೂ ಯಾವುದೇ ರೀತಿಯ ವ್ಯವಹಾರ ಚಟುವಟಿಕೆಗಳು ನಡೆಸುತ್ತಿಲ್ಲ. ಪ್ರತೀನಿತ್ಯ ಕರ್ಫ್ಯೂ ಜಾರಿಯಲ್ಲಿಯೇ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಡವರು, ಮಧ್ಯಮ ವರ್ಗದ ಜನರು ಜೀವನ ನಡೆಸುವುದಾದರೂ ಹೇಗೆ? ಕೆಲ ಉಳಿತಾಯ ಮಾಡಿದ್ದ ಹಣದಿಂದ ಮನೆಯನ್ನು ನೋಡಿಕೊಳ್ಳುತ್ತಿದ್ದೇನೆ.
ಈ ವರ್ಷ ಆಕೆಯ ಭವಿಷ್ಯಕ್ಕೆ ಅತ್ಯಂತ ಪ್ರಮುಖ ವರ್ಷವಾಗಿದ್ದರೂ ಹಿಂಸಾಚಾರ, ಕರ್ಫ್ಯೂವಿನಿಂದಾಗಿ ನನ್ನ ಮಗಳು ಸಾಕಷ್ಟು ದಿನಗಳಿಂದ ಶಾಲೆಗೆ ಹೋಗುತ್ತಿಲ್ಲ. ಹೆಗಲಿಗೆ ಬಂದಿರುವ ನನ್ನ ಮಗ ಈಗಲೂ ನಿರುದ್ಯೋಗಸ್ಥನಾಗಿದ್ದಾನೆ. ಪ್ರತ್ಯೇಕತಾವಾದಿಗಳ ಬಳಿ ಹಣವನ್ನು ಪಡೆದು ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲುತೂರಾಟವನ್ನು ನಡೆಸುತ್ತಿರುತ್ತಾನೆ. ದುಡಿದು ಸಂಪಾದನೆ ಮಾಡಲು ದಾರಿಯಿಲ್ಲದಿದ್ದರೆ, ವ್ಯಕ್ತಿ ಇನ್ನೇನು ಮಾಡುತ್ತಾನೆ?
ನನಗೆ ಅರಿವಿಲ್ಲದೆಯೇ ನನ್ನ ಮಗ ದುಡ್ಡು ಪಡೆದು ಕಲ್ಲು ತೂರಾಟ ನಡೆಸುತ್ತಿದ್ದ. ಭದ್ರತಾ ಸಿಬ್ಬಂದಿಗಳು ಪೆಲೆಟ್ ಗನ್ ಮೂಲಕ ಆತನ ಮೇಲೆ ಗುಂಡು ಹಾರಿಸಿದಾಗ ಈ ವಿಚಾರ ನನ್ನ ಗಮನಕ್ಕೆ ಬಂದಿತ್ತು.
ನಮ್ಮ ಜೀವನ ಅತ್ಯಂತ ಹೀನಾಯವಾಗಿದ್ದು, ಕಾಶ್ಮೀರದಲ್ಲಿರುವ ಶಾಲೆಗಳಿಗೆ ಬೆಂಕಿ ಹಚ್ಚಲು ಆರಂಭಿಸಿದ್ದಾರೆ. ಈ ವರೆಗೂ 29 ಶಾಲೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಪಟ್ಟಿಯಲ್ಲಿ ನನ್ನ ಮಗಳ ಶಾಲೆ ಕೂಡ ಇದೆ. ನವೆಂಬರ್ 8 ರಂದು ರೇಡಿಯೋ ಮೂಲಕ ಸುದ್ದಿಯೊಂದನ್ನು ಕೇಳಿದ್ದೆ, ರು.500 ಹಾಗೂ 1,000 ಮುಖಬೆಲೆ ನೋಟಿನ ಮೇಲೆ ನಿಷೇಧ ಹೇರಿಕೆ ಮಾಡಿರುವುದಾಗಿ ತಿಳಿಯಿತು. ನಿರ್ಧಾರ ಸಾಕಷ್ಟು ಆಘಾತವನ್ನುಂಟು ಮಾಡಿತು. ನಮ್ಮ ಬಳಿ ಕೇವಲ ಸ್ವಲ್ಪ ಹಣವಿದ್ದು, ಅದೂ ರು.500 ನೋಟುಗಳಾಗಿದೆ. ಹಿಂಸಾಚಾರದಿಂದಾಗಿ ಕಾಶ್ಮೀರದಲ್ಲಿ ನೋಟು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಭಾರತದಲ್ಲಿರುವ ಪ್ರತೀಯೊಬ್ಬರು ಇಂದು ಕಪ್ಪುಹಣದ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ, ನಾವು ಹೇಗೆ ಬದುಕುವುದು ಎಂಬುದರ ಬಗ್ಗೆ ಚಿಂತಿಸುತ್ತಿದ್ದೆವು. ನಿಮ್ಮ ನಿರ್ಧಾರದಿಂದ ನಮಗೆ ಜೀವ ಬರುತ್ತದೆ ಎಂಬುದರ ಬಗ್ಗೆ ನಾವು ಚಿಂತಿಸಿರಲಿಲ್ಲ. ಇದೀಗ ನಿಮ್ಮ ನಿರ್ಧಾರ ನಮಗೆ ಜೀವನ ಕೊಟ್ಟಿದೆ.
ಬ್ಯಾಂಕಿನ ಎದುರು ಸಾಲಿನಲ್ಲಿ ನಿಲ್ಲುವುದಕ್ಕೆ ಕೆಲವರು ನೋವು ಪಡುತ್ತಿರಬಹುದು. ಆದರೆ, ನಾವು ಸಾಲಿನಲ್ಲಿ ನಿಲ್ಲುವುದಕ್ಕೆ ಬಹಳ ಸಂತೋಷವಾಗುತ್ತಿದೆ.
ನನ್ನ ಮಗಳ ಪರೀಕ್ಷೆಗೆ ಬಗ್ಗೆ ಚಿಂತೆ ಮಾಡುತ್ತಿದ್ದೆ. ಇದೀಗ ನನ್ನ ಮಗಳು ಪರೀಕ್ಷೆಯನ್ನು ಬರೆದಿದ್ದಾಳೆ. ಕೇವಲ ನನ್ನ ಮಗಳೊಬ್ಬಳೇ ಅಲ್ಲ, ಸಾಕಷ್ಟು ಜನರು ಸಂತಸದಿಂದ ಪರೀಕ್ಷೆಯನ್ನು ಬರೆದಿದ್ದಾರೆ. ಶೇ.95 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಇಂದು ಕಾಶ್ಮೀರದಲ್ಲಿ ಧನಾತ್ಮಕ ಬೆಳವಣಿಗೆಗಳು ಕಂಡು ಬರುತ್ತಿದೆ. ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳ ಬಳಿ ಇಂದು ಕೇವಲ ರು.500 ಹಾಗೂ 1,000 ನೋಟುಗಳಿವೆ. ಇದೀಗ ಆ ನೋಟುಗಳನ್ನು ಯಾರೂ ತೆಗೆದುಕೊಳ್ಳಿತ್ತಿಲ್ಲ. ನೋಟು ನಿಷೇಧದ ಬಗ್ಗೆ ಭಾರತದಲ್ಲಿರುವ ಇತರರು ಏನು ಚಿಂತಿಸುತ್ತಿದ್ದಾರೋ ಗೊತ್ತಿಲ್ಲ. ಆದರೆ, ಕಾಶ್ಮೀರದಲ್ಲಿರುವ ಜನತೆ ಮಾತ್ರ ನಿರ್ಧಾರದಿಂದ ಸಾಕಷ್ಟು ಸಂತಸ ವ್ಯಕ್ತಪಡಿಸುತ್ತಿದೆ ಎಂದು ಪತ್ರದಲ್ಲಿ ಅಫ್ಜಲ್ ರೆಹ್ಮಾನ್ ಹೇಳಿಕೊಂಡಿದ್ದಾರೆ.