ರಾಷ್ಟ್ರೀಯ

ಡಿಸೆಂಬರ್ 1ರಂದು ದೇಶದ 10 ಕೋಟಿ ವೇತನದಾರರು ಹೇಗೆ ಸಂಬಳ ಪಡೆಯುತ್ತಾರೆ?

Pinterest LinkedIn Tumblr

salary_hikeನವದೆಹಲಿ(ನ.23): ನೋಟು ರದ್ದು ಮಾಡಿದ ನಂತರದ ಪರಿಸ್ಥಿತಿ ನಿಭಾಯಿಸಲು ಹಲವು ಬಾರಿ ನಿಯಮಗಳನ್ನು ಸಡಿಲಿಸಿ ಮಾರ್ಪಡಿತ ಆದೇಶ ಹೊರಡಿಸುತ್ತಲೇ ಇರುವ ಕೇಂದ್ರ ಸರ್ಕಾರಕ್ಕೆ ಡಿಸೆಂಬರ್ 1ರಿಂದ ನಿಜವಾದ ಅಗ್ನಿ ಪರೀಕ್ಷೆ ಎದುರಾಗಲಿದೆ.
ದೇಶದಲ್ಲಿರುವ ಸುಮಾರು 10 ಕೋಟಿ ವೇತನದಾರರು ಅಂದು ತಮ್ಮ ವೇತನ ಪಡೆಯಲು ಎಟಿಎಂ ಮತ್ತು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಲ್ಲಲಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರಗಳ ಉದ್ಯೋಗಿಗಳು ಮತ್ತು ಪಿಂಚಣಿದಾರರ ಸಂಖ್ಯೆಯೇ 2.50 ಕೋಟಿಯಷ್ಟಿದೆ. ಉಳಿದಂತೆ ಖಾಸಗಿ ವಲಯದಲ್ಲಿರುವ ಸಂಬಳದಾರರ ಪ್ರಮಾಣ 7.5 ಕೋಟಿ ಎಂಬುದು ಅಂದಾಜು.
ಅಂದರೆ, ಇದೀಗ ಬ್ಯಾಂಕುಗಳು ಮತ್ತು ಎಟಿಎಂ ಮುಂದೆ ಸಾಲುಗಟ್ಟಿ ನಿಲ್ಲುವವರ ಸಂಖ್ಯೆನಿಧಾನವಾಗಿ ತಗ್ಗಿದರೂ ಡಿಸೆಂಬರ್1ರಿಂದ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಸಂಬಳ ಪಡೆಯುವವರ ಪೈಕಿ ಶೇ.50ರಷ್ಟು ಮಂದಿ ಬ್ಯಾಂಕಿಗೆ ತೆರಳಿದರೂ ಆ ಸಂಖ್ಯೆ 5 ಕೋಟಿ ಮೀರುತ್ತದೆ.
ಕೇಂದ್ರ ಸರ್ಕಾರ ನೋಟು ರದ್ದು ಮಾಡಿದ್ದು ನವೆಂಬರ್ 8. ಅಷ್ಟರೊಳಗೆ ಬಹುತೇಕ ಸಂಬಳದಾರರು ತಮ್ಮ ಮಾಸಿಕ ವೆಚ್ಚಕ್ಕಾಗಿ ಹಣವನ್ನು ಬ್ಯಾಂಕುಗಳು, ಎಟಿಎಂ ಮೂಲಕ ಹಿಂಪಡೆದಿದ್ದರು. ಹಳೆ ನೋಟು ರದ್ದು ಮಾಡುವ ವೇಳೆಗೆ ಸಂಬಳದಾರರು ಬಹುತೇಕ ಹಣ ಹಂಪಡೆದಿದ್ದರಿಂದ ಸರತಿಯಲ್ಲಿ ನಿಂತಿರಲಿಲ್ಲ.
ಆದರೆ, ಡಿಸೆಂಬರ್ 1ರ ನಂತರ ಸರ್ಕಾರದ ಮುಂದೆ ದೊಡ್ಡ ಸವಾಲು ಎದುರಾಗಲಿದೆ. ಈಗ ಸರ್ಕಾರ, ಖಾಸಗಿ ವಲಯ ಸೇರಿದಂತೆ ಎಲ್ಲಾ ಉದ್ಯೋಗಿಗಳಿಗೂ ಬ್ಯಾಂಕ್ ಖಾತೆಯ ಮೂಲಕವೇ ವೇತನ ಪಾವತಿಯಾಗುತ್ತಿದೆ. ಹೀಗಾಗಿ ಸರ್ಕಾರ ಮತ್ತೊಂದು ದೊಡ್ಡ ಸವಾಲು ಎದುರಿಸಲು ಸಿದ್ದವಾಗಬೇಕಿದೆ.
ಒಂದು ವೇಳೆ ಎಟಿಎಂಗಳು ಡಿಸೆಂಬರ್1ರವೇಳೆಗೆ ಪೂರ್ಣಪ್ರಮಾಣದಲ್ಲಿ ಸಿದ್ದವಾದರೂ, ಸಂಬಳದಾರರ ಮಾಸಿಕ ವೆಚ್ಚಕ್ಕೆ ಬೇಕಾಗುವಷ್ಟು ಹೊಸ ನೋಟುಗಳನ್ನು ಎಟಿಎಂಗಳಲ್ಲಿ ತುಂಬಲು ಸಾಧ್ಯವಾಗದು.
ಅಷ್ಟಕ್ಕೂ 10 ಕೋಟಿ ವೇತನದಾರರು ತಮ್ಮ ಮಾಸಿಕ ವೆಚ್ಚಕ್ಕೆಂದು ಸರಾಸರಿ 25,000 ಹಿಂಪಡೆಯುತ್ತಾರೆಂದರೆ ಸರ್ಕಾರ ಎಟಿಎಂ ಮತ್ತು ಬ್ಯಾಂಕುಗಳ ಮೂಲಕ 2,50,000 ಕೋಟಿ ನಗದು ಸರಬರಾಜು ಮಾಡಬೇಕಾಗುತ್ತದೆ.
ಈಗ ಎಟಿಎಂನಲ್ಲಿ 2000 ಮತ್ತು ಬ್ಯಾಂಕಿನಲ್ಲಿ 4000 ನಗದು ಮಿತಿ ಇದೆ. ಈ ಮಿತಿಯನ್ನು ಸರ್ಕಾರ ಸಡಿಲಿಸುವುದು ಅನಿವಾರ್ಯವಾಗುತ್ತದೆ. ಮನೆ ಬಾಡಿಗೆ, ವಿದ್ಯುತ್, ನೀರು, ಹಾಲು, ಪೇಪರ್, ದಿನಸಿ, ಕೇಬಲ್ ಮತ್ತಿತರ ಬಿಲ್‌ಗಳನ್ನು ಪಾವತಿಸಲು 2000 ಅಥವಾ 4000ದಿಂದ ಸಾಧ್ಯವಾಗದು.
ಈ ವಸ್ತುಸ್ಥಿತಿಯನ್ನು ಗಮನಿಸಿದರೆ ನೋಟು ಚಲಾವಣೆ ರದ್ದು ಮಾಡಿದ್ದ ನಿಜವಾದ ಪರಿಣಾಮ ಡಿಸೆಂಬರ್ 1ರಂದು ತಟ್ಟಲಿದೆ. ಆ ಪರಿಸ್ಥಿತಿಯನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ ಮತ್ತು ಜನರು ಹೇಗೆ ಸ್ವೀಕರಿಸುತ್ತಾರೆಂಬುದು ಕುತೂಹಲಕರ.
ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ನವೆಂಬರ್ 18ರವರೆಗೆ ಎಟಿಎಂನಲ್ಲಿ ವಿತರಿಸದ ಹಣ 10,3000 ಲಕ್ಷ ಕೋಟಿ. ಹತ್ತು ದಿನಗಳಲ್ಲಿ ಸರಾಸರಿ ದಿನಕ್ಕೆ 10000 ಕೋಟಿ ವಿತರಿಸಲಾಗಿದೆ. ಆದರೆ, ಡಿಸೆಂಬರ್ 1ರಿಂದ ಸಂಬಳದಾರರ ಕನಿಷ್ಠ ಬೇಡಿಕೆಯೇ 2,50,000 ಲಕ್ಷ ಕೋಟಿ ರುಪಾಯಿಗಳಷ್ಟಿರುತ್ತದೆ. ಇಷ್ಟು ದೊಡ್ಡ ಮೊತ್ತವನ್ನು ಸರಬರಾಜು ಮಾಡುವುದು ಅತಿದೊಡ್ಡ ಸವಾಲು.
ತ್ವರಿತ ಎಟಿಎಂ ಸಿದ್ದತೆ
ನೋಟು ಚಲಾವಣೆ ರದ್ದು ಮಾಡಿದ ಹದಿನಾಲ್ಕು ದಿನಗಳಲ್ಲಿ ಹೊಸ ವ್ಯವಸ್ಥೆಗೆ ಸಿದ್ದವಾದ ಎಟಿಎಂಗಳ ಪ್ರಮಾಣ ಶೇ.32ರಷ್ಟು ಮಾತ್ರ. ದೇಶವ್ಯಾಪಿ ಇರುವ 202000 ಎಟಿಎಂಗಳ ಪೈಕಿ ಹೊಸ 500 ಮತ್ತು 2000 ನೋಟುಗಳನ್ನು ವಿತರಿಸಲು ಸಿದ್ಧವಾಗಿರುವ ಎಟಿಎಂಗಳ ಸಂಖ್ಯೆ 65000 ಮಾತ್ರ.
ಪೂರ್ಣಪ್ರಮಾಣದಲ್ಲಿ ಸಿದ್ದವಾಗಲು ಇನ್ನೂ 12 ದಿನಗಳಾದರೂ ಬೇಕಾಗಬಹುದು. ಹಣಕಾಸು ಇಲಾಖೆ ಉನ್ನತಾಕಾರಿಗಳ ಪ್ರಕಾರ, ನಿತ್ಯವೂ 10000 ಎಟಿಎಂಗಳನ್ನು ಹೊಸ ವ್ಯವಸ್ಥೆಗೆ ಸಿದ್ದಪಡಿಸಲಾಗುತ್ತಿದೆ. ಅಂದರೆ, ಬಾಕಿ ಇರುವ ಸುಮಾರು 1,30,000 ಎಟಿಎಂಗಳನ್ನು ಸಿದ್ದಪಡಿಸಲು 12-13 ದಿನಗಳು ಬೇಕಾಗುತ್ತದೆ.

Comments are closed.