ರಾಷ್ಟ್ರೀಯ

2015ನೇ ಸಾಲಿನ ಐಎಎಸ್‌ ಟಾಪರ್ಸ್ ಅಂತರ ಧರ್ಮೀಯ ವಿವಾಹ

Pinterest LinkedIn Tumblr

teena

ನವದೆಹಲಿ: 2015ನೇ ಸಾಲಿನ ಐಎಎಸ್‌ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್‌ ಪಡೆದಿದ್ದ ಟೀನಾ ದಬಿ ಅವರು ಎರಡನೇ ರ್ಯಾಂಕ್‌ ಪಡೆದಿರುವ ಮುಸ್ಲಿಂ ಯುವಕ ಅಥರ್‌ ಆಮೀರ್–ಉಲ್‌–ಶಫಿ ಖಾನ್‌ ಅವರನ್ನು ವಿವಾಹವಾಗುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕೆಟ್ಟ ಸಂದೇಶಗಳು ಹರಿದಾಡುತ್ತಿವೆ.

ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲ ಮತ್ತು ಎರಡನೇ ರ್ಯಾಂಕ್‌ ಪಡೆದಿದ್ದ ಟಿನಾ ಮತ್ತು ಆಮೀರ್ ಮೊದಲು ಭೇಟಿಯಾಗಿದ್ದು ‘ಲಾಲ್‌ ಬಹದ್ದೂರ್‌ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಫಾರ್ ಆಡ್ಮಿನಿಸ್ಟ್ರೇಶನ್‌’ ತರಬೇತಿ ಕೇಂದ್ರದಲ್ಲಿ. ತರಬೇತಿಗಾಗಿ ಇಲ್ಲಿಗೆ ಬಂದಿದ್ದ ಟೀನಾ ಮತ್ತು ಆಮೀರ್‌ ಪ್ರೇಮದ ಬಲೆಯಲ್ಲಿ ಬಂಧಿಯಾದರು.

ಟೀನಾ ಮತ್ತು ಆಮೀರ್ ಪೋಷಕರು ಮದುವೆಗೆ ಹಸಿರು ನಿಶಾನೆ ತೋರಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ ಟೀನಾ ತಮ್ಮ ಪ್ರೇಮ ಮತ್ತು ಮದುವೆಯ ವಿಷಯವನ್ನು ಫೇಸ್‌ಬುಕ್‌ ಮತ್ತು ಟ್ವೀಟರ್‌ ಪುಟಗಳಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಅಂತರ ಧರ್ಮೀಯ ವಿವಾಹವನ್ನು ಕೆಲವರು ಸ್ವಾಗತಿಸಿದರೆ, ಮತ್ತೆ ಕೆಲವರು ಖಂಡಿಸಿ ಕೆಟ್ಟ ಕೆಟ್ಟ ಪದಗಳಲ್ಲಿ ಸಂದೇಶಗಳನ್ನು ಹಾಕುತ್ತಿದ್ದಾರೆ ಎಂದು ಟೀನಾ ನೊಂದು ನುಡಿಯುತ್ತಾರೆ.

ಜಾತಿ ನಿಂದನೆಯ ಜತೆಗೆ ಅಶ್ಲೀಲವಾಗಿ ನಿಂದಿಸುವಂತಹ ಸ್ಟೇಟಸ್‌ಗಳನ್ನು ಹಾಕುತ್ತಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಟೀನಾ ಇನ್ನು ಕೆಲವೇ ದಿನಗಳಲ್ಲಿ ಆಮೀರ್‌ ಅವರನ್ನು ವರಿಸುವುದಾಗಿ ಹೇಳುತ್ತಾರೆ.

Comments are closed.