ರಾಷ್ಟ್ರೀಯ

ಗ್ರಾಮೀಣ ಭಾಗಕ್ಕೆ ಒಂದೆರಡು ವಾರದಲ್ಲಿಯೇ ಹೊಸ ನೋಟು: ಅರುಣ್ ಜೇಟ್ಲಿ

Pinterest LinkedIn Tumblr

arun jetlyನವದೆಹಲಿ, ನ. ೨೨- ಒಂದು ಸಾವಿರ ಹಾಗೂ ಐನೂರು ಮುಖಬೆಲೆಯ ನೋಟು ರದ್ದತಿಯಿಂದ ಗ್ರಾಮೀಣ ಭಾಗದ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಿಸಲು ಮುಂದಿನ ಕೆಲವೇ ವಾರಗಳಲ್ಲಿ ಹೊಸ ನೋಟುಗಳನ್ನು ಸರಬರಾಜು ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಹಿಂಗಾರು ಬೆಳೆ ಸಂದರ್ಭದಲ್ಲಿ ಕೃಷಿ ವಲಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ರೈತರ ತೊಂದರೆ ನಿವಾರಣೆಗೆ ಶೀಘ್ರದಲ್ಲಿಯೇ ಹೊಸ ನೋಟುಗಳನ್ನು ಗ್ರಾಮೀಣ ಭಾಗಕ್ಕೆ ತಲುಪಿಸಲಾಗುವುದು ಎಂದು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡುತ್ತ ಸಚಿವ ಜೇಟ್ಲಿ ಹೇಳಿದ್ದಾರೆ.

ಈಗಾಗಲೇ ರೈತರು ಬಿತ್ತನೆ ಬೀಜ ಖರೀದಿಗೆ ಹಳೆಯ 500, 1000 ರೂ. ನೋಟುಗಳನ್ನು ಬಳಸಲು ಸರ್ಕಾರ ಅನುವು ಮಾಡಿಕೊಟ್ಟಿದ್ದು, ಬಿತ್ತನೆ ಬೀಜ ಖರೀದಿಯಲ್ಲಿ ರೈತ ಎದುರಿಸುತ್ತಿದ್ದ ಸಂಕಷ್ಟವನ್ನು ಸರ್ಕಾರ ದೂರ ಮಾಡಿದೆ. ಶೀಘ್ರದಲ್ಲಿ ಹೊಸ ನೋಟು ತಲುಪಿಸುವುದರಿಂದ ಕೃಷಿ ಕಾರ್ಯಗಳಿಗೆ ಈಗಿರುವ ತೊಂದರೆ ನಿವಾರಣೆಯಾಗುತ್ತದೆ ಎಂದರು.

ಸಂಕಷ್ಟ ಕೆಲವು ದಿನ

ಸಾಮಾನ್ಯ ವಾಣಿಜ್ಯ ಚಟುವಟಿಕೆ ಈಗ ಎದುರಿಸುತ್ತಿರುವ ಸಂಕಷ್ಟ ಕೆಲವು ದಿನ ಮಾತ್ರ. ಹೊಸ ನೋಟು ಪೂರ್ಣ ಪ್ರಮಾಣದಲ್ಲಿ ಸರಬರಾಜು ಆಗುತ್ತಿದ್ದಂತೆ ಹೊಸ ವ್ಯವಸ್ಥೆ ಸಹಜ ಸ್ಥಿತಿಗೆ ಬರುತ್ತದೆ ಎಂದು ಸಚಿವ ಜೇಟ್ಲಿ ಕಳೆದ 70 ವರ್ಷಗಳಿಂದ ಜಾರಿಯಲ್ಲಿದ್ದ ಹಳೆಯ ಸಹಜ ಸ್ಥಿತಿಯನ್ನು ಪ್ರಧಾನಿ ಮೋದಿ ಹೊಸ ಸಾಮಾನ್ಯ ಸ್ಥಿತಿಗೆ ತರಲು ಮುಂದಾಗಿದ್ದಾರೆ ಎಂದರು.

ಅಧಿಕ ಮುಖಬೆಲೆಯ ನೋಟುಗಳ ರದ್ದತಿ ಸರ್ಕಾರದ ಐತಿಹಾಸಿಕ ಹೆಜ್ಜೆ. ಇದು ದೀರ್ಘ ಕಾಲದಲ್ಲಿ ದೇಶದ ಬಡವರಿಗೆ ಸಹಾಯವಾಗುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ದೇಶದ ಆರ್ಥಿಕ ಹಿತದೃಷ್ಟಿಯಿಂದ ನೋಟು ರದ್ದತಿಯಂತ ಅತಿ ಧೈರ್ಯ ಹಾಗೂ ಕಠಿಣ ನಿರ್ಧಾರವನ್ನು ಕೈಗೊಂಡ ಸರ್ಕಾರದ ಕ್ರಮ ಐತಿಹಾಸಿಕವಾದದ್ದು, ಈ ಕುರಿತಂತೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಸಚಿವ ಜೇಟ್ಲಿ ಇಂದು ಬಿಜೆಪಿಯ ಸಂಸದೀಯ ಮಂಡಳಿಯನ್ನುದ್ದೇಶಿಸಿ ಮಾತನಾಡುತ್ತ ಹೇಳಿದ್ದಾರೆ.

ಕಳೆದ 70 ವರ್ಷಗಳಿಂದ `ಸಾಮಾನ್ಯವಾಗಿ’ ನ‌ಡೆದುಕೊಂಡು ಹೋಗುತ್ತಿದ್ದ ಈ ವ್ಯವಸ್ಥೆಗೆ ಪ್ರಧಾನಿ ಮೋದಿ `ಹೊಸ ಸಾಮಾನ್ಯ’ ವ್ಯವಸ್ಥೆಗೆ ಕೊಂಡೊಯ್ಯುವಲ್ಲಿ ದೃಢ ಹೆಜ್ಜೆ ಇರಿಸಿದ್ದಾರೆ. ಹೀಗಾಗಿಯೇ ಇದು ಐತಿಹಾಸಿಕ ಕ್ರಮ. ಹಾಗೆಯೇ ದೇಶದ ಆರ್ಥಿಕ ಸ್ಥಿತಿ ಸುಧಾರಣೆಗೆ ಇದು ಪೂರಕವಾಗಿದೆ. ಇದನ್ನು ಪ್ರತಿ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಯಾವ ಹಿನ್ನೆಲೆಯಲ್ಲಿ ನೋಟು ರದ್ದತಿ ಕ್ರಮಕ್ಕೆ ಸರ್ಕಾರ ಮುಂದಾಯಿತು.

ಇದರ ದೀರ್ಘಕಾಲಿಕ ಸಕಾರಾತ್ಮಕ ಪರಿಣಾಮಗಳು ಏನು ಎಂಬುದನ್ನು ಪ್ರತಿ ಪಕ್ಷಗಳು ಅರ್ಥ ಮಾಡಿಕೊಳ್ಳಲಿ ಎಂದ ಜೇಟ್ಲಿ, ಈ ವಿಷಯದಲ್ಲಿ ಸಂಸತ್‌ನಲ್ಲಿ ಚರ್ಚೆಗೆ ಸರಕಾರ ಸಿದ್ಧವಿದೆ ಎಂದರು.

ಅತಿಗೋಪ್ಯ

ಈ ನಿರ್ಧಾರ ಕುರಿತಂತೆ ಅತಿಗೋಪ್ಯತೆಯನ್ನು ಸರ್ಕಾರ ಕಾಪಾಡಿಕೊಂಡಿದೆ. ಆದರೂ ಕೆಲ ವಿರೋಧ ಪಕ್ಷಗಳು ಈ ಸಂಬಂಧ ಅಪಸ್ವರ ಎತ್ತಿದೆ. ಈ ನೋಟು ರದ್ದತಿ ತೀರ್ಮಾನ ಬಿಜೆಪಿ ಪಕ್ಷಕ್ಕೆ ಮೊದಲೇ ಗೊತ್ತಿತ್ತು ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಈ ವಿಷಯ ಸ್ವತಃ ಹಣಕಾಸು ಸಚಿವರಿಗೇ ಗೊತ್ತಿರಲಿಲ್ಲ. ಹೀಗಾಗಿ ಈ ವಿಷಯದಲ್ಲಿ ಪ್ರತಿ ಪಕ್ಷಗಳ ಹೇಳಿಕೆಗೆ ಗೊಂದಲ ಹಾಗೂ ಆಧಾರವಿಲ್ಲದ್ದಾಗಿದೆ ಎಂದೂ ಸಚಿವ ಜೇಟ್ಲಿ ಹೇಳಿದ್ದಾರೆ.

Comments are closed.