ರಾಷ್ಟ್ರೀಯ

ಹಣವಿಲ್ಲದೇ ವ್ಯವಹರಿಸುವ 10 ರಾಷ್ಟ್ರಗಳಿವು!

Pinterest LinkedIn Tumblr

cardನವದೆಹಲಿ: ಪ್ರಧಾನಿ ಮೋದಿ ನವೆಂಬರ್ 8 ರಂದು 500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಮೇಲೆ ಜನರ ದಿನಿತ್ಯದ ವಹಿವಾಟುಗಳ ಮೇಲೆ ಭಾರೀ ಹೊಡೆತ ಬಿದ್ದಿದೆ. ನೋಟು ನಿಷೇಧ ನಂತರ ಆದೇಶದ ಬಗ್ಗೆ ಸಾರ್ವಜನಿಕರು, ವ್ಯಾಪಾರಿಗಳು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

ಆದರೆ ಕೆಲ ದೇಶಗಳು ನಗದು ರಹಿತ ವ್ಯವಹಾರಗಳನ್ನು ರೂಢಿಸಿಕೊಂಡು ವ್ಯಾಪಾರ ಮಾಡುತ್ತಿವೆ. ಒಂದು ವೇಳೆ ನಗದು ವ್ಯವಹಾರವಿದ್ದರೂ ಅಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ನಗದು ವ್ಯವಹಾರಗಳು ನಡೆಯುತ್ತಿವೆ. ಹಾಗಾದರೆ ಅಲ್ಲಿಯ ಜನರು ಯಾವ ರೀತಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

1. ಸ್ವೀಡನ್: ಸ್ವೀಡನ್ ದೇಶವು ನಗದು ವ್ಯಹಾರಗಳನ್ನು ಕಡಿಮೆ ಮಾಡಿಕೊಂಡಿದ್ದು, ಪ್ಲಾಸ್ಟಿಕ್ ಮನಿ ಬಳಕೆಯನ್ನು ಹೆಚ್ಚಾಗಿ ರೂಢಿಸಿಕೊಂಡಿದೆ. ದೇಶದ ಒಟ್ಟು ಆರ್ಥಿಕ ವ್ಯವಸ್ಥೆಯ ಶೇಕಡಾ 3ರಷ್ಟು ಮಾತ್ರ ನಗದು ವ್ಯವಾಹಾರ ಮಾಡುತ್ತಿದೆ. ಸಾರ್ವಜನಿಕ ಸೇವೆಗಳಾದ ಸಾರಿಗೆ, ದಾನ ನೀಡುವುದು ಮುಂತಾದವುಗಳಲ್ಲಿ ಕಾರ್ಡ್‍ಗಳನ್ನು ಬಳಸುತ್ತಿದ್ದಾರೆ ಅಥವಾ ಆನ್‍ಲೈನ್ ಮೂಲಕ ವ್ಯವಹರಿಸುತ್ತಿದ್ದಾರೆ.

2. ನಾರ್ವೆ: ಈ ದೇಶದ ಅರ್ಥ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಮುಂದಿದ್ದು ಇಲ್ಲಿಯ ಪ್ರತಿಯೊಂದು ವ್ಯವಹಾರವು ಕಾರ್ಡ್ ಅಥವಾ ಆನ್‍ಲೈನ್ ಮೂಲಕವೇ ನಡೆಯುತ್ತಿದೆ. ಇಲ್ಲಿ ಸ್ಟ್ರೀಟ್ ಫುಡ್ ಹಾಗೂ ದಿನಪತ್ರಿಕೆಗಳನ್ನು ಮೊಬೈಲ್ ಬ್ಯಾಂಕಿಂಗ್ ಮೂಲಕವೇ ಮಾರಾಟ ಮಾಡುತ್ತಾರೆ.

ನಾರ್ವೆ ದೇಶದ ಅತಿ ದೊಡ್ಡ ಬ್ಯಾಂಕ್ ಡಿಎನ್‍ಬಿ ಕೆಲವು ವರ್ಷಗಳ ಹಿಂದೆಯೇ ಜನರಿಗೆ ಹಣ ನೀಡುವುದನ್ನು ನಿಲ್ಲಿಸಿದೆ. ಕಪ್ಪು ಹಣದ ನಿಯಂತ್ರಣ ಮತ್ತು ಮನಿ ಲಾಂಡ್ರಿಂಗ್ ತಡೆಯಲು ಬ್ಯಾಂಕ್ ಈ ನಿಯಮವನ್ನು ಜಾರಿಗೆ ತಂದಿದೆ. ಪ್ರಸ್ತುತ ನಾರ್ವೆ ದೇಶದ ಹಲವು ಬ್ಯಾಂಕ್‍ಗಳಲ್ಲಿ ಹಣ ನೀಡುವುದನ್ನು ನಿಲ್ಲಿಸಿವೆ.

3. ಡೆನ್ಮಾರ್ಕ್: ಈ ದೇಶದ ಮೂರನೇಯ ಒಂದು ಭಾಗದಷ್ಟು ಜನ ಮೊಬೈಲ್ ಪೇ ಮತ್ತು ಸೆಲ್‍ಫೋನ್‍ಗಳ ಮೂಲಕ ವ್ಯವಹಾರ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಟ್ಟೆ ಖರೀದಿ, ಹೋಟೆಲ್ ಮತ್ತು ಪೆಟ್ರೋಲ್ ಪಂಪ್‍ಗಳಲ್ಲಿ ಸಹ ಕ್ಯಾಶ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಕಾರ್ಡ್ ಬಳಸಲಾಗುತ್ತಿದೆ. 2030ರೊಳಗೆ ಸಂಪೂರ್ಣವಾಗಿ ಕಾಗದ ರಹಿತ ವಹಿವಾಟು ಮಾಡಲು ಡ್ಯಾನಿಷ್ ಸರ್ಕಾರ ಮುಂದಾಗಿದೆ.

4. ಬೆಲ್ಜಿಯಂ: ಇಲ್ಲಿಯ ಒಟ್ಟು ಜನಸಂಖ್ಯೆಯ ಶೇಕಡಾ 93ರಷ್ಟು ಜನ ಕ್ಯಾಷ್‍ಲೆಸ್ ವ್ಯವಹಾರ ಮಾಡುತ್ತಿದ್ದಾರೆ. ಜೊತೆಗೆ ಇಲ್ಲಿಯ ಶೇ.86ರಷ್ಟು ಜನ ಡೆಬಿಟ್ ಕಾರ್ಡ್‍ಗಳನ್ನು ಹೊಂದಿದ್ದಾರೆ. ಬೆಲ್ಜಿಯಂ ಸರ್ಕಾರ ನಗದು ವ್ಯವಹಾರಗಳಿಗೆ ಗರಿಷ್ಠ 3000 ಯುರೋಗೆ ಮಾತ್ರ ಅವಕಾಶ ನೀಡಿದೆ.

ಇಲ್ಲಿ ಸಿಕ್ಸ್‍ಡಾಟ್ ಮೊಬೈಲ್ ಆ್ಯಪ್ ಮೂಲಕ ವ್ಯವಹಾರಗಳು ನಡೆಯುತ್ತವೆ. ಈ ಆ್ಯಪ್ ಮುಖಾಂತರ ನಡೆಯುವ ವ್ಯವಹಾರವನ್ನು ಬೆಲ್ಜಿಯಂ ಬ್ಯಾಂಕ್‍ಗಳು ಬೆಂಬಲಿಸಿವೆ.

5. ಫ್ರಾನ್ಸ್: ಫ್ರೆಂಚ್ ಸರ್ಕಾರ ಮೊಬೈಲ್ ಪೇಮೆಂಟ್‍ಗೆ ವ್ಯವಹಾರವನ್ನು ನಿಲ್ಲಿಸಿಲ್ಲ. ಇದಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಿನಿತ್ಯದ ವಹಿವಾಟುಗಳಿಗಾಗಿ ಕಾಂಟೆಕ್ಟ್-ಲೆಸ್ ಕಾರ್ಡ್ ಮತ್ತು ಎಮ್-ಪಿಒಎಸ್ ಕ್ಯಾರಿ ವಿಧಾನಗಳನ್ನು ಬಳಸುತ್ತಿದೆ. ಫ್ರಾನ್ಸ್ ದೇಶದ ಶೇ.92ರಷ್ಟು ಜನ ಕ್ಯಾಷ್‍ಲೆಸ್ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.

6. ಇಂಗ್ಲೆಂಡ್ (ಯುಕೆ): ಈ ದೇಶದ ಪ್ರತಿದಿನದ ವ್ಯವಹಾರಗಳು ಕೆಲವೆಡೆ ಕೇವಲ ನಗದು ವ್ಯವಹಾರದಲ್ಲಿ ಮಾತ್ರ ನಡೆಯುತ್ತದೆ. ಆದರೆ ದೇಶದ ಶೇ.89ರಷ್ಟು ಜನ ಡಿಜಿಟಲ್ ಬ್ಯಾಕಿಂಗ್ ಬಳಸುತ್ತಾರೆ. ಪೇ-ಎಮ್ ಆನ್‍ಲೈನ್ ವ್ಯವಹಾರ ಇಲ್ಲಿಯ ಜನ ಹೆಚ್ಚಾಗಿ ಬಳಸುತ್ತಾರೆ. 26 ಮಿಲಿಯನ್ ಪೌಂಡ್‍ಗಿಂತ ಹೆಚ್ಚಾಗಿ ಕ್ಯಾಶ್ ವಹಿವಾಟು ಮಾಡುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಒಟ್ಟು ಜನಸಂಖ್ಯೆಯ ಮೂರನೇಯ ಎರಡು ಭಾಗದಷ್ಟು ಜನರು ಮೊಬೈಲ್ ಪೇಮೆಂಟನ್ನು ಬಳಸುತ್ತಾರೆ.

7. ಸೊಮಾಲಿಲ್ಯಾಂಡ್: ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಒಂದಾದ ಸೋಮಾಲಿಲ್ಯಾಂಡ್‍ನ ಜನರು ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಮೂಲಕ ವ್ಯವಹಾರ ಮಾಡುವ ಮೂಲಕ ಮುಂದುವರಿದ ರಾಷ್ಟ್ರಗಳಿಗೆ ಪೈಪೋಟಿಯನ್ನು ನೀಡುತ್ತಿದ್ದಾರೆ. ಒಟ್ಟು ನಗದು ವಹಿವಾಟನ್ನು ಮಾಡಲು ಪ್ರಯತ್ನಿಸುತ್ತಿದೆ. ಇಲ್ಲಿಯ ಗಲ್ಲಿಗಳಲ್ಲಿರುವ ಸಣ್ಣ ಅಂಗಡಿಗಳು ಸಹ ಕಾರ್ಡ್‍ಗಳನ್ನು ಸ್ವೀಕರಿಸುತ್ತವೆ.

2012 ರ ಸರ್ವೆಯ ಪ್ರಕಾರ ಸೊಮಾಲಿಲ್ಯಾಂಡ್‍ನ ಒಬ್ಬ ವ್ಯಕ್ತಿಯು ತಿಂಗಳಲ್ಲಿ ಅಂದಾಜು 34 ಬಾರಿ ಆನ್‍ಲೈನ್ ವ್ಯವಹಾರ ಮಾಡುತ್ತಾನೆ ಎಂದು ತಿಳಿಸಿದೆ. ಇದು ಜಗತ್ತಿನ ಬೇರೆ ಯಾವ ರಾಷ್ಟ್ರಗಳಲ್ಲೂ ಕಂಡು ಬರುವುದಿಲ್ಲ.

8. ಕೀನ್ಯಾ: ಇಲ್ಲಿಯ 15 ಮಿಲಿಯನ್ ಜನರು ಎಂ-ಪೆಸಾ, ಮೊಬೈಲ್ ಟ್ರಾನ್ಸ್‍ಫರ್ ಆ್ಯಪ್ ಬಳಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಬಿಲ್‍ಗಳನ್ನು ಭರ್ತಿ ಮಾಡಲು, ಶಾಲೆಯ ಫೀ ಮುಂತಾದವುಗಳನ್ನು ಪ್ಲಾಸ್ಟಿಕ್ ಕಾರ್ಡ್‍ಗಳ ಮೂಲಕವೇ ತುಂಬುತ್ತಾರೆ.

9. ಕೆನಡಾ: ದೇಶದ ಶೇ.90 ರಷ್ಟು ಜನರು ಕ್ಯಾಶ್‍ಲೆಸ್ ವ್ಯವಹಾರ ಮಾಡುತ್ತಿದ್ದು, ಅದರಲ್ಲಿ ಸರಾಸರಿ ಶೇ.70ರಷ್ಟು ಜನ ಪೇಮೆಂಟ್‍ಗಳನ್ನು ಕಾರ್ಡ್‍ಗಳ ಮೂಲಕ ಮಾಡುತ್ತಾರೆ. ಕೆನಡಾ ದೇಶವು 2013ರ ಜನವರಿ 1ರಂದು ಹೊಸ ಕರೆನ್ಸಿ ಪ್ರಿಂಟ್ ಮಾಡಿತ್ತು. ಸಾರ್ವಜನಿಕರ ಶೇ.56ರಷ್ಟು ವ್ಯವಹಾರಗಳು ಕಾರ್ಡ್ ಮೂಲಕವೇ ನಡೆಯುತ್ತಿವೆ.

10. ದಕ್ಷಿಣ ಕೊರಿಯಾ: ಏಷ್ಯಿಯನ್ ರಾಷ್ಟ್ರಗಳಲ್ಲಿ ನಗದು ರಹಿತ ಅರ್ಥ ವ್ಯವಸ್ಥೆಯನ್ನು ಹೊಂದಿರುವ ಪ್ರಮುಖ ರಾಷ್ಟ್ರಗಳಲ್ಲಿ ಇದೂ ಒಂದು. ಇಲ್ಲಿಯ ಸರ್ಕಾರ ಕಾರ್ಡ್‍ಗಳ ಮೂಲಕ ವ್ಯವಹರಿಸುವರಿಗೆ ವ್ಯಾಟ್‍ನಲ್ಲಿ ವಿಶೇಷ ರಿಯಾಯತಿ ನೀಡುತ್ತಿದೆ.

ನಗದು ವ್ಯವಹಾರ ಮಾಡುವ ರಾಷ್ಟ್ರ ಜರ್ಮನಿ: ಮೇಲಿನ 10 ರಾಷ್ಟ್ರಗಳಿಗೆ ಹೋಲಿಸಿದರೆ ಜರ್ಮನಿ ಮಾತ್ರ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಜರ್ಮನಿಯಲ್ಲಿ ಸಂಪೂರ್ಣ ನಗದು ವ್ಯವಹಾರ ಮಾತ್ರ ನಡೆಯುತ್ತದೆ. ಇಲ್ಲಿನ ಕೆಫೆ ಮತ್ತು ರೆಸ್ಟೋರೆಂಟ್‍ಗಳಲ್ಲಿ ಕಾರ್ಡ್‍ಗಳನ್ನು ಸ್ವೀಕರಿಸುವುದಿಲ್ಲ.

Comments are closed.