ರಾಷ್ಟ್ರೀಯ

ನೋಟ್ ನಿಷೇಧದಿಂದ ಖೋಟಾ ನೋಟು, ಕಪ್ಪು ಹಣ ಮತ್ತು ಭಯೋತ್ಪಾದನೆಗೆ ಕಡಿವಾಣ ಹಾಕಬಹುದೇ?

Pinterest LinkedIn Tumblr

note-banನವದೆಹಲಿ: ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ನಕಲಿ ನೋಟ್ ಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರು.ಮುಖಬೆಲೆಯ ನೋಟ್ ಗಳ ಮೇಲೆ ನಿಷೇಧ ಹೇರುತ್ತಿದ್ದು, ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನರೇಂದ್ರ ಮೋದಿ ಅವರ ಈ ನಿರ್ಧಾರದಿಂದ ಈ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆಯೇ…ಇಂತಹುದೊಂದು ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಈ ದಿಢೀರ್ ನಿರ್ಧಾರದಿಂದ ಸಾಕಷ್ಟು ಮಂದಿ ಆತಂಕಕ್ಕೊಳಗಾಗಿದ್ದಾರೆ. ತಮ್ಮ ಬಳಿ ವೈಟ್ ಮನಿ ಇದ್ದರೂ ಅದನ್ನು ಬದಲಿಸಿಕೊಳ್ಳುವ ಮಾರ್ಗ ತಿಳಿಯದೇ ಪರದಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳು ಹರಿದಾಡುತ್ತಿದ್ದು, ಕೇಂದ್ರ ಸರ್ಕಾರದ ಈ ದಿಢೀರ್ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಗಾದರೇ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ ಜನತೆಯ ಮೇಲೆ ಎಂತಹ ಪರಿಣಾಮ ಬೀರುತ್ತದೆ? ಇದರಿಂದ ಸಾಮಾನ್ಯ ಜನರಿಗೆ ತೊಂದರೆಯೇ ಅಥವಾ ಅನುಕೂಲವೇ? ಪ್ರಧಾನಿ ನರೇಂದ್ರ ಮೋದಿ ಏಕೆ ಈ ರೀತಿ ದಿಢೀರ್ ನಿರ್ಧಾರ ಕೈಗೊಂಡರು ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಭಷ್ಟಾಚಾರದ ವಿರುದ್ಧ ಹೋರಾಡಲು, ನಕಲಿ ನೋಟುಗಳ ಹಾವಳಿ ತಡೆಗಟ್ಟಲು ಹಾಗೂ ಕಪ್ಪುಹಣದ ವಿರುದ್ಧ ಸಮರ್ಥ ಹೋರಾಟ ಮಾಡಲು ಈ ನಿರ್ಧಾರ ಸಹಾಯಕವಾಗುತ್ತದೆಯಂತೆ. ಒಂದರ್ಥದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆದಿದ್ದಾರೆ ಎನ್ನುವ ಭಾವನೆ ಕೂಡ ಆರ್ಥಿಕ ವಲಯದಲ್ಲಿ ಕೇಳಿಬರುತ್ತಿದೆ. ಮೋದಿ ಅವರ ಕಠಿಣ ನಿರ್ಧಾರದಿಂದಾಗಿ ಭ್ರಷ್ಟಾಚಾರ, ಕಪ್ಪುಹಣ ಹಾಗೂ ನಕಲಿ ನೋಟುಗಳನ್ನು ಏಕಕಾಲಕ್ಕೆ ತಡೆಯುವ ಪ್ರಯತ್ನವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಪ್ಪುಹಣದ ವಿರುದ್ಧ ಕೇಂದ್ರದ ಸಮರಕ್ಕೆ ಮಿಶ್ರ ಪ್ರತಿಕ್ರಿಯೆ
2016ರಲ್ಲಿ ಅಂದರೆ ದೇಶದಲ್ಲಿ ಪಂಚ ರಾಜ್ಯಗಳ ಚುನಾವಣೆ ನಡೆದಾಗ ಈ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕಪ್ಪುಹಣ ಚಲಾವಣೆಯಾಗಿತ್ತು ಎಂದು ಆರ್ಥಿಕ ವರದಿಗಳು ತಿಳಿಸಿವೆ. ಒಂದು ವರದಿಯ ಪ್ರಕಾರ 2016ರಿಂದ ಈ ವರ್ಷದ ಏಪ್ರಿಲ್ 29ರವರೆಗೆ ಸುಮಾರು 16.50 ಲಕ್ಷ ಕೋಟಿ ಕಪ್ಪು ಹಣ ಚಲಾವಣೆಯಾಗಿತ್ತು ಎಂದು ತಿಳಿದುಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಶೇ.16ರಷ್ಟು ಹೆಚ್ಚು ಎಂಬುದು ಆರ್ಥಿಕ ತಜ್ಞರ ಆಭಿಪ್ರಾಯ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಕಪ್ಪುಹಣ ಘೋಷಣೆ ಮಾಡುವ ಸಲುವಾಗಿ ಹಲವು ನಿರ್ಧಾರಗಳನ್ನು ಕೈಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಕಪ್ಪುಹಣ ಘೋಷಣೆಗೆ ಡೆಡ್ ಲೈನ್ ಕೂಡ ನೀಡಿದ್ದರು. ಅದರಂತೆ ಕಳೆದ ಏಪ್ರಿಲ್ ತಿಂಗಳಾಂತ್ಯದವರೆಗೂ ಆದಾಯ ಘೋಷಣೆ ಯೋಜನೆಯಡಿ (ಐಡಿಎಸ್‌) ನಡಿಯಲ್ಲಿ ಸುಮಾರು 65,250 ಕೋಟಿಗಳಷ್ಟು ಕಪ್ಪು ಹಣ ಘೋಷಣೆಯಾಗಿತ್ತು. ಕೇಂದ್ರ ಸರ್ಕಾರಕ್ಕೆ ತೆರಿಗೆ ಮತ್ತು ದಂಡದ ರೂಪದಲ್ಲಿ ರು.29,362 ಕೋಟಿ ಹರಿದು ಬಂದಿತ್ತು ಎಂದು ಸ್ವತಃ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದರು.
ಆದರೆ ಚುನಾವಣೆಗೂ ಮುನ್ನ 15 ಲಕ್ಷ ಕೋಟಿ ಕಪ್ಪುಹಣ ವಾಪಸ್ ತರುವುದಾಗಿ ಹೇಳಿದ್ದ ನರೇಂದ್ರ ಮೋದಿ ಅವರು ಘೋಷಣೆಯ ಅರ್ಧದಷ್ಟು ಹಣವನ್ನೂ ವಾಪಸ್ ತಂದಿರಲಿಲ್ಲ. ಹೀಗಾಗಿ ಜನರಿಗೆ ನೀಡಿದ್ದ ಆಶ್ವಾಸನೆ ಮೇರೆಗೆ ಕಪ್ಪುಹಣದ ವಿರುದ್ಧ ಸಮರ ಸಾರಲೇ ಬೇಕಾದ ಅನಿವಾರ್ಯತೆಯಲ್ಲಿ ಕೇಂದ್ರ ಸಿಲುಕಿತ್ತು. ಇದೇ ಕಾರಣಕ್ಕೆ 500 ರು. ಮತ್ತು 1000 ರು. ನೋಟ್ ಗಳ ಮೇಲಿನ ನಿಷೇಧ ಹೇರಿದೆ. ಸರ್ಕಾರವೇನೋ ಹಳೆಯ ನೋಟುಗಳ ಬದಲಾವಣೆಗೆ ಅವಕಾಶ ನೀಡಿದೆಯಾದರೂ ಬದಲಾವಣೆಗೆ ಗುರುತಿನ ಚೀಟಿ ಕಡ್ಡಾಯ ಮಾಡಿದೆ. ಸರ್ಕಾರದ ಈ ಕ್ರಮದಿಂದ ವಿವಿಧ ರಹಸ್ಯ ಪ್ರದೇಶಗಳಲ್ಲಿ ಬಚ್ಚಿಟ್ಟಿರುವ ಕಪ್ಪುಹಣವನ್ನು ಕಾಳಧನಿಕರು ಅನಿವಾರ್ಯವಾಗಿ ಹೊರತೆಗೆಯಲೇ ಬೇಕು ಮತ್ತು ಅದನ್ನು ಬ್ಯಾಂಕ್ ಅಥವಾ ಇತರೆ ಸಂಪರ್ಕಗಳ ಮೂಲಕ ಹೊಸ ನೋಟಿಗೆ ಬದಲಿಸಿಕೊಳ್ಳಲೇಬೇಕು. ಇಲ್ಲವಾದಲ್ಲಿ ಆ ಹಣ ಇದ್ದೂ ಇಲ್ಲದಂತಾಗುತ್ತದೆ. ಅನಿವಾರ್ಯತೆ ಎದುರಾದರೇ ತಾನೇ ತಾನಾಗಿ ಕಪ್ಪುಹಣ ಹೊರಬರುತ್ತದೆ ಎಂಬುದು ಕೇಂದ್ರ ಸರ್ಕಾರದ ಎಣಿಕೆ.
ನಕಲಿ ನೋಟುಗಳ ತಡೆಗೆ ಭಾರತದ ಕಠಿಣ ಕ್ರಮ, ಪಾಕಿಸ್ತಾನ, ಬಾಂಗ್ಲಾದೇಶ ನಕಲಿ ನೋಟು ದಂಧೆಕೋರರಿಗೆ ಕೋಟಿ ಕೋಟಿ ನಷ್ಟ
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಈ ಕಠಿಣ ನಿರ್ಧಾರ ಕೇವಲ ಕಾಳಧನಿಕರಿಗೆ ಅಷ್ಟೇ ಅಲ್ಲ. ದಶಕಗಳಿಂದ ನಕಲಿ ನೋಟುಗಳನ್ನು ಮುದ್ರಿಸಿ ಅವುಗಳನ್ನು ಚಲಾವಣೆಗೆ ಬಿಡುತ್ತಿದ್ದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮೂಲದ ನಕಲಿ ನೋಟು ದಂಧೆಕೋರರಿಗೂ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ನೋಟು ಬದಲಾವಣೆ ಕುರಿತಂತೆ ಯಾವುದೇ ಸಣ್ಣ ಸುಳಿವು ಕೂಡ ನೀಡದೇ ದಿಢೀರ್ ನಿಷೇಧ ಹೇರಿದ್ದರಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ತಯಾರಾಗುತ್ತಿದ್ದ ನಕಲಿ ನೋಟುಗಳ ಅಡ್ಡೆ ದಿಢೀರ್ ಸ್ಥಗಿತಗೊಂಡಿದೆ. ಚಲಾವಣೆಯಲ್ಲಿರುವ ನಕಲಿ ನೋಟುಗಳು ಬದಲಾವಣೆಗಾಗಿ ಬ್ಯಾಂಕ್ ಗೆ ಅನಿವಾರ್ಯವಾಗಿ ಬರಲೇಬೇಕು. ಆಗ ನಕಲಿ ಮತ್ತು ಅಸಲಿ ನೋಟುಗಳ ಬಣ್ಣ ಬಯಲಾಗುತ್ತದೆ, ಅಸಲಿ ನೋಟುಗಳಿಗೆ ಬ್ಯಾಂಕ್ ಗಳು ಬದಲಿ ನೋಟುಗಳನ್ನು ನೀಡಿದರೆ ನಕಲಿ ನೋಟುಗಳು ಚಲಾವಣೆಯಾಗದೇ ಹಾಗೆಯೇ ಕೇವಲ ಕಾಗದವಾಗಿ ಉಳಿಯುತ್ತದೆ. ಸರ್ಕಾರದ ಈ ನಡೆಯಿಂದಾಗಿ ಈಗಾಗಲೇ ಕೋಟ್ಯಂತರ ರು.ಗಳನ್ನು ಮುದ್ರಿಸಿರುವ ನಕಲಿ ನೋಟು ದಂಧೆಕೋರರಿಗೆ ಕೋಟಿ ಕೋಟಿ ನಷ್ಟವಾಗತ್ತದೆ. ಹೊಸ ತಂತ್ರಜ್ಞಾನದೊಂದಿಗೆ ತಯಾರಾಗಿರುವ ಹೊಸ ಮಾದರಿ ನೋಟುಗಳು ಚಲಾವಣೆಗೆ ಬರುತ್ತದೆ.
ಭ್ರಷ್ಟಾಚಾರಕ್ಕೆ ಕತ್ತರಿ?
ಇನ್ನು ಭ್ರಷ್ಟಾಚಾರ ನಿಯಂತ್ರಣದಲ್ಲೂ ನೋಟು ನಿಷೇಧ ಭಾರಿ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಸಾಮಾನ್ಯವಾಗಿ ತಮ್ಮ ಬಳಿ ಇರುವ ಕಪ್ಪುಹಣವೇ ಭ್ರಷ್ಟಾಚಾರದ ಮೂಲ ಎನ್ನಬಹದು. ಹೀಗಾಗಿ ಪ್ರಸ್ತುತ ಕೇಂದ್ರ ಸರ್ಕಾರ ದಿಢೀರ್ ನಡೆಯಿಂದಾಗಿ ಅನಿವಾರ್ಯವಾಗಿ ಎಲ್ಲ ಬಗೆಯ ಸರ್ಕಾರಿ ಅಧಿಕಾರಿಗಳು ತಮ್ಮಲ್ಲಿರುವ ಕಾನೂನು ಬಾಹಿರ ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕ್ ಮತ್ತು ಇತರೆ ಸರ್ಕಾರಿ ಕಚೇರಿಗಳಿಗೆ ಧಾವಿಸುತ್ತಾರೆ. ಆಗ ಭ್ರಷ್ಟ ಅಧಿಕಾರಿಗಳ ಮುಖವಾಡ ಬಯಲಾಗುತ್ತದೆ. ಅಂತಹ ಅಧಿಕಾರಿಗಳನ್ನು ಗುರುತಿಸುವುದು ಮತ್ತು ಶಿಕ್ಷಿಸುವುದು ಸುಲಭವಾಗುತ್ತದೆ ಎನ್ನುವುದು ಕೇಂದ್ರದ ಚಿಂತನೆ.
ಭಯೋತ್ಪಾದನೆ ನಿಯಂತ್ರಣ ಸಾಧ್ಯ?
ದೇಶವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಭಯೋತ್ಪಾದನೆ ಪ್ರಮುಖವಾದದ್ದು. ಬಾಹ್ಯ ಮತ್ತು ಆಂತರಿಕ ದುಷ್ಟ ಶಕ್ತಿಗಳ ಬೆಂಬಲದಿಂದ ಭಯೋತ್ಪಾದನೆ ತಾರಕಕ್ಕೇರಿದ್ದು, ಭಯೋತ್ಪಾದನೆಗೆ ಕಪ್ಪುಹಣವೇ ಪ್ರಮುಖ ಆರ್ಥಿಕ ಮೂಲ. ಹೀಗಾಗಿ ಕಪ್ಪುಹಣ ಮತ್ತು ನಕಲಿ ನೋಟುಗಳ ಮೇಲೆ ನಿಯಂತ್ರಣ ಹೇರಿದರೆ ಆರ್ಥಿಕ ಮೂಲವಿಲ್ಲದೆ ಭಯೋತ್ಪಾದನಾ ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ ಎಂಬುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ.

Comments are closed.