ರಾಷ್ಟ್ರೀಯ

ಸಿಮಿ ಎನ್ ಕೌಂಟರ್: ಜೈಲುಗಳಲ್ಲಿ ವಿದ್ಯುತ್ ಬೇಲಿ ಅಳವಡಿಸಲು ಮಧ್ಯ ಪ್ರದೇಶ ಸರ್ಕಾರ ಚಿಂತನೆ

Pinterest LinkedIn Tumblr

bhopal-simi-activistಭೋಪಾಲ್: ಎಂಟು ಮಂದಿ ಸಿಮಿ ಉಗ್ರರು ಜೈಲಿನಿಂದ ತಪ್ಪಿಸಿಕೊಂಡು ಹೋದ ನಂತರ ಭೋಪಾಲ್ ಕೇಂದ್ರ ಕಾರಾಗೃಹಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ಮುಂದಾಗಿರುವ ಮಧ್ಯ ಪ್ರದೇಶ ಸರ್ಕಾರ ಎಲ್ಲಾ 122 ಜೈಲುಗಳಿಗೆ ವಿದ್ಯುತ್ ಬೇಲಿಯನ್ನ ಅಳವಡಿಸಲು ಮುಂದಾಗಿದೆ.
ಅಕ್ಟೋಬರ್ 30 ರಂದು ರಾತ್ರಿ ಭೋಪಾಲ್ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿಯನ್ನು ಕೊಂದು ಎಂಟು ಮಂದಿ ಸಿಮಿ ವಿಚಾರಣಾಧೀನ ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದರು. ಕೆಲವೇ ಹೊತ್ತಿನಲ್ಲಿ ಅವರನ್ನು ಪೊಲೀಸರು ಭೋಪಾಲ್ ನಗರದ ಹೊರವಲಯದಲ್ಲಿ ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದರು.
ಎನ್ ಕೌಂಟರ್ ನಡೆದ ಬಳಿಕ ಪೊಲೀಸರು ಮತ್ತು ರಾಜ್ಯ ಗೃಹ ಸಚಿವರು ನೀಡಿದ ದ್ವಂದ ಹೇಳಿಕೆಗಳಿಂದ ಅದೊಂದು ನಕಲಿ ಎನ್ ಕೌಂಟರ್ ಎಂಬ ಆರೋಪ ಕೇಳಿಬಂದಿತ್ತು.
ಭೋಪಾಲ್ ಜೈಲು ಮುರಿದು ಅಪರಾಧಿಗಳು ಹೊರಬಂದ ಹಿನ್ನೆಲೆಯಲ್ಲಿ ವಿದ್ಯುತ್ ಬೇಲಿ ಅಳವಡಿಸಲು ಅಧ್ಯಯನ ನಡೆಸಲು ಉನ್ನತ ಅಧಿಕಾರಿಗಳ ತಂಡ ಈಗಾಗಲೇ ಛತ್ತೀಸ್ ಗಢಕ್ಕೆ ತೆರಳಿದೆ. ನೆರೆ ರಾಜ್ಯದಲ್ಲಿ ವಿದ್ಯುತ್ ಬೇಲಿ ಅಳವಡಿಸಿದ್ದನ್ನು ಇಲ್ಲಿ ಕೂಡ ಹೇಗೆ ಅಳವಡಿಸುವುದು ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಮಧ್ಯ ಪ್ರದೇಶ ಕಾರಾಗೃಹ ಮಹಾ ನಿರ್ದೇಶಕ ಸಂಜಯ್ ಚೌಧರಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಧ್ಯ ಪ್ರದೇಶ ಜೈಲಿನ ಭದ್ರತಾ ಲೆಕ್ಕಚಾರ ನಡೆಯುತ್ತಿದ್ದು ಜೈಲಿನಲ್ಲಿ ಭದ್ರತೆ ಅಳವಡಿಸುವ ಕುರಿತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Comments are closed.