ಚೆನ್ನೈ: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಬಿ-ಫಾರ್ಮ್ ಗಳಿಗೆ ಹೆಬ್ಬೆಟ್ಟು ಒತ್ತಿರುವುದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಅವರು ಗುರುವಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಚುನಾವಣಾ ಪತ್ರಗಳಿಗೆ ಹೆಬ್ಬೆಟ್ಟು ಒತ್ತುವುದು ಕಾನೂನು ಬಾಹಿರ ಮತ್ತು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಘೋಷಿಸುವಂತೆ ರಾಮಸ್ವಾಮಿ ಅವರು ಕೋರ್ಟ್ ಗೆ ಮನವಿ ಮಾಡಿದ್ದಾರೆ. ಅಲ್ಲದೆ ಹೆಬ್ಬೆಟ್ಟು ಒತ್ತುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ. ರಾಮಸ್ವಾಮಿ ಅವರ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಇನ್ನು ಕೈಗೆತ್ತಿಕೊಂಡಿಲ್ಲ.
ತಮಿಳುನಾಡಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನ.19ರಂದು ಚುನಾವಣೆ ನಡೆಯುತ್ತಿದ್ದು, ಎಐಎಡಿಎಂಕೆ ಅಭ್ಯರ್ಥಿಗಳಿಗೆ ಜಯಲಲಿತಾ ಅವರು ಸಹಿ ಮಾಡುವ ಬದಲು ಹೆಬ್ಬೆಟ್ಟು ಒತ್ತಿ ಬಿ-ಫಾರ್ಮ್ ಗಳನ್ನು ವಿತರಿಸಲಾಗಿದೆ.
ಅನಾರೋಗ್ಯಪೀಡಿತರಾಗಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರಿಗೆ ಕೃತಕ ಉಸಿರಾಟದ ನಳಿಕೆ ಅಳವಡಿಸಿರುವುದರಿಂದ ಅವರು ಸಹಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅಭ್ಯರ್ಥಿಗಳ ಬಿ-ಫಾರ್ಮ್ಗೆ ಹೆಬ್ಬೆಟ್ಟು ಒತ್ತಿದ್ದಾರೆ.
ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುವವರು ಅರ್ಜಿ ತುಂಬಿ, ಪಕ್ಷದ ಮುಖ್ಯಸ್ಥರಿಂದ ಸಹಿ ಮಾಡಿಸಬೇಕು ಎಂದು ಚುನಾವಣಾ ಆಯೋಗದ ನಿಯಮ ಹೇಳುತ್ತದೆ. ನಕಲು ಸಹಿ ಅಥವಾ ರಬ್ಬರ್ ಸ್ಟಾಂಪ್‌ಗೆ ಅವಕಾಶವಿರುವುದಿಲ್ಲ. ಹೀಗಾಗಿ ಜಯಾ ಅವರು ತಮ್ಮ ಎಡಗೈ ಹೆಬ್ಬೆಟ್ಟು ಒತ್ತಿ ಬಿ-ಫಾರ್ಮ್ ವಿತರಿಸಿದ್ದಾರೆ. ಕೃತಕ ಉಸಿರಾಟ ವ್ಯವಸ್ಥೆಯಿಂದಾಗಿ ಜಯಾ ಅವರ ಬಲಗೈ ಊದಿಕೊಂಡಿರುವುದರಿಂದ ಅವರು ಸಹಿ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ತಮ್ಮ ಎದುರೇ ಅವರು ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಮದ್ರಾಸ್ ವೈದ್ಯ ಕಾಲೇಜಿನ ಡಾ| ಪಿ. ಬಾಲಾಜಿ ಅವರು ಅ.27ರಂದು ಪ್ರಮಾಣಿಕರಿಸಿದ್ದಾರೆ. ಆದರೂ ಪ್ರಕರಣ ಈಗ ಹೈಕೋರ್ಟ್ ಮೆಟ್ಟಿಲೇರಿದೆ.