ರಾಷ್ಟ್ರೀಯ

ನಿನಗೆ ಹೆಚ್ಚು ಖುಷಿ ಕೊಟ್ಟವರು ಯಾರು? ರೇಪ್‌ ಸಂತ್ರಸ್ತೆಗೆ ಪೊಲೀಸರ ಪ್ರಶ್ನೆ!

Pinterest LinkedIn Tumblr

rape

ತಿರುವನಂತಪುರ: ಕೇರಳ ಪೊಲೀಸರ ವರ್ತನೆಯಲ್ಲೇ ಹೇಯ ಎನಿಸುವಂತಹ ಘಟನೆಯೊಂದರಲ್ಲಿ ಗ್ಯಾಂಗ್‌ ರೇಪ್‌ ಸಂತ್ರಸ್ತೆಯೊಬ್ಬಳಿಗೆ ಕೀಳು ಮಟ್ಟದ ಪ್ರಶ್ನೆ ಕೇಳಿದ ಬಗ್ಗೆ ವರದಿಯಾಗಿದೆ.

ಈ ಬಗ್ಗೆ ಖ್ಯಾತ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಪತಿಯ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಲು ಹೋದಾಗ ಆಕೆಯ ನೋವಿಗೆ ಸ್ಪಂದಿಸುವುದನ್ನು ಬಿಟ್ಟು, ಪೊಲೀಸರೇ ಅಸಭ್ಯವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆಂದು ಹೇಳಿಕೊಂಡಿದ್ದಾರೆ.

ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯ ಬಳಿ ಪೊಲೀಸರು ನಿನಗೆ ಹೆಚ್ಚು ಖುಷಿ ಕೊಟ್ಟವರು ಯಾರು? ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಪೊಲೀಸರ ಈ ಅಸಭ್ಯ ವರ್ತನೆ ಹಾಗೂ ಪ್ರಶ್ನೆಗಳಿಗೆ ಸಹಿಸಲು ಸಾಧ್ಯವಾಗದೆಯೇ ಮಹಿಳೆ ದೂರನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ.

ನಾನು ಹೇಳುತ್ತಿರುವುದು ಸಿನಿಮಾ ಕಥೆಯಲ್ಲ. ನಿಜವಾಗಿಯೂ ನಡೆದ ಘಟನೆಯಾಗಿದೆ. ನನಗೆ ಕರೆ ಮಾಡಿದ ಮಹಿಳೆಯೊಬ್ಬರು ಸುಮ್ಮನೆ ಅಳುತ್ತಿದ್ದರು. ನೀವು ಯಾರು ಎಂದು ಕೇಳಿದಾಗ ನಿಮ್ಮನ್ನು ಭೇಟಿಯಾಗಬೇಕಿದೆ ಎಂದು ಹೇಳಿದರು. ಮಹಿಳೆಗೆ 35 ವರ್ಷ ವಯಸ್ಸಾಗಿದ್ದು, ಆಕೆಗೆ ಇಬ್ಬರು ಮಕ್ಕಳಿದ್ದಾರೆ.

ಮಹಿಳೆಯೊಂದಿಗೆ ಮಾತನಾಡಿದಾಗ ಕೆಲ ತಿಂಗಳ ಹಿಂದೆ ನನ್ನ ಪತಿ ಮನೆಯಲ್ಲಿ ಇರಲಿಲ್ಲ. ಈ ಸಮಯ ನೋಡಿಕೊಂಡು ಪತಿಯ ನಾಲ್ಕು ಜನ ಸ್ನೇಹಿತರು ಮನೆಗೆ ಬಂದಿದ್ದರು. ಈ ವೇಳೆ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು. ಈ ವೇಳೆ ಹಿಂದೂ ಮುಂದೂ ತೋಚದೆಯೇ ಅವರೊಂದಿಗೆ ಹೋಗಿದ್ದೆ. ಕಾರಿನಲ್ಲಿ ಕರೆದುಕೊಂಡ ಅವರು, ಆಸ್ಪತ್ರೆಗೆ ಹೋಗುವ ಬದಲಾಗಿ ನಿರ್ಜನ ಪ್ರದೇಶಕ್ಕೆ ನನ್ನನ್ನು ಕರೆದುಕೊಂಡು ಹೋದರು. ನಂತರ ನನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದರು. ನನ್ನ ಮೇಲೆ ಅತ್ಯಾಚಾರ ಮಾಡಿದ ನಾಲ್ವರ ಪೈಕಿ ಓರ್ವ ರಾಜಕೀಯ ಪಕ್ಷವೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆಂದು ಹೇಳಿದರು.

ಅತ್ಯಾಚಾರ ಮಾಡಿದ ಘಟನೆಯನ್ನು ವಿಡಿಯೋ ಮಾಡಿಕೊಳ್ಳಲಾಗಿದ್ದು, ವಿಚಾರವನ್ನು ಯಾರಿಗಾದರು ಹೇಳಿದರೆ, ವಿಡಿಯೋವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲಾಗುತ್ತದೆ ಎಂದು ಹೇಳಿದರು, ನನ್ನ ವರ್ತನೆಯಲ್ಲಿ ಬದಲಾವಣೆಗಳು ಕಂಡ ಬಂದ ಕಾರಣ ಪತಿಗೆ ಅನುಮಾನ ಬಂದಿತ್ತು. ಈ ವೇಳೆ ಅವರಿಗೆ ನಡೆದ ಘಟನೆಯನ್ನು ವಿವರಿಸಿದ್ದೆ. ಪೊಲೀಸ್ ಠಾಣೆಗೆ ಹೋದಾಗ ಠಾಣೆಯಲ್ಲಿದ್ದ ಪೊಲೀಸರು ಅಸಭ್ಯವಾದ ಪ್ರಶ್ನೆಗಳನ್ನು ಕೇಳಿದರು. ನಂತರ ಅನಿವಾರ್ಯವಾಗಿ ದೂರನ್ನು ಹಿಂಪಡೆಯುವಂತೆ ಆಯಿತು ಎಂದು ಮಹಿಳೆ ಹೇಳಿಕೊಂಡಿದ್ದಾರೆಂದು ಭಾಗ್ಯಲಕ್ಷ್ಮಿ ಹೇಳಿದ್ದಾರೆ.

ನಾನು ಬರೆದಿರುವ ಪ್ರತೀಯೊಂದು ಪದಕ್ಕೂ ನಾನು ಬದ್ಧಳಾಗಿದ್ದೇನೆ. ಇದರಲ್ಲಿ ಯಾವುದೇ ಕಟ್ಟುಕಥೆಗಳಿಲ್ಲ ಎಂದು ಭಾಗ್ಯಲಕ್ಷ್ಮಿ ಅವರು ಹೇಳಿದ್ದಾರೆ. ಭಾಗ್ಯಲಕ್ಷ್ಮಿ ಅವರು ಹಾಕಿರುವ ಈ ಪೋಸ್ಟ್ ನ್ನು ಸಾಕಷ್ಟು ಜನರು ಶೇರ್ ಮಾಡಿದ್ದು, ಪ್ರಕರಣ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಪ್ರಕರಣ ಸಂಬಂಧ ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ಪತಿ ಸುದ್ದಿಗೋಷ್ಟಿಯೊಂದನ್ನು ನಡೆಸಿದ್ದು, ಮುಖಗಳನ್ನು ಮುಚ್ಚಿಕೊಂಡು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪೊಲೀಸರು ತನಗೆ ಅಸಭ್ಯವಾದ ಪ್ರಶ್ನೆಗಳನ್ನು ಕೇಳಿದ್ದರು. ಇನ್ನಷ್ಟು ಅವಮಾನಗೊಳ್ಳಲು ನಮಗೆ ಇಷ್ಟವಿರಲಿಲ್ಲ. ಅತ್ಯಾಚಾರದಿಂದ ಆದ ಅವಮಾನಕ್ಕಿಂತ ಪೊಲೀಸರ ಬೆದರಿಕೆಗಳು ಹಾಗೂ ಅವರ ಅಸಭ್ಯವಾದ ಪ್ರಶ್ನೆಗಳು ನಮಗೆ ನಮಗೆ ಹೆಚ್ಚು ಅವಮಾನವಾಗುವಂತೆ ಮಾಡಿತ್ತು. ಹೀಗಾಗಿ ದೂರನ್ನು ಹಿಂದಕ್ಕೆ ತೆಗೆದುಕೊಂಡಿದ್ದೆವು ಎಂದು ಹೇಳಿಕೊಂಡಿದ್ದಾರೆ.

Comments are closed.