ಚಂಡೀಗಢ: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಆತ್ಮಹತ್ಮೆ ಮಾಡಿಕೊಂಡಿರುವ ಯೋಧನನ್ನು ಹುತಾತ್ಮ ಯೋಧನೆಂದು ಬಿಂಬಿಸಬಾರದು ಎಂದು ಗುರುವಾರ ಹೇಳಿದ್ದಾರೆ.
ಹರ್ಯಾಣ ಮೂಲದ ನಿವೃತ್ತ ಯೋಧ ರಾಮ್ ಕಿಶನ್ ಗ್ರೆವಾಲ್ ಅವರ ಆತ್ಮಹತ್ಯೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ದೇಶಕ್ಕಾಗಿ ಹೋರಾಡಿ ಮಣಿದ ಯೋಧರಿಗೆ ಹುತಾತ್ಮ ಯೋಧನ ಪಟ್ಟ ನೀಡಬೇಕೇ ವಿನಃ, ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಯೋಧನಿಗೆ ಹುತಾತ್ಮ ಪಟ್ಟವನ್ನು ನೀಡಬಾರದು ಎಂದು ಹೇಳಿದ್ದಾರೆ.
ಸಮಾನ ವೇತನ ಮತ್ತು ಸಮಾನ ಪಂಚಣಿಯನ್ನು ಜಾರಿಗೆ ತರುವಲ್ಲಿ ಈ ಹಿಂದಿದ್ದ ಸರ್ಕಾರ ವಿಫಲವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಆರ್ ಒಪಿಯನ್ನು ಜಾರಿಗೆ ತಂದಿದ್ದಾರೆ. ವೀರ ಯೋಧರಾರು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಕೈ ಹಾಕುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರೂ ಕೂಡ ಇದೇ ರೀತಿಯ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ರಾಮ್ ಕಿಶನ್ ಅವರ ಆತ್ಮಹತ್ಯೆಗೆ ಒಆರ್ ಒಪಿ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಕಿಶನ್ ಅವರ ಮಾನಸಿಕ ಸ್ಥಿತಿ ಬಗ್ಗೆ ಸಂದೇಹಗಳಿದ್ದು, ಮಾನಸಿಕ ಸ್ಥಿತಿಯ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಹೇಳಿದ್ದರು.