ರಾಷ್ಟ್ರೀಯ

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಬ್ರಿಟನ್ ಪ್ರಧಾನಿ ಕ್ಷಮೆ ಕೊರಬೇಕು: ಶಶಿ ತರೂರ್

Pinterest LinkedIn Tumblr

sashiನವದೆಹಲಿ: ಬ್ರಿಟಿಷರು ನಡೆಸಿದ ವಸಾಹತಿನ ಶೋಷಣೆಗೆ ‘ಪರಿಹಾರ ಸೂತ್ರ’ ಸಾಧ್ಯವಾಗದೆ ಇದ್ದರೂ, ಬ್ರಿಟಿಷ್ ವಸಾಹತಿನಿಂದ ಉಂಟಾದ ಶೋಷಣೆಗಳಿಗೆ ಬ್ರಿಟನ್ ಪ್ರಧಾನಿ ಕ್ಷಮೆ ಯಾಚಿಸುವುದು ಸೂಕ್ತ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ಆಕ್ಸ್ ಫರ್ಡ್ ನಲ್ಲಿ ಬ್ರಿಟಿಷ್ ವಸಾಹತುಗಳ ಶೋಷಣೆ ಬಗ್ಗೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪಡೆದಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್, ಆನ್ ಎರಾ ಆಫ್ ಡಾರ್ಕ್ನೆಸ್: ದಿ ಬ್ರಿಟಿಷ್ ಎಂಪೈರ್ ಇನ್ ಇಂಡಿಯಾ (‘An Era of Darkness: The British Empire In India’) ಎಂಬ ಪುಸ್ತಕ ಹೊರತಂದಿದ್ದಾರೆ.
ತಮ್ಮ ಪುಸ್ತಕದಲ್ಲಿ ಬ್ರಿಟಿಷರು ಭಾರತವನ್ನು ನಾಶ ಮಾಡಿದ ‘ವಿವಿಧ ರೀತಿ’ಗಳ ಬಗ್ಗೆ ಶಶಿ ತರೂರ್ ಮಾಹಿತಿ ನೀಡಿದ್ದಾರೆ. ಪುಸ್ತಕದ ಬಗ್ಗೆ ಪಿಟಿಐ ಗೆ ಸಂದರ್ಶನ ನೀಡಿರುವ ಕಾಂಗ್ರೆಸ್ ನಾಯಕ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ಮಾತನಾಡಿದ್ದು, ” 2019 ಕ್ಕೆ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದು ನೂರು ವರ್ಷಗಳಾಗುತ್ತವೆ. ಬ್ರಿಟಿಷರು ಭಾರತದಲ್ಲಿ ನಡೆಸಿರುವ ಶೋಷಣೆಗೆ ಪರಿಹಾರ ನೀಡುವುದು ಅಸಾಧ್ಯದ ವಿಷಯವೇ ಆಗಿದ್ದರೂ, ಬ್ರಿಟನ್ ಪ್ರಧಾನಿ ಮಂಡಿಯೂರಿ ತಮ್ಮ ಹಿಂದಿನವರು ಮಾಡಿರುವ ಶೋಷಣೆಗೆ ಭಾರತೀಯರ ಕ್ಷಮೆ ಕೋರಿದರೆ ಹಲವು ನೋವುಗಳನ್ನು ಮರೆಸುವಂತಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಜಿಗಳ ಪಾತಕ ಕೃತ್ಯಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧಪಡದೇ ಇದ್ದರೂ ಜರ್ಮನಿಯ ನಾಯಕ ವಿಲ್ಲೆ ಬ್ರಾಂಡ್ಟ್ ಯಹೂದಿಗಳಲ್ಲಿ ಕ್ಷಮೆ ಕೇಳಿದ್ದರು ಹಾಗೂ ಕೊಮಗಟ ಮರು ಘಟನೆಯಲ್ಲಿ ಕೆನಡಾ ನೇರವಾಗಿ ಯಾರನ್ನು ಕೊಲ್ಲದೆ ಇದ್ದರೂ ಕೆನಡಾದ ಪ್ರಧಾನಿ ಇತ್ತೀಚೆಗಷ್ಟೇ ಕ್ಷಮೆ ಯಾಚಿಸಿದ್ದರು. ಈ ಎರಡು ಉದಾಹರಣೆಗಳನ್ನು ನೀಡಿರುವ ಶಶಿ ತರೂರ್, ಕ್ಷಮೆ ಯಾಚನೆ ವಿಷಯದಲ್ಲಿ ಭಾರತದ ಸಂದರ್ಭಕ್ಕೂ ಈ ಎರಡು ಉದಾಹರಣೆಗಳು ಮಾದರಿಯಾಗಿ ನಿಲ್ಲುತ್ತವೆ. ಆದ್ದರಿಂದ ಬ್ರಿಟನ್ ಪ್ರಧಾನಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಕ್ಷಮೆ ಯಾಚಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Comments are closed.