ನವದೆಹಲಿ: ರೈಲಿನಲ್ಲಿ ವಿಶ್ವದರ್ಜೆಯ ಗುಣಮಟ್ಟದ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಭಾರತೀಯ ರೈಲ್ವೇ ಆರಂಭಿಸಲಿರುವ ಹಮ್ ಸಫರ್ 3 ಟಯರ್ ಎಸಿ ಬೋಗಿಯುಳ್ಳ ರೈಲು ನವೆಂಬರ್ ಮಧ್ಯಭಾಗದಲ್ಲಿ ಸಂಚಾರ ಆರಂಭಿಸಲಿದ್ದು, ಈ ರೈಲಿನಲ್ಲಿ ಜಿಪಿಎಸ್, ಸಿಸಿ ಕ್ಯಾಮೆರಾ ಮತ್ತು ಕಾಫಿ ತಯಾರಿಸುವ ಯಂತ್ರ ಇರಲಿದೆ.
ಈ ರೈಲಿನಲ್ಲಿರುವ ವಿಶೇಷತೆಗಳು ಏನಿದೆ ಎನ್ನುವುದು ರೈಲ್ವೇಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹೊಸ ರೈಲಿನಲ್ಲಿ ಏನಿದೆ?
ಸಿಸಿಟಿವಿ, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಮತ್ತು ಹೊಗೆ ಪತ್ತೆ ಹಾಗೂ ನಂದಿಸುವ ವ್ಯವಸ್ಥೆ ಇರಲಿದೆ. ಅಷ್ಟೇ ಅಲ್ಲದೇ ರೂಮ್ ಫ್ರೆಶ್‍ನರ್ ಗಳನ್ನು ಇರಿಸಲಾಗುತ್ತದೆ. ಕಾಫಿ/ ಟೀ ತಯಾರಿಸುವ ಯಂತ್ರವೂ ಇರಲಿದೆ.
ಎಲ್ಲ ಬರ್ತ್ ಗಳಿಗೆ ಪರದೆ ಮತ್ತು ನಡು ದಾರಿಯಲ್ಲೂ ಪರದೆ ಇರಲಿದೆ. ಸದ್ಯಕ್ಕೆ ಈ ಸೌಲಭ್ಯ ಉನ್ನದ ದರ್ಜೆಯ ರೈಲಿನ ಬೋಗಿಯಲ್ಲಿ ಮಾತ್ರ ಲಭ್ಯವಿದೆ.
ಶೌಚಾಲಯದ ಗೋಡೆಯಲ್ಲಿ ಯಾರು ಏನು ಗೀಚದಂತೆ ತಡೆಯಲು ಜೆಲ್ ಲೇಪನವನ್ನು ಮಾಡಲಾಗಿದೆ. ಪ್ರತಿ ಸೀಟಿಗೂ ಲ್ಯಾಪ್‍ಟಾಪ್/ಮೊಬೈಲ್ ಚಾರ್ಜ್ ಮಾಡುವ ಸೌಲಭ್ಯಗಳು ಈ ರೈಲಿನಲ್ಲಿ ಇರಲಿವೆ. ಅಂಧರಿಗಾಗಿ ಬ್ರೈಲ್ ಪ್ರದರ್ಶಕಗಳ ಇರಲಿದೆ.
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿರುವ ರೈಲು ಕೋಚ್ ಫ್ಯಾಕ್ಟರಿ ಈಗಾಗಲೇ ಈ ವ್ಯವಸ್ಥೆ ಹೊಂದಿರುವ ನಾಲ್ಕು ರೈಲುಗಳನ್ನು ರೂಪಿಸಿದ್ದು, 5 ನೇ ರೈಲಿನ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಏನಿದು ಹಮ್‍ಸಫರ್ ರೈಲು?
ಕೆಂದ್ರ ರೈಲ್ವೇ ಸಚಿವ ಸುರೇಶ್ ಕುಮಾರ್ ಈ ಬಾರಿಯ ಬಜೆಟ್‍ನಲ್ಲಿ ಸಂಪೂರ್ಣ ಹವಾನಿಯಂತ್ರಿತ ಬೋಗಿ ಹೊಂದಿರುವ ರೈಲನ್ನು ಆರಂಭಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಈ ರೈಲಿನ ನಿರ್ಮಾಣವಾಗಿದ್ದು ನವೆಂಬರ್ ಮಧ್ಯಭಾಗದಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶದ ಗೋರಕ್ ಪುರದ ನಡುವೆ ಮೊದಲ ರೈಲು ಚಲಿಸಲಿದೆ. ಎರಡು ನಗರಗಳ ಮಧ್ಯೆ ರಾತ್ರಿ ಸಂಪರ್ಕ ಕಲ್ಪಿಸುವ ಉದ್ದೇಶಿದಿಂದ ಈ ರೈಲನ್ನು ಆರಂಭಿಸಲಾಗುತ್ತದೆ.