ಬೆಂಗಳೂರು, ನ.2- ಎಸ್‍ಎಸ್‍ಎಲ್‍ಸಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಇನ್ನು ಮುಂದೆ 10ನೇ ತರಗತಿಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಅದೇ ಶಾಲೆಯಲ್ಲಿ ಅದೇ ತರಗತಿಗೆ ದಾಖಲಾಗುವ ಅವಕಾಶವನ್ನು ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಉಪಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಒಂದು ವರ್ಷದ ಅವಧಿಗೆ ಅನುತ್ತೀರ್ಣ ವಿದ್ಯಾರ್ಥಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿ ತರಗತಿಗೆ ಹಾಜರಾಗಿ ಎಲ್ಲಾ ಆರು ವಿಷಯಗಳಲ್ಲೂ ಪರೀಕ್ಷೆ ಬರೆಯಬೇಕಾಗುತ್ತದೆ.
ಈಗಿರುವ ನಿಯಮಗಳ ಪ್ರಕಾರ ಒಂದು ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಮತ್ತೆ ತರಗತಿಗೆ ಹಾಜರಾಗಲು ಅವಕಾಶ ಇಲ್ಲ. ಆದ್ದರಿಂದ ಸರ್ಕಾರ ಈ ನಿಯಮಕ್ಕೆ ತಿದ್ದುಪಡಿ ತಂದು ಫೇಲ್ ಆದ ವಿದ್ಯಾರ್ಥಿಗೆ ಮತ್ತೊಮ್ಮೆ ಹೊಸ ದಾಖಲಾತಿ ನೀಡಲು ಅವಕಾಶ ಕಲ್ಪಿಸಿದೆ.
ಈ ಅವಕಾಶವನ್ನು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನೀಡಲು ಸರ್ಕಾರ ಮುಂದಾಗಿತ್ತು. ಆದರೆ ಇದೀಗ ಮೊದಲು ಎಸ್‍ಎಸ್‍ಎಲ್‍ಸಿಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಮಾತ್ರ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಈ ಬಗ್ಗೆ ನಿಖರವಾಗಿ ವಿವರಿಸಲಾಗಿದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗೆ ಅದೇ ಶಾಲೆಯಲ್ಲಿ ಮರು ಸೇರ್ಪಡೆಗೊಂಡು ಎಲ್ಲಾ ಆರು ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಕಡಿಮೆ ಸಾಧನೆ ಕಂಡುಬರುತ್ತಿರುವುದರಿಂದ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಫಲಿತಾಂಶ ಹಿನ್ನಡೆಯಿಂದ ವಿದ್ಯಾರ್ಥಿಗಳು, ಪೋಷಕರು ಸಂಕಷ್ಟ ಅನುಭವಿಸುತ್ತಾರೆ. ಫೇಲಾದ ವಿದ್ಯಾರ್ಥಿಗಳು ಒಂದು ವರ್ಷ ಕಾಲ ಮನೆಯಲ್ಲೇ ಕುಳಿತಿರಬೇಕಾಗುತ್ತದೆ.
ಕೋಚಿಂಗ್‍ಗಾಗಿ ಅವರನ್ನು ಎಲ್ಲಿಗೆ ಸೇರಿಸಬೇಕು ಎಂಬುದು ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಆದ್ದರಿಂದ ಸರ್ಕಾರ ಅವರನ್ನು ಮತ್ತೆ ಶಾಲೆಗೆ ಸೇರಿಸಿಕೊಳ್ಳಲು ಮುಂದಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತರ ವಿದ್ಯಾರ್ಥಿಗಳು ಪಾವತಿಸುವ ಶುಲ್ಕದಷ್ಟೇ ಹಣವನ್ನು ಫೇಲ್ ಆದ ವಿದ್ಯಾರ್ಥಿ ಪಾವತಿಸಬೇಕು. ಆದರೆ ಆ ವಿದ್ಯಾರ್ಥಿ ಎಲ್ಲಾ 6 ವಿಷಯಗಳಲ್ಲೂ ಪರೀಕ್ಷೆ ಬರೆಯಬೇಕು. ಒಂದು ವರ್ಷ ಮಾತ್ರ ಆ ವಿದ್ಯಾರ್ಥಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಮತ್ತೆ ಅನುತ್ತೀರ್ಣನಾದರೆ ಶಾಲೆಗೆ ಬರಲು ಅನುಮತಿ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಫೇಲ್ ಆದ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುವ ಟ್ಯುಟೋರಿಯಲ್‍ಗಳ ಮೇಲೆ ನಿಯಂತ್ರಣ ಹೇರುವುದು ಕೂಡ ಇದರ ಹಿಂದಿರುವ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವರು ಈ ನಿಯಮವನ್ನು ಸ್ವಾಗತಿಸಿದ್ದಾರೆ. ಆದರೆ ಕೆಲವು ಪೋಷಕರು, ವಿದ್ಯಾರ್ಥಿ ಎಲ್ಲಾ ಆರು ವಿಷಯಗಳಲ್ಲಿ ಪರೀಕ್ಷೆ ಬರೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಇದು ಬಹಳ ಕಠಿಣ ಕೆಲಸ. ಆತ ಫೇಲ್ ಆದ ವಿಷಯಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರೆ ಚೆನ್ನಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.