ರಾಷ್ಟ್ರೀಯ

ಭೋಪಾಲ್ ಉಗ್ರರ ಎನ್ ಕೌಂಟರ್ ಮೇಲೆ ‘ಕಣ್ಣು’ ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿಡಿಯೋ

Pinterest LinkedIn Tumblr

bopal

ಭೋಪಾಲ್: ಭೋಪಾಲ್ ಸಮೀಪ ಉಗ್ರರ ವಿರುದ್ಧ ನಡೆದ ಪೊಲೀಸರ ಎನ್ ಕೌಂಟರ್ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳನ್ನು ಮುಂದಿಟ್ಟುಕೊಂಡು ಎನ್ ಕೌಂಟರ್ ಪ್ರಹಸನವೇ ನಕಲಿ ಎಂದು ಕೆಲವರು ವಾದ ಮಾಡುತ್ತಿದ್ದಾರೆ.

ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಸಿಮಿ ಉಗ್ರರು ಓರ್ವ ಪೊಲೀಸ್ ಪೇದೆಯನ್ನು ಕೊಂದು ಬಳಿಕ ಕೆಲ ಮಾರಣಾಂತಿಕ ಆಯುಧಗಳೊಂದಿಗೆ ಪರಾರಿಯಾಗಿದ್ದರು. ಪರಾರಿಯಾದ ಉಗ್ರರಿಗಾಗಿ ತೀವ್ರ ಶೋಧ ನಡೆಸಿದ ಪೊಲೀಸರು ಅಂತಿಮವಾಗಿ ಭೋಪಾಲ್ ಹೊರವಲಯದ ಈಟ್ ಖೇಡಿ ಎಂಬ ಗ್ರಾಮದ ಬಳಿ ಎಲ್ಲ 8 ಉಗ್ರರನ್ನು ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದರು.

ಇದೀಗ ಈ ಎನ್ ಕೌಂಟರ್ ಕುರಿತ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎನ್ ಕೌಂಟರ್ ಪ್ರಕ್ರಿಯೆಯೇ ವಿವಾದಕ್ಕೀಡಾಗಿದೆ. ಪ್ರಸ್ತುತ ಹರಿದಾಡುತ್ತಿರುವ ವಿಡಿಯೋದಲ್ಲಿ ಉಗ್ರರು ಒಂದು ದೊಡ್ಡ ಬಂಡೆಗಲ್ಲಿನ ಮೇಲೆ ನಿಂತಿದ್ದು, ದೂರದಿಂದ ಅವರತ್ತ ಪೊಲೀಸರು ಗುಂಡು ಹಾರಿಸುತ್ತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಸತ್ತ ಉಗ್ರನ ಮೇಲೆ ಓರ್ವ ಅಧಿಕಾರಿ ಹತ್ತಿರದಿಂದಲೇ ಗುಂಡು ಹಾರಿಸುತ್ತಿದ್ದಾನೆ. ಈ ಎಲ್ಲ ವಿಡಿಯೋಗಳು ಇದೀಗ ಪೊಲೀಸ ಮೇಲೆ ಹಲವು ಅನುಮಾನಗಳು ಮೂಡುವಂತೆ ಮಾಡುತ್ತಿದ್ದು, ಇದು ಪೊಲೀಸರು ನಡೆಸಿದ ನಕಲಿ ಎನ್ ಕೌಂಟರ್ ಎಂದು ಹಲವು ರಾಜಕೀಯ ಮುಖಂಡರು ಆರೋಪಿಸಿದ್ದಾರೆ.

ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಘಟನೆ ಕುರಿತಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಮತ್ತು ಅಲ್ಲದೆ ಇದಕ್ಕೆ ಪೂರಕ ಸಾಕ್ಷ್ಯಾಧಾರಗಳನ್ನು ನೀಡುವಂತೆ ಮಧ್ಯ ಪ್ರದೇಶ ಸರ್ಕಾರವನ್ನು ಕೇಳಿದ್ದಾರೆ.

ಪ್ರಮುಖವಾಗಿ ಸತ್ತ ವ್ಯಕ್ತಿಯ ಮೇಲೆ ಗುಂಡು ಹಾರಿಸುವ ಅವಶ್ಯಕತೆ ಏನಿತ್ತು ಎಂದು ಕೆಲವು ಕೇಳುತ್ತಿದ್ದಾರೆ. ಹೀಗಾಗಿ ಜೈಲಿನಿಂದ ತಪ್ಪಿಸಿಕೊಂಡ 8 ಮಂದಿ ಉಗ್ರರ ಎನ್ ಕೌಂಟರ್ ಇದೀಗ ವಿವಾದಕ್ಕೀಡಾಗಿದೆ.

Comments are closed.