ಥಾಣೆ, ಮಹಾರಾಷ್ಟ್ರ(ಅ. 29): ಇತ್ತೀಚೆಗೆ ಜೋರು ಸದ್ದು ಮಾಡುತ್ತಿರುವ ಕಾಲ್ ಸೆಂಟರ್ ಹಗರಣದಲ್ಲಿ ವಿರಾಟ್ ಕೊಹ್ಲಿ ಹೆಸರು ಕೇಳಿಬಂದಿದೆ. ಆದರೆ, ತನಿಖೆ ನಡೆಸುತ್ತಿರುವ ಪೊಲೀಸರ ಪ್ರಕಾರ ವಿರಾಟ್ ಕೊಹ್ಲಿ ಇಲ್ಲಿ ಅಮಾಯಕ. ಹಗರಣದ ಕಿಂಗ್’ಪಿನ್’ನ ಕಾರಿನ ಮೊದಲ ಮಾಲಿಕನಾಗಿದ್ದ ಅಂಶ ಹೊರತುಪಡಿಸಿದರೆ ಹಗರಣದಲ್ಲಿ ಕೊಹ್ಲಿಯ ಯಾವ ಪಾತ್ರವೂ ಇಲ್ಲವೆಂದು ಪೊಲೀಸು ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಭಾರತೀಯ ಕ್ರಿಕೆಟಿಗ ನಿಟ್ಟುಸಿರು ಬಿಡುವಂತಾಗಿದೆ.
ಕಿಂಗ್’ಪಿನ್ ಗರ್ಲ್’ಫ್ರೆಂಡ್ ಹಾಗೂ ಕೊಹ್ಲಿ:
ಕಾಲ್ ಸೆಂಟರ್ ಹಗರಣದ ಕಿಂಗ್’ಪಿನ್ ಎನ್ನಲಾದ ಸಾಗರ್ ಥಕ್ಕರ್ ಅಲಿಯಾಸ್ ಶ್ಯಾಗಿಯ ಗರ್ಲ್’ಫ್ರೆಂಡ್’ಳು ವಿರಾಟ್ ಕೊಹ್ಲಿಯ ದೊಡ್ಡ ಫ್ಯಾನ್. ತನ್ನ ಗೆಳತಿಗೆ ಕೊಹ್ಲಿಯ ಬಳಿ ಇದ್ದ ಆಡಿ ಆರ್-8 ಕಾರನ್ನು ಸರ್’ಪ್ರೈಸ್ ಗಿಫ್ಟ್ ಆಗಿ ನೀಡಲು ನಿರ್ಧರಿಸುತ್ತಾನೆ. ಈ ಪ್ರತಿಷ್ಠಿತ ಕಾರಿನ ಮಾರುಕಟ್ಟೆ ಬೆಲೆ 3 ಕೋಟಿ ರೂ. ವಿರಾಟ್ ಕೊಹ್ಲಿಯ ಪ್ರತಿನಿಧಿಗಳು ಈ ಕಾರನ್ನು ಶ್ಯಾಗಿಗೆ 2.5 ಕೋಟಿ ರೂ.ಗೆ ಮಾರುತ್ತಾರೆ. ಶ್ಯಾಗಿ ಅಕಾ ಸಾಗರ್ ಥಕ್ಕರ್’ನ ಹಿನ್ನೆಲೆ ಯಾವುದೂ ಕೊಹ್ಲಿಗಾಗಲೀ ಅಥವಾ ಅವರ ಪ್ರತಿನಿಧಿಗಳಿಗಾಗಲೀ ಗೊತ್ತಿರುವುದಿಲ್ಲ. ಶ್ಯಾಗಿಯು ಕಾಲ್’ಸೆಂಟರ್ ಹಗರಣದಲ್ಲಿ ಸಿಕ್ಕಿಬೀಳುವುದಕ್ಕೂ ಕೊಹ್ಲಿ ತನ್ನ ಕಾರನ್ನು ಮಾರುವುದಕ್ಕೂ ಯಾವುದೇ ಸಂಬಂಧವಿಲ್ಲ. ಈ ಹಗರಣದಲ್ಲಿ ಕೊಹ್ಲಿಯ ಯಾವುದೇ ಪಾತ್ರವಿಲ್ಲವೆಂದು ಪೊಲೀಸರು ದೃಢಪಡಿಸಿದ್ದಾರೆ.
ಅಂದಹಾಗೆ, ಈ ಕಾಲ್’ಸೆಂಟರ್ ಹಗರಣದ ರೂವಾರಿ ಸಾಗರ್ ಥಕ್ಕರ್ ಸದ್ಯಕ್ಕೆ ಪರಾರಿಯಾಗಿದ್ದು, ದುಬೈನಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ರಾಷ್ಟ್ರೀಯ
Comments are closed.