ಲಖನೌ: ಉತ್ತರಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ದೀಪಾವಳಿ ಹಬ್ಬದ ಪಟಾಕಿ ಮಾರುಕಟ್ಟೆಯಲ್ಲೂ ರಾಜಕಾರಣಿಗಳ ಹೆಸರಿನದ್ದೇ ದರ್ಬಾರು!
‘ಸಮಾಜವಾದಿ ರಾಕೆಟ್ಸ್’ ಪಟಾಕಿ ಪೊಟ್ಟಣಗಳ ಮೇಲೆ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್, ಅಮರ್ ಸಿಂಗ್ ಅವರಿಗೆ ಸಿಹಿ ತಿನ್ನಿಸುವ ಫೋಟೋ ರಾರಾಜಿಸುತ್ತಿದೆ. ಮತ್ತೊಂದೆಡೆ ತೀಕ್ಷ್ಣ ಮಾತುಗಳ ರಾಜಕಾರಣಿ ಬಿಎಸ್‍ಪಿ ನೇತಾರೆ ಮಾಯಾವತಿಯವರ ಹೆಸರಿನ ಪಟಾಕಿಯೂ ಕಾಣಸಿಗುತ್ತದೆ. ಅದು ಬರೀ ಪಟಾಕಿಯಲ್ಲ, ‘ಮಾಯಾವತಿ ಬಾಂಬ್’!
1,000 ಪಟಾಕಿಗಳ ಪೊಟ್ಟಣಕ್ಕೆ ‘ಅಖಿಲೇಶ್ ಕಿ ಲಾರಿ ಅನ್‍ಲಿಮಿಟೆಡ್’ ಎಂದು ಹೆಸರಿಡಲಾಗಿದೆ. ಅಮರ್ ಸಿಂಗ್ ಕಿ ಫುಲ್ಜರಿ, ಸರ್ಜಿಕಲ್ ಸ್ಟ್ರೈಕ್ ಮೊದಲಾದ ಹೆಸರಿನ ಪಟಾಕಿಗಳೂ ಮಾರುಕಟ್ಟೆಯಲ್ಲಿವೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಸಮಾಜವಾದಿ ಪಕ್ಷ ತಮ್ಮ ಯಾದವೀ ಕಲಹವನ್ನು ಕೊನೆಗೊಳಿಸಲು ಕಸರತ್ತು ನಡೆಸುತ್ತಿದ್ದೆ. ಅದೇ ವೇಳೆ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಯಾದವ್ ಕುಟುಂಬ ಜತೆಯಾಗಿ ಬೆರೆತು ದೀಪಾವಳಿ ಆಚರಿಸಿದೆ.