ಭಾರತದಲ್ಲಿ ಮದುವೆ ವಿಭಿನ್ನ ರೀತಿಯಲ್ಲಿ ನಡೆಯುತ್ತದೆ. ಇದು ಕೆಲವು ಸಂಪ್ರದಾಯದ ಹೆಸರಿನಲ್ಲಿ ನಡೆದರೆ, ಇನ್ನುಕೆಲವು ಧರ್ಮದ ಹೆಸರಿನಲ್ಲಿ ನಡೆಯುತ್ತದೆ. ಇದರ ಹಿಂದೆ ಕೆಲವೊಂದು ಆಚರಣೆಗಳು ಕಣ್ಣು ಮುಚ್ಚಿ ಆಚರಿಸಲಾಗುತ್ತಿದೆ. ಭಾರತ ಹಲವು ಧರ್ಮ ಮತ್ತು ಜಾತಿಗಳ ನೆಲೆಬೀಡು. ಇಲ್ಲಿ ಒಂದೊಂದು ಧರ್ಮಗಳ, ಜಾತಿಗಳ ಆಚರಣೆಗಳು ವಿಭಿನ್ನ. ಮದುವೆಯಲ್ಲೂ ಇದು ಕಂಡುಬರುತ್ತದೆ. ಹಾಗಾಗಿ ಭಾರತೀಯ ಮದುವೆಗಳು ಇತರೆಲ್ಲಾ ದೇಶಗಳ ಮದುವೆಗಳಿಗಿಂತ ವೈಶಿಷ್ಟತೆಯಿಂದ ಕೂಡಿದೆ. ಪ್ರತಿಯೊಂದು ಜಾತಿಯೂ ತಮ್ಮದೇ ಆದ ಸಂಪ್ರದಾಯ ಹೊಂದಿದೆ. ಅದರ ಪ್ರಕಾರವೇ ಅವರ ಮದುವೆಗಳು ನಡೆಯುತ್ತವೆ. ಕೆಲವೊಂದು ಮದುವೆಗಳು ವಿಲಕ್ಷಣ, ವಿಚಿತ್ರ ಎನಿಸುವಷ್ಟು ಸಂಪ್ರದಾಯವನ್ನು ಹೊಂದಿವೆ.
ಬಂಗಾಳಿ ಮದುವೆ
ಮದುವೆಯ ಪ್ರಥಮ ರಾತ್ರಿಯ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಈ ವಿಷಯದಲ್ಲಿ ವಧು ಮತ್ತು ವರರನ್ನು ಗುರಿಯಾಗಿಸಿಕೊಂಡು ಹಾಸ್ಯ ಮಾಡುವುದು ಸಾಮಾನ್ಯ. ವಿವಿಧ ಕಾರಣಗಳಿಗಾಗಿ ಫಸ್ಟ್ ನೈಟ್ ನಮ್ಮಲ್ಲಿ ಪ್ರಸಿದ್ಧಿಯಾಗಿದೆ. ಈ ರಾತ್ರಿಯನ್ನು ಜಾತಿ, ಮತಭೇದಗಳಿಲ್ಲದೆ ಎಲ್ಲರೂ ಆಚರಿಸುತ್ತಾರೆ. ಈ ರಾತ್ರಿ ನವ ದಂಪತಿ ಒಟ್ಟಾಗಿ ತಮ್ಮ ಅನುಭವ ಹಂಚಿಕೊಳ್ಳುವುದು, ಮಲಗುವುದು ಸಹಜ. ಆದರೆ ಬಂಗಾಳಿ ನವ ದಂಪತಿಗೆ ಮಾತ್ರ ಈ ಅವಕಾಶ ಇಲ್ಲ. ಈ ಮಹತ್ವದ ರಾತ್ರಿಯಲ್ಲಿ ಗಂಡ, ಹೆಂಡತಿ ಪ್ರತ್ಯೇಕ ಮಲಗಬೇಕು. ಅದು ಅಲ್ಲಿನ ನಿಯಮ. ಒಮ್ಮೆ ಇಬ್ಬರೂ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಅವರು ಅಂದು ರಾತ್ರಿ ಪ್ರತ್ಯೇಕವಾಗಿ ಮಲಗಬೇಕು. ಏಕೆಂದರೆ ಮರುದಿನ ನಡೆಯುವ ಕಾರ್ಯಕ್ರಮಕ್ಕೆ ಅವರು ಸುಸ್ತಾಗದೆ ಲವಲವಿಕೆಯಿಂದ ಪಾಲ್ಗೊಳ್ಳಬೇಕು ಎಂಬುದು ಇದರ ಹಿಂದಿರುವ ಉದ್ದೇಶ ಎನ್ನಲಾಗುತ್ತದೆ.
ಉತ್ತರ ಪ್ರದೇಶದ ಬುಡಕಟ್ಟು ಮದುವೆ
ಕಾನ್ಪುರ್ ಜಿಲ್ಲೆಯ ಸರಸೌಲ್ ಎಂಬ ಪಟ್ಟಣದಲ್ಲಿ ವಿಶಿಷ್ಟ ರೀತಿಯ ಮದುವೆ ನಡೆಯುತ್ತದೆ. ಇಲ್ಲಿ ವಧು ಮತ್ತು ವರನ ನಡುವೆ ಸ್ವಾಗತ ಬಹಳ ವಿಶಿಷ್ಟವಾಗಿ ನಡೆಯುತ್ತದೆ. ಹೆಚ್ಚಿನ ಕಡೆಗಳಲ್ಲಿ ವಧು ಮತ್ತು ವರರನ್ನು ಹೂವು, ರೋಸ್ ವಾಟರ್ ಸಿಂಪಡಣೆಯ ಮೂಲಕ ಸ್ವಾಗತಿಸಲಾಗುತ್ತದೆ. ಆದರೆ ಇಲ್ಲಿ ಮಾತ್ರ ಟೋಮೊಟೋಗಳನ್ನು ಪರಸ್ಪರ ಎಸೆದು ಬೈದಾಡಿಕೊಂಡು ಮುಖಾಮುಖಿಯಾಗುತ್ತಾರೆ. ಅವರ ಪ್ರಕಾರ, ಕೆಟ್ಟ ಆರಂಭದ ಸಂಬಂಧ ಕೊನೆಯಲ್ಲಿ ಪ್ರೀತಿಯಲ್ಲಿ ಕೊನೆಗೊಳ್ಳುತ್ತದೆ ಎಂದಾಗಿದೆ.
ತಮಿಳು ಬ್ರಾಹ್ಮಣರ ಮದುವೆ
ಮದುವೆ ಮಂಟಪದಲ್ಲಿ ವರ ಸನ್ಯಾಸತ್ವ ಸೀಕ್ವರಿಸಿದರೆ ಏನಾಗಬಹುದು ? ಹೌದು ಇಂತಹ ವಿಲಕ್ಷಣ ಮದುವೆಗಳೂ ನಮ್ಮಲ್ಲಿ ನಡೆಯುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು. ತಮಿಳು ಬ್ರಾಹ್ಮಣರಲ್ಲಿ ಅದರಲ್ಲೂ ಅಯ್ಯರ್ ಮದುವೆಯಲ್ಲಿ ಈ ಸಂಪ್ರದಾಯ ನಡೆಯುತ್ತದೆ. ವರ ಮಂಟಪಕ್ಕೆ ಬರುವ ಸ್ವಲ್ಪ ಮೊದಲು ತನ್ನ ಮನಸ್ಥಿತಿ ಬದಲಾಯಿಸಿಕೊಂಡು ಸನ್ಯಾಸತ್ವ ಸ್ವೀಕರಿಸುತ್ತಾನೆ. ಆಗ ವಧುವಿನ ತಂದೆ ಆತನನ್ನು ಸಂಪರ್ಕಿಸಿ, ತನ್ನ ಮಗಳೊಂದಿಗೆ ಗೃಹಸ್ಥಾಶ್ರಮ ಪ್ರವೇಶಿಸುವಂತೆ ಬೇಡಿಕೊಳ್ಳುತ್ತಾನೆ. ಇದಕ್ಕೆ ಮಣಿದು ಆತ ಗೃಹಸ್ಥಾಶ್ರಮ ಪ್ರವೇಶಿಸುತ್ತಾನೆ. ಇದು ಅಲ್ಲಿನ ಸಂಪ್ರದಾಯವಾಗಿದೆ.
ಸಿಂಧಿ ಮದುವೆ
ಸಿಂಧಿ ಮದುವೆ ಇನ್ನೂ ವಿಚಿತ್ರ. ಇಲ್ಲಿ ಸಾಂತ್ ಎಂಬ ಧಾರ್ಮಿಕ ಆಚರಣೆ ನಡೆಯುತ್ತದೆ. ಇದರ ಪ್ರಕಾರ ಅರ್ಚಕ ವಧು ಮತ್ತು ವರನ ಎಡ ಕಾಲಿಗೆ ಕಾಲ್ಚೈನು ಕಟ್ಟುತ್ತಾರೆ. ಏಳು ಮಂದಿ ಮುತ್ತೈದೆಯರು ಆತನ ತಲೆ ಮೇಲೆ ಎಣ್ಣೆ ಸುರಿಯುತ್ತಾರೆ. ವರನ ಕಡೆಯವರು ಆತನ ಬಟ್ಟೆಗಳನ್ನು ಬೆಂಕಿಗೆ ಹಾಕುತ್ತಾರೆ. ಅದರ ಮೇಲೆ ಕೆಟ್ಟ ದೃಷ್ಟಿ ಬಿದ್ದಿರುತ್ತದೆ ಎಂಬ ಕಾರಣಕ್ಕಾಗಿ ಈ ರೀತಿ ಮಾಡುತ್ತಾರೆ.
ಬಿಹಾರಿ ಮದುವೆ
ವಧುಗಳ ಸಾಮಥ್ರ್ಯ ಪರೀಕ್ಷಿಸುವುದು ಭಾರತದಲ್ಲಿ ಸಹಜ ಪ್ರಕ್ರಿಯೆ. ಬಿಹಾರಿಗಳ ಮದುವೆಯಲ್ಲಿ ವಧುವಿನ ತಲೆಯ ಮೇಲೆ ಮಣ್ಣಿನ ಪಾತ್ರೆಗಳನ್ನು ಇಟ್ಟು ನಡೆಯುವ ಸಂಪ್ರದಾಯವಿದೆ. ಆಕೆ ಅದನ್ನು ತಲೆಯ ಮೇಲೆ ಇಟ್ಟು ಹಿರಿಯರ ಆಶೀರ್ವಾದ ಪಡೆಯಬೇಕು. ತಲೆಯ ಮೇಲೆ ಅದನ್ನು ಇಟ್ಟು ಸಮತೋಲನ ಕಾಯ್ದುಕೊಂಡರೆ, ಮುಂದಿನ ದಿನಗಳಲ್ಲಿ ಆಕೆ ಕುಟುಂಬದಲ್ಲಿಯೂ ಸಮತೋಲನ ಕಾಪಾಡುತ್ತಾಳೆ ಎಂಬುದು ಇದರ ಹಿಂದಿನ ಮರ್ಮ ಎನ್ನಲಾಗುತ್ತದೆ.
ಬೆಂಗಾಲಿ ಮದುವೆ
ಬೆಂಗಾಲಿ ಮದುವೆಯಲ್ಲಿ ಮಧುವಿನ ತಾಯಿ ಮದುವೆ ಸಂದರ್ಭದಲ್ಲಿ ಹಾಜರಿರುವುದಿಲ್ಲ. ಇದಕ್ಕೆ ಬದಲಾಗಿ ಆಕೆಯ ಸಂಬಂಧಿಕ ಮಹಿಳೆಯರು ಪಾತ್ರೆಯಲ್ಲಿ ಹೂವು, ಸಿಹಿ ತಿಂಡಿ ಹಿಡಿದು ವಧುವಿಗೆ ಆರತಿ ಎತ್ತುತ್ತಾರೆ. ಬಳಿಕ ಅವರೆಲ್ಲರೂ ಗಂಗಾ ನದಿಯಿಂದ ಆಶೀರ್ವಾದ ಪಡೆಯುತ್ತಾರೆ.
Comments are closed.