ರಾಷ್ಟ್ರೀಯ

ಈಗ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಮುಂದಿನ ಸಿಎಂ ವಿಚಾರ ಚುನಾವಣೆ ಬಳಿಕ: ಮುಲಾಯಂ

Pinterest LinkedIn Tumblr

mulayamಲಖನೌ: ‘ನಮ್ಮದು ಒಂದೇ ಪರಿವಾರ, ಒಂದೇ ಪಕ್ಷ. ನಾವು ಸಂಪೂರ್ಣ ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಸಾಮರ್ಥ್ಯ್ಕೆ ಯಾವುದೇ ಧಕ್ಕೆಯಾಗಿಲ್ಲ’ ಎಂದು ಆಡಳಿತಾರೂಢ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಅವರು ಮಂಗಳವಾರ ಇಲ್ಲಿ ಘೋಷಿಸಿದರು.

ಪುತ್ರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಅಖಿಲೇಶ್ ಯಾದವ್, ಅಖಿಲೇಶ್ ಸಂಪುಟದಿಂದ ವಜಾಗೊಂಡಿರುವ ಸಹೋದರ ಶಿವಪಾಲ್ ಸಿಂಗ್ ಯಾದವ್ ಅವರ ಜೊತೆಗೆ ಬಿಕ್ಕಟ್ಟಿನ ಬಗ್ಗೆ ಸುದೀರ್ಘ ತ್ರಿಕೋನ ಮಾತುಕತೆ ನಡೆಸಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಲಾಯಂ ಮಾತನಾಡಿದರು.

‘2012ರಲ್ಲಿ ನನ್ನ ಹೆಸರಿನಲ್ಲಿ ಬಹುಮತ ಬಂತು. ನಾವು ಅಖಿಲೇಶ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆವು. ಈಗ ಜವಾಬ್ದಾರಿಗಳನ್ನು ನಿಭಾಯಿಸಬೇಕಾದದ್ದು ಅವರ ಕೆಲಸ’ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಇಲ್ಲ ಎಂಬುದನ್ನು ಮಾಜಿ ಮುಖ್ಯಮಂತ್ರಿ ಸ್ಪಷ್ಟ ಪಡಿಸಿದರು.

ಅಮರ ಸಿಂಗ್ ಅವರ ಹೇಳಿಕೆಗಳ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ‘ಎಲ್ಲಕ್ಕೂ ಅಮರಸಿಂಗ್ ಅವರನ್ನು ಏಕೆ ಎಳೆದು ತರುತ್ತೀರಿ?’ ಎಂದು ಪ್ರತಿಪ್ರಶ್ನೆ ಹಾಕಿದ ಮುಲಾಯಂ , 2017ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ‘ನಮಗೆ ಬಹುಮತ ಬರಲಿ. ಆ ಬಳಿಕ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ನಿಮಗೆ ಗೊತ್ತಾಗುತ್ತದೆ’ ಎಂದು ಉತ್ತರಿಸಿದರು.

ವಜಾಗೊಂಡಿರುವ ಸಚಿವರನ್ನು ಸಂಪುಟಕ್ಕೆ ಮರು ಸೇರ್ಪಡೆ ಮಾಡಲಾಗುವುದೇ ಎಂಬ ಪ್ರಶ್ನೆಗೆ ‘ಈ ವಿಷಯವನ್ನು ನಾನು ಮುಖ್ಯಮಂತ್ರಿಗೆ ಬಿಡುತ್ತಿದ್ದೇನೆ’ ಎಂದು ಹೇಳಿದರು. ರಾಮ್ ಗೋಪಾಲ್ ಯಾದವ್ ಹೇಳಿಕೆಯನ್ನು ಪ್ರಸ್ತಾಪಿಸಿದ ಮುಲಾಯಂ ಸಿಂಗ್ ‘ಅವರ ವಿಚಾರಕ್ಕೆ ನಾನು ಈಗ ಮಹತ್ವ ನೀಡುವುದಿಲ್ಲ’ ಎಂದು ನುಡಿದರು.

Comments are closed.