ಬೆಂಗಳೂರು, ಅ. ೨೫-ಕೌಟುಂಬಿಕ ಕಾರಣಗಳಿಂದ ದೂರವಾಗಿದ್ದ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಮ್ಕಿ ಮತ್ತೆ ಒಂದಾಗಿದ್ದಾರೆ.
ಕಾರಣಾಂತರದಿಂದ ದಂಪತಿ ನಡುವೆ ಕಲಹ ಉಂಟಾಗಿ ಇಬ್ಬರೂ ಬೇರೆಯಾಗಿದ್ದರು. ಪ್ರಕರಣ ಪೊಲೀಸ್ ಠಾಣೆವರೆಗೂ ಹೋಗಿತ್ತು. ಅಲ್ಲದೆ ಇಬ್ಬರೂ ಕಳೆದ ಒಂದೂವರೆ-ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಮಾಡುತ್ತಿದ್ದರು. ಇದೀಗ ಈ ದಂಪತಿ ಮತ್ತೆ ಒಂದಾಗಿದ್ದರೆ ಎಂದು ಮೂಲಗಳು ತಿಳಿಸಿವೆ.
ದರ್ಶನ್ ದಂಪತಿ ದೂರವಾಗಿರುವುದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಈಗ ಇವರು ಮತ್ತೆ ಒಂದಾಗಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ರಾಜರಾಜೇಶ್ವರಿನಗರದಲ್ಲಿರುವ ದರ್ಶನ್ ಮನೆ ರಾಜಕಾಲುವೆ ಮೇಲೆ ನಿರ್ಮಾಣಗೊಂಡಿದೆ ಎಂದು ಜಿಲ್ಲಾಡಳಿತ ನೋಟಿಸ್ ನೀಡಿದ್ದ ಸಂದರ್ಭದಲ್ಲಿ ದರ್ಶನ್ ಪರವಾಗಿ ಅವರ ಪತ್ನಿ ಉತ್ತರ ನೀಡಿದ್ದರು.
ಕೌಟಂಬಿಕ ಕಾರಣದ ನೆಪವೊಡ್ಡಿ ಈ ದಂಪತಿ ಹಾದಿ ಬೀದಿ ರಂಪ ಮಾಡಿಕೊಂಡಿತ್ತು. ದರ್ಶನ್ ಕೆಲ ದಿನಗಳ ಕಾಲ ಜೈಲಿನಲ್ಲಿಯೂ ಇರುವಂತಾಯಿತು.ಅದಾದ ಬಳಿಕ ಮತ್ತೆ ಒಂದಾಗಿದ್ದ ಜೋಡಿ ಸಂಸಾರದಲ್ಲಿ ಸರಿ ಬರಲಿಲ್ಲ ಎಂದು ದೂರವಾಗಿದ್ದರು. ಇದೀಗ ಮತ್ತೆ ಒಂದಾಗಿದ್ದಾರೆ.
ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ದರ್ಶನ್ ಮನೆ ನಿರ್ಮಿಸಲಾಗಿದೆ ಎನ್ನಲಾಗಿದ್ದು, ಜಿಲ್ಲಾಡಳಿತ ಅದನ್ನು ವಶಕ್ಕೆ ಪಡೆದಿದೆ. ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.