ಲಖನೌ: ಉತ್ತರ ಪ್ರದೇಶ ಆಡಳಿತಾರೂಢ ಸಮಾಜವಾದಿ ಪಕ್ಷದ ಆಂತರಿಕ ಕಲಹ ಮುಗಿಲು ಮುಟ್ಟಿದೆ. ತೊಡೆತಟ್ಟಿ ಶಕ್ತಿ, ಪ್ರಾಬಲ್ಯ ಪ್ರದರ್ಶನಕ್ಕೆ ನಿಂತಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ಬೆಂಬಲಿಗರು ಸೋಮವಾರ ಬೆಳಗ್ಗೆ ಇಲ್ಲಿನ ಪಕ್ಷದ ಕಚೇರಿ ಮುಂದೆ ಕೈಕೈ ಮಿಲಾಯಿಸಿಕೊಂಡಿರುವ ಘಟನೆ ನಡೆದಿದೆ. ಒಟ್ಟಾರೆ ಯಾದವ ಪರಿವಾರದ ಕಲಹ ಈಗ ಇನ್ನಷ್ಟು ತಾರಕಕ್ಕೇರಿದೆ.
ಪರಿಣಾಮ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದ್ದು, ಪಕ್ಷದಿಂದಲೇ ಅಖಿಲೇಶ್ ಯಾದವ್ ಉಚ್ಚಾಟನೆ ಆಗುತ್ತಾರಾ ಎನ್ನುವುದಕ್ಕೆ ಇಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ನಿರ್ಧಾರಗೊಳ್ಳಲಿದೆ. ಸಮಾಜವಾದಿ ಪಕ್ಷದ ಧುರೀಣ ಮುಲಾಯಂ ಸಿಂಗ್ ಯಾದವ್ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಪಕ್ಷದ ಸ್ಥಿತಿಗತಿ ನಿಂತಿದೆ.
ಭಾನುವಾರವೇ ಈ ಎರಡು ಬಣಗಳ ಕಾರ್ಯಕರ್ತರು ಮಾತಿನ ಚಕಮಕಿ ನಡಿಸಿಕೊಂಡಿದ್ದರು. ಮುಂದುವರಿದ ಭಾಗ ಎನ್ನುವಂತೆ ಸೋಮವಾರ ಬೆಳಗ್ಗೆ ಸಭೆಯ ಹಿನ್ನೆಲೆಯಲ್ಲಿ ಅಖಿಲೇಶ್ ಮತ್ತು ಶಿವಪಾಲ್ ಬೆಂಬಲಿಗರು ಪಕ್ಷದ ಕಚೇರಿ ಮುಂದೆ ಸೇರಿದ್ದರು. ಇದ್ದಕ್ಕಿದ್ದಂತೆ ಬೆಂಬಲಿಗರ ನಡುವೆ ಮಾತಿನ ಚಕಮಕಿ ಆರಂಭವಾಗಿ ಹೊಡೆದಾಡಿಕೊಳ್ಳುವ ಹಂತಕ್ಕೂ ತಲುಪಿತು ಎಂದು ಹೇಳಲಾಗಿದೆ.
ಅಖಿಲೇಶ್ ಯಾದವ್ ಅವರು ತಮ್ಮ ಸಚಿವ ಸಂಪುಟದಿಂದ ಚಿಕ್ಕಪ್ಪ ಶಿವಪಾಲ್ ಸೇರಿ ನಾಲ್ವರು ಸಚಿವರನ್ನು ವಜಾಗೊಳಿಸಿರುವುದೇ ಆಂತರಿಕ ಕಲಹ ಮುಗಿಲೇರಲು ಕಾರಣವಾಗಿದೆ.
Comments are closed.