ರಾಷ್ಟ್ರೀಯ

ಭುವನೇಶ್ವರದ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ: 23 ಮಂದಿ ಸಾವು

Pinterest LinkedIn Tumblr

fire

ಭುವನೇಶ್ವರ: ಒಡಿಶಾವನ್ನು ಬೆಚ್ಚಿಬೀಳಿಸಿರುವ ಖಾಸಗಿ ಆಸ್ಪತ್ರೆ ಅಗ್ನಿದುರಂತದಲ್ಲಿ ಮೃತಪಟ್ಟ 23 ಜನರ ಪೈಕಿ 20 ರೋಗಿಗಳು ಹಾಸಿಗೆಯಲ್ಲೇ ಸುಟ್ಟು ಕರಕಲಾಗಿದ್ದಾರೆ. ಇಲ್ಲಿನ ಎಸ್‌.ಯು.ಎಂ. ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 23 ಜನರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಎರಡನೇ ಮಹಡಿಯಲ್ಲಿರುವ ಡಯಾಲಿಸಿಸ್ ವಾರ್ಡ್‌ನಲ್ಲಿ ರಾತ್ರಿ 7.30ರ ವೇಳೆ ಬೆಂಕಿ ಹೊತ್ತಿಕೊಂಡಿತು. ಕ್ರಮೇಣ ಇದು ಪಕ್ಕದ ತೀವ್ರ ನಿಗಾ ಘಟಕಕ್ಕೆ (ಐಸಿಯು) ವ್ಯಾಪಿಸಿತು. ಹಲವರು ಹೊಗೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದು ರೋಗಿಗಳು ಹಾಗೂ ಅವರ ಸಹಾಯಕರಲ್ಲಿ ಭಾರಿ ದಿಗಿಲು ಮೂಡಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 500 ಮಂದಿ ಒಳರೋಗಿಗಳು ನಾಲ್ಕು ಅಂತಸ್ತಿನ ಆಸ್ಪತ್ರೆ ಕಟ್ಟಡದಲ್ಲಿ ಸಿಲುಕಿಕೊಂಡಿದ್ದರು. ಪೊಲೀಸರು, ಅಗ್ನಿಶಾಮಕ, ಆಸ್ಪತ್ರೆ ಸಿಬ್ಬಂದಿ ಹಾಗೂ ಸ್ವಯಂಸೇವಕರು ರಕ್ಷಣಾ ಕಾರ್ಯ ನಡೆಸಿದರು. ಏಳು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿದವು. ಗಾಯಗೊಂಡವರನ್ನು 9 ಆಂಬುಲೆನ್ಸ್‌ ಮೂಲಕ ಇತರ ಆಸ್ಪತ್ರೆಗಳಿಗೆ ಸಾಗಿಸಲಾಯಿತು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ಹಲವು ರೋಗಿಗಳನ್ನು ಆಸ್ಪತ್ರೆಯ ಕಿಟಕಿಗಳನ್ನು ಮುರಿದು ಅಲ್ಲಿಂದ ಹೊರತರಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ರೋಗಿಗಳ ಸ್ಥಳಾಂತರ: ರೋಗಿಗಳು ಹಾಗೂ ಗಾಯಳುಗಳನ್ನು ಕ್ಯಾಪಿಟಲ್ ಆಸ್ಪತ್ರೆ, ಅಮ್ರಿ ಆಸ್ಪತ್ರೆ, ಅಪೋಲೊ ಆಸ್ಪತ್ರೆ, ಕಳಿಂಗ ಆಸ್ಪತ್ರೆ, ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮತ್ತು ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕ್ಯಾಪಿಟಲ್ ಆಸ್ಪತ್ರೆ ನಿರ್ದೇಶಕ ಪಟ್ನಾಯಕ್ ತಿಳಿಸಿದ್ದಾರೆ.

‘37 ಜನರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ಪೈಕಿ 8 ಮಂದಿ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದರು’ ಎಂದು ಅಮ್ರಿ ಆಸ್ಪತ್ರೆಯ ವೈದ್ಯ ಡಾ. ಸಲಿಲ್ ಕುಮಾರ್ ಮೊಹಂತಿ ಅವರು ತಿಳಿಸಿದ್ದಾರೆ.

Comments are closed.