ರಾಷ್ಟ್ರೀಯ

ಭಾರತಕ್ಕೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್’ರನ್ನು ಸ್ವಾಗತಿಸಿದ ಪ್ರಧಾನಿ ಮೋದಿ

Pinterest LinkedIn Tumblr

putin

ನವದೆಹಲಿ: ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮಿಸಿದ್ದು, ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತ ಕೋರಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಸ್ವಾಗತ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ರಷ್ಯಾ ಅಧ್ಯಕ್ಷರನ್ನು ಸ್ವಾಗತಿಸುವುದನ್ನು ಭಾರತ ಗೌರವ ಎಂದು ಭಾವಿಸುತ್ತದೆ. ಈ ಭೇಟಿಯಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಪುಟಿನ್ ಅವರ ಭೇಟಿ ಭಾರತ ಮತ್ತು ರಷ್ಯಾ ದೇಶಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದಲ್ಲದೇ ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಪಾಲುದಾರಿಕೆ ವಿಸ್ತರಣೆಗೆ ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಬ್ರೆಜಿಲ್ ಅಧ್ಯಕ್ಷ ಮೈಕೆಲ್ ಟೆಮರ್ ಕೂಡ ಆಗಮಿಸಿದ್ದು, ಅವರಿಗೂ ಸ್ವಾಗತ ಕೋರಿರುವ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆಗೆ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ಟೆಮರ್ ಅವರ ಭೇಟಿ ಉಭಯ ದೇಶಗಳ ಸಹಕಾರದ ಕ್ಷೇತ್ರಗಳ ವಿಸ್ತರಣೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ಗೋವಾ ಬ್ರಿಕ್ಸ್ ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಕೂಡ ಆಗಮಿಸುತ್ತಿದ್ದು, ಚೀನಾದೊಂದಿಗಿನ ದ್ವಿಪಕ್ಷೀಯ ಮಾತುಕತೆಗೆ ತಾವು ಉತ್ಸುಕರಾಗಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಹಿಂದೆ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್ ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಚಿಗೆ ಸೇರಿಸಲು ಚೀನಾ ಸತತ ಎರಡನೇ ಬಾರಿಗೆ ಅಡ್ಡಗಾಲು ಹಾಕುತ್ತಿದ್ದು, ಈ ಹಿನ್ನಲೆಯಲ್ಲಿ ಮೋದಿ-ಜಿನ್ ಪಿಂಗ್ ಭೇಟಿ ಕುತೂಹಲ ಕೆರಳಿಸಿದೆ.

ಇನ್ನು ಬ್ರಿಕ್ಸ್ ಶೃಂಗಸಭೆ ನಡುವೆಯೇ ಪ್ರಧಾನಿ ಮೋದಿ ಬಿಮ್ ಸ್ಟೆಕ್ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡುತ್ತಿದ್ದು, ಸಭೆಯಲ್ಲಿ ಬಾಂಗ್ಲಾದೇಶ, ಭೂತಾನ್, ಮಯನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥಾಯ್ ಲೆಂಡ್ ಪ್ರತಿನಿಧಿಗಳನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಜಾಗತಿಕ ಸಮಸ್ಯೆಗಳನ್ನು ಬೇಧಿಸುವ ನಿಟ್ಟಿನಲ್ಲಿ ಸಾಮಾನ್ಯ ಪರಿಹಾರ ಕಂಡುಕೊಳ್ಳಲು ವಿಶ್ವ ಸಮುದಾಯದ ಪ್ರಮುಖ ರಾಷ್ಟ್ರಗಳ ಭೇಟಿ ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Comments are closed.