ರಾಷ್ಟ್ರೀಯ

ಜಯಲಲಿತಾ ಖಾತೆಗಳು ಪನ್ನೀರ್‌ಸೆಲ್ವಂಗೆ: ಕರುಣಾನಿಧಿ ಅಚ್ಚರಿ

Pinterest LinkedIn Tumblr

Karunanidhi-150x150ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ನಿರ್ವಹಿಸುತ್ತಿದ್ದ ಖಾತೆಗಳನ್ನು ರಾಜ್ಯಪಾಲರಾದ ಸಿಎಚ್‌ ವಿದ್ಯಾಸಾಗರ ರಾವ್‌ ಅವರು ವಿತ್ತ ಸಚಿವ ಓ.ಪನ್ನೀರ್‌ಸೆಲ್ವಂ ಅವರಿಗೆ ವಹಿಸಿರುವ ಕುರಿತು ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕರುಣಾನಿಧಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಜಯಲಲಿತಾ ಅವರು ಕಳೆದ 19 ದಿನಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ತಮಿಳುನಾಡು ರಾಜ್ಯಪಾಲರು, ಕೇಂದ್ರ ಸಚಿವರಾದ ಎಂ.ವೆಂಕಯ್ಯ ನಾಯ್ಡು, ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್‌ ಸೇರಿದಂತೆ ಆರೋಗ್ಯ ವಿಚಾರಿಸಲು ಬಂದ ಅನೇಕ ಗಣ್ಯರಿಗೆ ಜಯಲಲಿತಾ ಅವರ ಭೇಟಿಗೆ ಅವಕಾಶ ಮಾಡಿಕೊಟ್ಟಿಲ್ಲ.

ಆದರೆ, ಜಯಲಲಿತಾ ಅವರ ಸಲಹೆ ಮೇರೆಗೆ ಖಾತೆ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ ಎಂದು ಬುಧವಾರ ರಾಜ ಭವನದಿಂದ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿರುವುದು ಅಚ್ಚರಿ ಉಂಟು ಮಾಡಿದೆ ಎಂದು ಎಂ.ಕರುಣಾನಿಧಿ ಹೇಳಿದ್ದಾರೆ.

ರಾಜ್ಯಪಾಲರಾದ ವಿದ್ಯಾಸಾಗರ್‌ ಅವರು ಅತಿ ಕಡಿಮೆ ಸಮಯದಲ್ಲಿ ಸಾಂವಿಧಾನಿಕ ನಿಬಂಧನೆಗಳನ್ನು ಸಮಗ್ರವಾಗಿ ಪರಿಶೀಲಿಸಿರುವ ಕುರಿತಾಗಿಯೂ ಕರುಣಾನಿಧಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ, ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್‌ ಸೇವೆ, ಭಾರತೀಯ ಅರಣ್ಯ ಸೇವೆ, ಜಿಲ್ಲಾ ಕಂದಾಯ ಅಧಿಕಾರಿಗಳು, ಸಾಮಾನ್ಯ ಆಡಳಿತ ಹಾಗೂ ಗೃಹ ಖಾತೆಗಳನ್ನು ಮುಖ್ಯಮಂತ್ರಿ ಜಯಲಲಿತಾ ನಿರ್ವಹಿಸುತ್ತಿದ್ದರು.

ಜಯಲಲಿತಾ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಸಚಿವ ಪನ್ನೀರ್‌ಸೆಲ್ವಂ ಅವರು ಸಚಿವ ಸಂಪುಟ ಸಭೆಯ ಅಧ್ಯಕ್ಷತೆಯನ್ನೂ ವಹಿಸಲಿದ್ದಾರೆ ಎಂದು ರಾಜ್ಯ ಭವನ ತಿಳಿಸಿದೆ.

ಮೌಖಿಕ ಸೂಚನೆಗೆ ಅವಕಾಶ
ಎಐಎಡಿಎಂಕೆ ಸ್ಥಾಪಕ ಎಂ.ಜಿ.ರಾಮಚಂದ್ರನ್‌(ಎಂಜಿಆರ್‌) ಅವರು 1984ರ ಅಕ್ಟೋಬರ್‌ನಲ್ಲಿ ಇದೇ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.

ಎಂಜಿಆರ್‌ ಅವರು ನಿರ್ವಹಿಸುತ್ತಿದ್ದ ಖಾತೆಗಳನ್ನು ಅನಾರೋಗ್ಯದ ನಿಮಿತ್ತ ಮೌಖಿಕ ಸೂಚನೆಯ ಮೇರೆಗೆ ನೆದುನ್ಚೆಜಿಯಾನ್‌ ಅವರಿಗೆ ವಹಿಸಲಾಗಿತ್ತು ಎಂದು ಎಐಎಡಿಎಂಕೆ ಹಿರಿಯ ಮುಖಂಡ ಸಿ.ಪೊನ್ನಯನ್‌ ತಿಳಿಸಿದ್ದಾರೆ.

ನಿಯಮಗಳ ಪ್ರಕಾರ, ಮುಖ್ಯಮಂತ್ರಿಯು ಯಾವುದೇ ಸಚಿವರಿಗೆ ಅಥವಾ ಸಂಪುಟದ ಇತರೆ ಸಚಿವರಿಗೆ ಖಾತೆ ನಿರ್ವಹಣೆಗಾಗಿ ಮೌಖಿಕವಾಗಿ ಸೂಚನೆ ನೀಡಲು ಅವಕಾಶವಿದೆ. ಆದರೆ, ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದಿದ್ದಾರೆ.

Comments are closed.