ಚೆನ್ನೈ: ತಮಿಳುನಾಡು ಸಿಎಂ ಜಯಲಲಿತಾ ಬೆಂಬಲಿಗರಿಗೆ ಶುಭ ಸುದ್ದಿ ಅಪೋಲೋ ಆಸ್ಪತ್ರೆಯಿಂದ ಹೊರಬಿದ್ದಿದೆ. 18 ದಿನಗಳ ಬಳಿಕ ಕಣ್ತೆರೆದ ಅಣ್ಣಾಡಿಎಂಕೆ ಮುಖ್ಯಸ್ಥೆ ಜಯಲಲಿತಾ ಕೈ ಸನ್ನೆ ಮೂಲಕ ಮಾತನಾಡಲು ಯತ್ನಿಸಿದ್ದಾರೆ.
ತನಗೇನಾಗಿದೆ ಎಂದು ಕ್ಷಿಣ ಸ್ವರದಲ್ಲಿ ಜಯಲಲಿತಾ ಮಾತನಾಡಲು ಪ್ರಯತ್ನ ಪಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಲಂಡನ್ ವೈದ್ಯ ರಿಚರ್ಡ್ ಜಾನ್ ಬೀಲೆ, ದೆಹಲಿ ಏಮ್ಸ್ ವೈದ್ಯರ ತಂಡ ಜಯಲಲಿತಾಗೆ ಚಿಕಿತ್ಸೆ ನೀಡುತ್ತಿದ್ದು, ಜಯಾ ಅವರ ರಕ್ತದೊತ್ತಡ, ಶುಗರ್ ಲೆವೆಲ್ ಸಾಮಾನ್ಯ ಸ್ಥಿತಿಯತ್ತ ಇದೆ ಎಂದು ಹೇಳಿವೆ.
ಸದ್ಯ ಅಪೋಲೋ ಆಸ್ಪತ್ರೆಯಲ್ಲಿ ವೆಂಟಿಲೇಟರ್‍ನಲ್ಲಿರುವ ಜಯಲಲಿತಾ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡುಬಂದರೆ ಮುಂದಿನ ವಾರ ಡಿಸ್ಚಾರ್ಜ್ ಆಗಲಿದ್ದಾರೆ. ಮೂಲಗಳ ಪ್ರಕಾರ ಈ ಮಾಹಿತಿ ಸಿಕ್ಕಿದರೂ ಜಯಾ ಆರೋಗ್ಯದ ಕುರಿತು ಅಧಿಕೃತ ಹೆಲ್ತ್ ಬುಲೆಟಿನ್ ಇನ್ನಷ್ಟೇ ಹೊರಬೀಳಬೇಕಿದೆ.
ಜಯಲಲಿತಾ ಚೆನ್ನಾಗಿದ್ದಾರೆ. ಯಾವುದೇ ವದಂತಿಯನ್ನು ನಂಬಬೇಡಿ ಎಂದು ಎಐಎಡಿಎಂಕೆ ಪಕ್ಷ ತನ್ನ ಅಧಿಕೃತ ಟ್ವಿಟ್ಟರ್‍ನಲ್ಲಿ ಜನರಲ್ಲಿ ಮನವಿ ಮಾಡಿದೆ.ಜಯಾ ಚೇತರಿಕೆ ಹಿನ್ನೆಲೆಯಲ್ಲಿ ಹೊಸ ಸಿಎಂ, ಡಿಸಿಎಂ ಆಲೋಚನೆ ಅಣ್ಣಾಡಿಎಂಕೆ ಕೈ ಬಿಟ್ಟಿದ್ದು, ಸದ್ಯದ ಬೆಳವಣಿಗೆಯಿಂದ ಪುರಚ್ಚಿ ತಲೈವಿ ಬೆಂಬಲಿಗರು ಸಡಗರದಲ್ಲಿದ್ದಾರೆ.
ಭಾನುವಾರ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಆಸ್ಪತ್ರೆಗೆ ತೆರಳಿ ಮಾತನಾಡಿ, ಜಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎಂದು ಹೇಳಿದ್ದರು.
ಸೆ.22 ರಂದು ಜಯಲಲಿತಾ ಜ್ವರ ಮತ್ತು ನಿರ್ಜಲಿಕರಣದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ವೈದ್ಯರು ವೈದ್ಯಕೀಯ ವರದಿ ಬಿಡುಗಡೆ ಮಾಡುವ ಮೂಲಕ ಮಾಹಿತಿ ನೀಡುತ್ತಿದ್ದಾರೆ.