ರಾಷ್ಟ್ರೀಯ

‘ನಿಧಿ ದುಬೆ’ ಎಂಬ ಧೀರ ಮಹಿಳೆ ಸೇನೆ ಸೇರಿದ ಕಥೆ ! ಗಂಡನನ್ನು ಕಳೆದುಕೊಂಡು ಗುರಿ ಸಾಧಿಸುವಲ್ಲಿ ಕೊನೆಗೂ ಯಶಸ್ವಿ ….

Pinterest LinkedIn Tumblr

nidhi-dubey

ಈಕೆಯ ಬಗ್ಗೆ ನಾವು ಹೆಮ್ಮೆ ಪಡಲೆಯೇಕು. ಈಕೆ ಅಂತಿಂಥ ಮಹಿಳೆಯಲ್ಲ. ಧೀರ-ವೀರ ಮಹಿಳೆ ಎಂದರೂ ತಪ್ಪಾಗದು. ಸೈನ್ಯದಲ್ಲಿದ್ದ ಪತಿಯನ್ನು ಕಳೆದುಕೊಂಡು ಪಡಬಾರದ ಕಷ್ಟಗಳನ್ನು ಎದುರಿಸಿ ಕೊನೆಗೂ ಸೇನಾಧಿಕಾರಿ ಆಗಬೇಕೆಂಬ ಬಯಕೆಯನ್ನು ಸಾಕಾರಗೊಳಿಸಿದ ಈಕೆಯ ಹೆಸರು ನಿಧಿ ದುಬೆ.

ಗಂಡನನ್ನು ಕಳೆದುಕೊಂಡಾಗ ನಿಧಿ 4 ತಿಂಗಳ ಗರ್ಭಿಣಿ. ಒಂದೆಡೆ ಗಂಡ ಇಲ್ಲದ ಬದುಕು…ಇನ್ನೊಂದೆಡೆ ಇನ್ನಷ್ಟೇ ಜಗತ್ತನ್ನು ಕಾಣಲು ಬರುವ ಮಗುವಿನ ಭವಿಷ್ಯ. ಇಂಥಹ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿ, ಸೈನ್ಯಕ್ಕೆ ಸೇರಬೇಕೆಂಬ ಒಂದೇ ಒಂದು ಉದ್ದೇಶದಿಂದ Services Selection Board (SSB) ಪರೀಕ್ಷೆ ಬರೆದು ಇಂದು ಸೇನೆ ಸೇರುವಲ್ಲಿ ಯಶಸ್ವಿಯಾಗಿದ್ದಾಳೆ.

ಈಕೆಯ ಕಥೆ ಕೇಳಿ….

ನಿಧಿ ಎಂಬ ಯುವತಿ ಮೂಲತಃ ಮಧ್ಯಪ್ರದೇಶದ ಸಾಗರದವರು. ಪದವಿ ಮುಗಿದ ಮೇಲೆ ಮದುವೆಯಾಗಿ ಹೊಸಜೀವನ ಆರಂಭಿಸಿದ್ದು ಸೈನಿಕನೊಂದಿಗೆ. ಮಹಾರ್ ರೆಜಿಮೆಂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರ ಹೆಸರು ಮುಕೇಶ್ಕುಮಾರ್ ದುಬೆ. ಮದುವೆ ಆಗಿ ಒಂದು ವರ್ಷ ಆಗಿತ್ತಷ್ಟೇ. ಹವಾಮಾನ ವೈಪರೀತ್ಯದಿಂದ ಬಳಲಿಹೋದ ಮುಕೇಶ್ಕುಮಾರ್ 2009ರಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.

ಆ ಸಂದರ್ಭದಲ್ಲಿ ನಿಧಿ 4 ತಿಂಗಳ ಗರ್ಭಿಣಿ. ಜೀವನ ಹೊಸದಾಗಿ ಶುರುವಾಗುತ್ತಿದೆ ಎನ್ನುವ ಹೊತ್ತಿಗೆ ಸಿಡಿಲಾಘಾತ ಅಪ್ಪಳಿಸಿದಂತಾಗಿತ್ತು. ಪತಿಯ ಅಕಾಲಿಕ, ಆಕಸ್ಮಿಕ ನಿಧನ ನಿಧಿಯನ್ನು ಖಿನ್ನತೆಗೆ ದೂಡಿತು. ಗಂಡನ ಅಗಲುವಿಕೆಯ ನೋವು ಅರಗಿಸಿಕೊಳ್ಳಲಾಗುತ್ತಿರಲಿಲ್ಲ. ಅಂಥ ಸಂದರ್ಭದಲ್ಲೇ ಮಗದೊಂದು ಆಘಾತ.

ಗರ್ಭಿಣಿ ಎಂದು ಗೊತ್ತಿದ್ದರೂ ಅತ್ತೆ-ಮಾವ ಮಾನವೀಯತೆಯನ್ನೇ ಮರೆತು ಆಕೆಯನ್ನು ಮನೆಯಿಂದ ಅಕ್ಷರಶಃ ಆಚೆನೂಕಿದರು. ಪುಣ್ಯಕ್ಕೆ ತವರಿನ ಆಸರೆ ಇತ್ತು. ಸಾಗರದಲ್ಲಿ ನಿಧಿಗೆ ಬೆಂಬಲವಾಗಿ ನಿಂತಿದ್ದು ತಂದೆ-ತಾಯಿ ಮತ್ತು ಸಹೋದರ. ಖಿನ್ನತೆಯಿಂದ ಹೊರತರಲು ಸಾಕಷ್ಟು ಪ್ರಯತ್ನ ನಡೆಸಲಾಯಿತು. ಆದರೆ, ಮಗು ಜನಿಸುವವರೆಗೆ ಜೀವಂತಶವದಂತಿದ್ದ ನಿಧಿ, ಮಗುವಿನ ಮೋಡಿಗೆ ಮನಸೋತರು. ಇನ್ನು ಆ ಮಗುವಿಗಾಗಿಯಾದರೂ ಬಾಳಬೇಕು ಎಂದು ನಿಶ್ಚಯಿಸಿಕೊಂಡರು.

ಮಗುವಿನ ಲಾಲನೆ-ಪೋಷಣೆ ಜತೆಗೆ ಮನೆಗೆಲಸವನ್ನು ನಿರ್ವಹಿಸಿದ ಬಳಿಕ- ‘ಮಗು ನಾಲ್ಕು ವರ್ಷದ್ದಾಯಿತು. ಮುಂದೆ ಅದು ‘ಅಪ್ಪ ಎಲ್ಲಿ?’ ಅಂತ ಕೇಳಿದರೆ ಏನು ಹೇಳಲಿ? ಯಾವುದೇ ಕಾರಣಕ್ಕೂ ಅದಕ್ಕೆ ಅಪ್ಪನ ಕೊರತೆ ಕಾಡಬಾರದು. ಅದಕ್ಕಾಗಿ ತಂದೆ-ತಾಯಿಯ ಪಾತ್ರವನ್ನು ನಾನೇ ನಿರ್ವಹಿಸಬೇಕು’ ಎಂದು ನಿರ್ಧರಿಸಿದರು. ಮಗ ಸುಯಶ್ನನ್ನು ತಾಯಿ ಬಳಿ ಬಿಟ್ಟು ಉನ್ನತ ಶಿಕ್ಷಣ ಪಡೆಯಲು ಇಂದೋರ್ಗೆ ಬಂದರು.

2013ರಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ಎಂಬಿಎಗಾಗಿ ಪ್ರವೇಶ ಪಡೆದರು. ಫೀಸು, ಜೀವನನಿರ್ವಹಣೆಗೆ ದುಡ್ಡು ಬೇಕಲ್ಲ ಅದಕ್ಕಾಗಿ ಕಂಪನಿಯೊಂದರಲ್ಲಿ ಒಂದೂವರೆ ವರ್ಷ ಕಾರ್ಯನಿರ್ವಹಿಸಿದರು. ವಾರಾಂತ್ಯದಲ್ಲಿ ಸಾಗರಕ್ಕೆ ಬಂದು ಮಗನನ್ನು ಭೇಟಿ ಮಾಡಿಬರುತ್ತಿದ್ದರು. ಇದೇ ಹೊತ್ತಲ್ಲಿ ಕೆಲ ನಿವೃತ್ತ ಬ್ರಿಗೇಡಿಯರ್ಗಳ ಭೇಟಿಯಾಗಿ ಸೇನೆಯನ್ನು ಸೇರಬೇಕೆಂಬ ಸಂಕಲ್ಪ ಒಡಮೂಡಿತು. ‘ಮಗನಿಗೆ ನಿನ್ನ ತಂದೆ ಸೈನ್ಯದಲ್ಲಿ ಇದ್ದರು ಎಂದರೆ ಅರ್ಥವಾಗುವುದಾದರೂ ಹೇಗೆ? ಅದಕ್ಕೆ ನಾನೇ ಸೇನೆ ಸೇರಲು ನಿಶ್ಚಯಿಸಿದೆ’ ಎನ್ನುವ ನಿಧಿ ಅದಕ್ಕಾಗಿ ಎಸ್ಎಸ್ಬಿ (Services Selection Board) ಪರೀಕ್ಷೆಗಳ ತಯಾರಿಗಾಗಿ ತರಬೇತಿ ಪಡೆಯತೊಡಗಿದರು. ಆಗ ಮರಳಿದ್ದು ಮತ್ತೆ ತಾಯಿ ಊರಿಗೆ. ಜೀವನ ನಿರ್ವಹಣೆಗೆ ಸಾಗರದ ಸೇನಾಶಾಲೆಯಲ್ಲೇ ಶಿಕ್ಷಕಿಯಾಗಿ ಸೇರಿಕೊಂಡು, ಸುಯಶ್ನನ್ನೂ ಇಲ್ಲೇ ದಾಖಲು ಮಾಡಿದರು.

ಆದರೆ ಎಸ್ಎಸ್ಬಿಗಾಗಿ ಸಿದ್ಧತೆ ನಡೆಸುವುದು ಸಾಮಾನ್ಯವಾಗಿರಲಿಲ್ಲ. ಅದರಲ್ಲೂ, ಹೆಣ್ಣುಮಕ್ಕಳು ಇಂಥ ಸಾಹಸಕ್ಕೆ ಕೈಹಾಕುವುದು ಎಂದರೆ ಅದಕ್ಕೆ ಅಸಾಧಾರಣ ಧೈರ್ಯವೇ ಬೇಕು. ನಿಧಿಯಲ್ಲಿ ಆ ಸ್ಥೈರ್ಯ, ಕೆಚ್ಚು ಎರಡೂ ಇತ್ತು.

ಪ್ರತಿನಿತ್ಯ ನಸುಕಿನ ನಾಲ್ಕು ಗಂಟೆಗೆ ಎದ್ದು 5 ಕಿಲೋಮೀಟರ್ ಓಟ (ರನ್ನಿಂಗ್). ಮರಳಿ ಮನೆಗೆ ಬಂದು ಮಗನನ್ನು ರೆಡಿ ಮಾಡಿಸಿ ಬೆಳಗ್ಗೆ 7.15ರ ಹೊತ್ತಿಗೆ 20 ಕಿಲೋಮೀಟರ್ ದೂರದ ಶಾಲೆಗೆ ಪಯಣ. ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳಿ ಮನೆಗೆಲಸ ಮುಗಿಸಿ ಸಂಜೆ 5ಕ್ಕೆ ಜಿಮ್ೆ. ಸಂಜೆ 6ಕ್ಕೆ ಮನೆಗೆ ಬಂದು ಮಗನ ಹೋಂವರ್ಕ್ ಮಾಡಿಸಿ ರಾತ್ರಿ 8 ಗಂಟೆಯಿಂದ ಓದಿನಲ್ಲಿ ನಿರತರಾಗುತ್ತಿದ್ದ ನಿಧಿ ಮಲಗುತ್ತಿದ್ದುದು ಮಧ್ಯರಾತ್ರಿ 12ಕ್ಕೆ.

2014ರಲ್ಲಿ ಎಸ್ಎಸ್ಬಿಯ ಮೊದಲ ಯತ್ನದಲ್ಲಿ ಅಂತಿಮ ಸುತ್ತು ತಲುಪಿದ ನಿಧಿ 2015ರ ಎರಡನೇ ಯತ್ನದಲ್ಲಿ ಕಾನ್ಪ್ರೆನ್ಸ್ ಸುತ್ತಿನವರೆಗಷ್ಟೇ ತಲುಪಲು ಸಾಧ್ಯವಾಯಿತು. 2016ರಲ್ಲಿ ಅಂತಿಮ ಅವಕಾಶವಿತ್ತು. ಹಾಗಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳ್ಳಲು ಎಲ್ಲ ಪ್ರಯತ್ನಗಳನ್ನು ಹಾಕಿದರು. ಆಗಸ್ಟ್ 31ಕ್ಕೆ ಫಲಿತಾಂಶ ಬಂತು. ಈ ಬಾರಿ ಪ್ರಯತ್ನಕ್ಕೆ ಗೆಲುವು ಸಿಕ್ಕಿತು! ಎಸ್ಎಸ್ಬಿ ಪರೀಕ್ಷೆ ತೇರ್ಗಡೆ ಮಾಡಿದ್ದಲ್ಲದೆ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲೂ ಸೈ ಎನಿಸಿಕೊಂಡರು. ತಂದೆ-ತಾಯಿ, ಸಹೋದರನಿಂದ ಖುಷಿಯ ಅಶ್ರುಧಾರೆ, ಮತ್ತೆ ಬದುಕಿ ಕಟ್ಟಿಕೊಂಡು ನಿಂತಳಲ್ಲ ಎಂಬ ಹೆಮ್ಮೆಯ ಭಾವ ಮಾತನ್ನು ಮೂಕವಾಗಿಸಿದ್ದವು. ಎರಡು ವರ್ಷದ ನಿರಂತರ ಪ್ರಯತ್ನದಲ್ಲಿ ಎದುರಾದ ಕಷ್ಟಗಳನ್ನೆಲ್ಲ ಮೆಟ್ಟಿನಿಂತ ಪರಿಣಾಮ ಯಶಸ್ಸು ಇವರತ್ತ ವಾಲಿತು. ಇದೇ ಅಕ್ಟೋಬರ್ 1ರಿಂದ ಮಧ್ಯಪ್ರದೇಶದ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಗೆ ಸೇರಿಕೊಂಡಿರುವ ನಿಧಿ ಇಲ್ಲಿ ಪ್ರೊಬೆಷನರಿ ಅವಧಿ ಮುಗಿದ ಬಳಿಕ ಸೇನಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

Comments are closed.