ರಾಷ್ಟ್ರೀಯ

2018ರ ಡಿಸೆಂಬರ್‌ಗೆ ಪಾಕ್‌ ಗಡಿ ಮುಚ್ಚುಗಡೆ: ರಾಜನಾಥ್ ಸಿಂಗ್

Pinterest LinkedIn Tumblr

rajanathಜೆಸಲ್ಮೇರ್‌: ತಂತ್ರಜ್ಞಾನ ಆಧಾರಿತ ಭದ್ರತಾ ವ್ಯವಸ್ಥೆ ಮಾಡುವ ಮೂಲಕ ಭಾರತ 2018ರ ಡಿಸೆಂಬರ್‌ ವೇಳೆಗೆ ಪಾಕಿಸ್ತಾನ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಿದೆ. ಈ ಮೂಲಕ ಉಗ್ರರ ಉಪಟಳಕ್ಕೆ ತಡೆಯೊಡ್ಡಿ ಗಡಿಯನ್ನು ಭದ್ರಗೊಳಿಸಲಾಗುವುದು ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಆಂತರಿಕ ಭದ್ರತೆ ಹಾಗೂ ಗಡಿಯಲ್ಲಿನ ಭದ್ರತೆ ಕುರಿತು ನಾಲ್ಕು ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, 2018ರ ವೇಳೆಗೆ ಪಾಕಿಸ್ತಾನದ ಗಡಿಯುದ್ದಕ್ಕೂ ತಂತ್ರಜ್ಞಾನ ಆಧಾರಿತ ಭದ್ರತಾ ನಿರ್ವಹಣೆ ಕಲ್ಪಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಯೋಜನೆ ರೂಪಿಸುತ್ತಿದೆ ಎಂದು ಮಾಹಿತಿ ನೀಡಿದರು.

ಗಡಿ ಭದ್ರಗೊಳಿಸಲು ಗರಿಷ್ಠಮಟ್ಟದ ತಂತ್ರಜ್ಞಾನ ಬಳಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಗಡಿ ಭದ್ರತಾ ಪಡೆಯ ಅಧಿಕಾರಿಗಳು ಉರಿ ದಾಳಿ ಹಾಗೂ ಪ್ರತಿಯಾಗಿ ಭಾರತ ನಡೆಸಿದ ನಿರ್ಧಿಷ್ಟ ದಾಳಿ(ಸರ್ಜಿಕಲ್‌) ಬಳಿಕ ಗಡಿಯಲ್ಲಿನ ಬಿಗುವಿನ ವಾತಾವರಣ ಹಾಗೂ ಭದ್ರತೆ ಕುರಿತು ಮಾಹಿತಿ ನೀಡಿದರು.

ರಾಜಸ್ತಾನ ಮುಖ್ಯಮಂತ್ರಿ ವಸುಂಧರಾರಾಜೆ, ಪಂಜಾಬ್‌ನ ಉಪ ಮುಖ್ಯಮಂತ್ರಿ ಸುಖ್‌ಬಿರ್‌ ಸಿಂಗ್‌ ಬಾದಲ್‌, ಗುಜರಾತ್‌ ಹಾಗೂ ರಾಜಸ್ತಾನದ ಗೃಹಸಚಿವರು ಹಾಗೂ ಜಮ್ಮು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬ್ರಿಜ್‌ ರಾಜ್‌ ಶರ್ಮಾ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.