ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆ ಸೋಲಿನ ಪರಿಣಾಮ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಒಡೆದಿದೆ. ಯುಡಿಎಫ್ ಮೈತ್ರಿಕೂಟದಿಂದ ಕೇರಳ ಕಾಂಗ್ರೆಸ್(ಮಣಿ) ಹೊರನಡೆದಿದ್ದು, ಚುನಾವಣಾ ಸೋಲಿಗೆ ಕಾಂಗ್ರೆಸ್ ನ ನಾಯಕತ್ವವೇ ಕಾರಣ ಎಂದು ಆರೋಪಿಸಿದೆ.
ಮೈತ್ರಿಕೂಟದಿಂದ ಹೊರಬಂದಿರುವ ಬಗ್ಗೆ ಮಾತನಾಡಿರುವ ಕೇರಳದ ಮಾಜಿ ಹಣಕಾಸು ಸಚಿವ, ಕೆಎಂ ಮಣಿ, ಈ ನಿರ್ಧಾರವನ್ನು ಹಿಂದೆಯೇ ತೆಗೆದುಕೊಳ್ಳಬೇಕಿತ್ತು. ಆದರೆ ಈಗ ತೆಗೆದುಕೊಳ್ಳಲಾಗಿದೆ. ನಾವು ಯಾರನ್ನು ಶಪಿಸದೆ ಯುಡಿಎಫ್ ಮೈತ್ರಿಕೂಟದಿಂದ ಹೊರನಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೇರಳ ವಿಧಾನಸಭೆಯಲ್ಲಿರುವ ನಮ್ಮ ಪಕ್ಷದ ಸದಸ್ಯರು, ಹಾಗು ಸಂಸತ್ ನಲ್ಲಿರುವ ನಮ್ಮ ಪಕ್ಷದ ಇಬ್ಬರು ಸದಸ್ಯರು ಪ್ರತ್ಯೇಕವಾಗಿ ಕುಳಿತುಕೊಳ್ಳಲಿದ್ದಾರೆ ಹಾಗು ವಿಷಯವನ್ನು ಆಧರಿಸಿ ಸರ್ಕಾರಕ್ಕೆ ಬಂಬಲ ಸೂಚಿಸಲಿದ್ದೇವೆ, ಸರ್ಕಾರಕ್ಕೆ ಆಡಳಿತ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ ಎಂದು ಕೆಎಂ ಮಣಿ ತಿಳಿಸಿದ್ದಾರೆ.
ಕೇರಳ ಕಾಂಗ್ರೆಸ್( ಮಣಿ) 1982 ರಿಂದ ಯುಡಿಎಫ್ ಮೈತ್ರಿಕೂಟದಲ್ಲಿ ಕಾಣಿಸಿಕೊಂಡಿತ್ತು. ಮಣಿ ನೇತೃತ್ವದ ಪಕ್ಷ ಮೈತ್ರಿಯಿಂದ ಹೊರನಡೆದಿರುವ ಪರಿಣಾಮ ಕೇರಳ ವಿಧಾನಸಭೆಯಲ್ಲಿ ಯುಡಿಎಫ್ ನ ಮೈತ್ರಿಕೂಟದ ಸಂಖ್ಯೆ 47 ರಿಂದ 41 ಕ್ಕೆ ಇಳಿಯಲಿದೆ. ಇನ್ನು ಯುಡಿಎಫ್ ಮೈತ್ರಿಕೂಟದಿಂದ ಕೇರಳ ಕಾಂಗ್ರೆಸ್ ಪಕ್ಷ ಹೊರನಡೆದಿರುವುದು ನೋವಿನ ಸಂಗತಿ ಎಂದು ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ಪ್ರತಿಕ್ರಿಯೆ ನೀಡಿದ್ದಾರೆ.
Comments are closed.