ನವದೆಹಲಿ: ಉತ್ತರಾಖಂಡದ ಪಿತೋರ್ಗಢ ಜಿಲ್ಲೆಯ 12,000 ಅಡಿ ಎತ್ತರದ ಹಿಮ ಪರ್ವತದ ಮೇಲೆ ಹುಲಿ ಪತ್ತೆಯಾಗಿದೆ. 2009 ರಲ್ಲಿ ರಾಯಲ್ ಬೆಂಗಾಲ್ ಟೈಗರ್ 10 ಸಾವಿರ ಅಡಿ ಎತ್ತರದ ಪೂರ್ವಾಂಚಲ ಸಿಕ್ಕಿಂನ ಹಿಮಪರ್ವತದಲ್ಲಿ ವಾಸವಾಗಿರುವುದು ಪತ್ತೆಯಾಗಿದ್ದನ್ನು ಬಿಟ್ಟರೆ ಇದು ಹೊಸ ದಾಖಲೆ.
ವನ್ಯಜೀವಿ ತಜ್ಞರು ನೀಡಿದ ಮಾಹಿತಿ ಪ್ರಕಾರ, ಸಾಮಾನ್ಯವಾಗಿ ಹಿಮ ಚಿರತೆಗಳು ಇಷ್ಟು ಎತ್ತರದ ಪ್ರದೇಶದಲ್ಲಿ ವಾಸ ಮಾಡುತ್ತವೆ. ಆದರೆ ಮೊಟ್ಟ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಹುಲಿ ಸೆರೆ ಸಿಕ್ಕಿರುವುದು ವಿಶೇಷ ಎಂದು ಭಾರತ ವನ್ಯಜೀವಿ ಸಂಸ್ಥೆಯ ಪ್ರಾಣಿ ವಿಜ್ಞಾನಿ ಬಿಲಾಲ್ ಹಬೀಬ್ ಹೇಳಿದ್ದಾರೆ. ಹಲವು ವರ್ಷದಿಂದ ಪ್ರಾಣಿ ಜೀವವೈವಿಧ್ಯ ರಕ್ಷಣೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು, ದೇಶದಲ್ಲೇ ಇದು ಅತಿ ಎತ್ತರದ ಹುಲಿ ಆವಾಸ ಎಂದು ಘೊಷಿಸಿದ್ದಾರೆ.
ನುಸುಳುಕೋರರಿಗೆ ಭೀತಿ:
ನೂತನ ಹುಲಿ ಆವಾಸ ನೇಪಾಳ ಗಡಿಗೆ ಸಮೀಪವಾಗಿದೆ. ಮೇಲಿಂದ ಮೇಲೆ ಛಾಯಾಚಿತ್ರಗಳನ್ನು ಪರಿಶೀಲಿಸಿ ತಾವು ಹುಲಿ ಆವಾಸ ಖಚಿತಪಡಿಸಿಕೊಂಡಿದ್ದು, ಹುಲಿ ದಿನಾಚರಣೆ ಸಂದರ್ಭ ಬಹಿರಂಗ ಗೊಳಿಸಿದ್ದೇವೆ. ಇದು ಅಕ್ರಮ ನುಸುಳುಕೋರರಿಗೆ ಎಚ್ಚರಿಕೆಯ ಗಂಟೆಯಾಗಿಯೂ ಪರಿಣಮಿಸಿದ್ದು , ಇಂಡೋ ಟಿಬೆಟಿಯನ್ ಪೊಲೀಸರಿಗೆ ವರದಾನವಾದಂತಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿವಿಎಸ್ ಖತಿ ಹೇಳಿದ್ದಾರೆ.
Comments are closed.