ನವದೆಹಲಿ: ಕೊನೆಯ ನಿಮಿಷಗಳ ವರೆಗೂ ವೀರೋಚಿತ ಹೋರಾಟ ನಡೆಸಿದ ದಬಾಂಗ್ ಡೆಲ್ಲಿ ತಂಡದವರು ಪ್ರೊಕಬಡ್ಡಿ ಲೀಗ್‌ನ ಮಂಗಳವಾರದ ಪಂದ್ಯದಲ್ಲಿ ಪಟ್ನಾ ಪೈರೇಟ್ ಎದುರು 32–31ರಿಂದ ಸೋತರು. ಇದರಿಂದ ಡೆಲ್ಲಿ ತಂಡದ ಪ್ಲೇಆಫ್ ಹಾದಿ ಇನ್ನಷ್ಟು ಕಠಿಣವಾಯಿತು.
ಡೆಲ್ಲಿ ತಂಡಕ್ಕೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ಆದರೆ ಈಗಾಗಲೇ 12 ಪಂದ್ಯಗಳಿಂದ 47 ಪಾಯಿಂಟ್ಸ್ ಗಳಿಸಿ ಪ್ಲೇಆಫ್ ತಲುಪಿರುವ ಪಟ್ನಾ ಆಟಗಾರರು ಡೆಲ್ಲಿಯನ್ನು ಅದರ ತವರಿನಲ್ಲೇ ಮಣಿಸಲು ಪಣ ತೊಟ್ಟಂತಿದ್ದರು.
ಆರಂಭದ ಕ್ಷಣದಿಂದಲೂ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಮೂಡಿ ಬಂದಿತು. ಮೂರನೇ ನಿಮಿಷದಲ್ಲೇ ಡೆಲ್ಲಿ 3–1ರಿಂದ ಮುನ್ನಡೆ ಪಡೆದಿತ್ತು. ನಂತರ ಪಟ್ನಾದ ರಾಜೇಶ್ ಮಂಡಲ್ ಯಶಸ್ವಿ ರೇಡಿಂಗ್‌ನಿಂದ 7ನೇ ನಿಮಿಷದ ವೇಳೆಗೆ ಅಂತರ 4–4ರಿಂದ ಸಮಗೊಂಡಿತ್ತು. ಡೆಲ್ಲಿ ತಂಡದ ಕೆಲವು ಆಟಗಾರರು ರಕ್ಷಣಾ ತಂತ್ರದಲ್ಲಿ ಮಾಡುತ್ತಿದ್ದ ತಪ್ಪುಗಳ ಸಂಪೂರ್ಣ ಲಾಭ ಪಡೆದ ಪಟ್ನಾ ಮೇಲುಗೈ ಸಾಧಿಸಲು ಪದೇ ಪದೇ ಯತ್ನಿಸಿತು.
ಉತ್ತರಾರ್ಧದ ಮೊದಲ ಹತ್ತು ನಿಮಿಷಗಳಲ್ಲಿ ಬಹಳ ಹೊತ್ತು ಕಾಶಿಲಿಂಗ ಮತ್ತು ಮೆರಾಜ್ ಇಬ್ಬರೇ ಡೆಲ್ಲಿ ಅಂಗಣದಲ್ಲಿ ಹೆಣಗಾಡಿದರು. ವಿರಾಮದ ನಂತರದ ಮೊದಲ ನಿಮಿಷದಲ್ಲೇ ಪಾಯಿಂಟ್ 16–16ರಿಂದ ಸಮಗೊಂಡಿತು. ಆಗ ಡೆಲ್ಲಿ ಅಂಗಣದಲ್ಲಿ ಮೆರಾಜ್ ಒಬ್ಬರೇ ಇದ್ದರು. ಅವರು ರೇಡಿಂಗ್‌ನಲ್ಲಿ ಕುಲದೀಪ್‌ನನ್ನು ಹೊರ ಕಳಿಸಿ ಪಾಯಿಂಟ್ ತಂದರು.
ಆದರೆ ಮರು ನಿಮಿಷದಲ್ಲಿಯೇ ಏಕಾಂಗಿ ಯಾದರು. ಮತ್ತೆ ಪಾಯಿಂಟ್ ತಂದ ಮೆರಾಜ್ ಮರು ನಿಮಿಷದಲ್ಲೇ ಏಕಾಂಗಿ ಯಾದರು. ಛಲ ಬಿಡದೆ ಹೋರಾಡಿದ ಇರಾನ್‌ನ ಆಟಗಾರ ಮೆರಾಜ್ ಎರಡು ಪಾಯಿಂಟ್‌ಗಳನ್ನು ತಂದರು. ಡೆಲ್ಲಿ 21–19ರಿಂದ ಮುಂದಿದ್ದಾಗಲೂ ಅಂಗಣ ದಲ್ಲಿ ಕಾಶಿಲಿಂಗ ಮತ್ತು ಮೆರಾಜ್ ಇಬ್ಬರೇ ಇದ್ದರು. ಆಗ ರೇಡಿಂಗ್ ಬಂದ ಪಟ್ನಾ ನಾಯಕ ಪ್ರದೀಪ್ ನರ್ವಾಲ್‌ನನ್ನು ಹಿಡಿದರು. ಸಚಿನ್ ಶಿಂಗಾಡೆ ಒಳಬಂದರು. ಆದರೆ 29ನೇ ನಿಮಿಷದಲ್ಲಿ ದಾಳಿಗಿಳಿದ ಪ್ರದೀಪ್ ನರ್ವಾಲ್‌ನ ಕಾಲಿಗೆ ಸಚಿನ್ ಶಿಂಗಾಡೆ ಬಿಗಿ ಪಟ್ಟು ಹಾಕಿದರು.
ಆಗ ಎಡ ಅಂಚಿನಿಂದ ಕಾಶಿಲಿಂಗ ನರ್ವಾಲ್ ಮೇಲೆರಗಿದರು. ಅಷ್ಟರಲ್ಲಿ ಶಿಂಗಾಡೆ ಬಿಗಿ ಸಡಿಲಗೊಂಡಿತು. ನರ್ವಾಲ್ ಮಧ್ಯಗೆರೆ ಯತ್ತ ಜಿಗಿದರು. ಮತ್ತೆ ಏಕಾಂಗಿಯಾದ ಮೆರಾಜ್ ದಾಳಿಗಿಳಿದು ಪಾಯಿಂಟ್ ತಂದು ವಿಕಾಶ್ ಒಳಗೆ ಬಂದರು. ಆದರೆ ಮರು ಕ್ಷಣದಲ್ಲಿ ನರ್ವಾಲ್ ದಾಳಿಯಲ್ಲಿ ಇಬ್ಬರೂ ಔಟ್ ಆದರು. ಹೀಗೆ ಪಟ್ನಾ ಖಾತೆಗೆ ಆಲ್ಔಟ್ ಪಾಯಿಂಟ್‌ಗಳು ಜಮೆಯಾದವು. ಆಗ ಪಟ್ನಾ 26–25ರಿಂದ ಮುನ್ನಡೆ ಪಡೆಯಿತು.
ಮತ್ತೆ ಹೆಜ್ಜೆಹೆಜ್ಜೆಗೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದ ಪಂದ್ಯದ 33ನೇ ನಿಮಿಷದಲ್ಲಿ ಕಾಶಿಲಿಂಗ 2 ಪಾಯಿಂಟ್ಸ್ ತಂದಾಗ ಅಂತರ 29–29ರಿಂದ ಸಮಗೊಂಡಿತು. ನಂತರ 5 ನಿಮಿಷಗಳ ಕಾಲ ಮುನ್ನಡೆಯನ್ನು ಕಾಪಾಡಿಕೊಳ್ಳುವಲ್ಲಿ ಡೆಲ್ಲಿ ತಂಡ ಬಹಳಷ್ಟು ಬೆವರು ಹರಿಸಿತು. 38ನೇ ನಿಮಿಷದಲ್ಲಿ ಮೆರಾಜ್ ಪಟ್ನಾ ಬಲೆಗೆ ಬಿದ್ದು ಹೊರ ಹೋದಾಗ ಸ್ಕೋರು 31–31ರಿಂದ ಸಮಗೊಂಡಿತು.
ಕೊನೆಯ ಎರಡು ನಿಮಿಷಗಳ ಹಣಾಹಣಿ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಾರ ಉಂಟು ಮಾಡಿತ್ತು. ಆಟ ಮುಗಿಯಲು 10 ಸೆಕೆಂಡುಗಳಿವೆ ಎನ್ನುವಾಗ ಕಾಶಿಲಿಂಗ ಅವರು ‘ಡ್ರಾ’ ದಿಂದ ಪಾರಾಗಲು ಪಟ್ನಾ ಆವರಣ ದೊಳಗೆ ಅಪಾಯಕಾರಿಯಾಗಿ ನುಗ್ಗಿ ಪಾಯಿಂಟ್ ತರಲು ಯತ್ನಿಸಿದರಾದರೂ, ತಾವೇ ಬಲೆಗೆ ಬಿದ್ದರು. ಪಟ್ನಾ ಕೇವಲ ಒಂದು ಪಾಯಿಂಟ್‌ನಿಂದ ರೋಚಕ ಗೆಲುವು ಗಳಿಸಿತು.
ಡೆಲ್ಲಿಯ ಕಾಶಿನಾಥ್ ಮತ್ತು ಮೆರಾಜ್ ಷೇಕ್ ತಲಾ 11 ಪಾಯಿಂಟ್ಸ್ ಗಳಿಸಿ ತವರಿನ ಪ್ರೇಕ್ಷಕರ ಮನಗೆದ್ದರು. ಪಟ್ನಾ ಪರ ಪ್ರದೀಪ್ ನರ್ವಾಲ್ ಮತ್ತು ರಾಜೇಶ್ ನರ್ವಾಲ್ ಕ್ರಮವಾಗಿ 9 ಮತ್ತು 7 ಪಾಯಿಂಟ್ಸ್ ಗಳಿಸಿದರು.
ಸಮಬಲದ ಈ ಪಂದ್ಯದಲ್ಲಿ ರೇಡಿಂಗ್‌ನಲ್ಲಿ 20 ಪಾಯಿಂಟ್ಸ್ ಗಳಿಸಿದರೆ, ಪಟ್ನಾ 18 ಪಾಯಿಂಟ್ಸ್ ಪಡೆಯಿತು. ಟ್ಯಾಕ್‌ಲ್‌ನಲ್ಲಿ ಡೆಲ್ಲಿಗೆ 10 ಪಾಯಿಂಟ್ಸ್ ಬಂದರೆ ಪಟ್ನಾಗೆ 9 ಪಾಯಿಂಟ್ಸ್ ಬಂದವು. ಆದರೆ ಪಟ್ನಾ ಗಳಿಸಿದ ಆಲ್‌ಔಟ್ ಪಾಯಿಂಟ್‌ಗಳು ಆ ತಂಡಕ್ಕೆ ನೆರವಾದವು.
ಬುಧವಾರ ಪುಣೇರಿ ಪಲ್ಟಾನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಸೋತರೆ ಅದರ ಮುಂದಿನ ಹಂತದ ಕನಸು ಭಗ್ನಗೊಳ್ಳಲಿದೆ. ಒಂದು ವೇಳೆ ಗೆದ್ದರೂ ಪಾಯಿಂಟ್ಸ್ ಲೆಕ್ಕಾಚಾರದಲ್ಲಿ ಅದೃಷ್ಟ ಒಲಿದರೆ ಡೆಲ್ಲಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯುವ ಸಾಧ್ಯತೆ ಇದೆ.
ಫೈನಲ್‌ಗೆ ಫೈರ್‌ಬರ್ಡ್ಸ್: ಮಂಗ ಳೂರಿನ ಮಮತಾ ಪೂಜಾರಿ ನೇತೃತ್ವದ ಫೈರ್ ಬರ್ಡ್ಸ್ ತಂಡದವರು ಪ್ರೊ ಕಬಡ್ಡಿಯ ಮಹಿಳಾ ವಿಭಾಗದ ಫೈನಲ್ ತಲುಪಿದೆ. ಮೊದಲಾರ್ಧದಲ್ಲಿ ಉತ್ತಮ ಪೈಪೋಟಿ ಕಂಡು ಬಂದ ಈ ಪಂದ್ಯದಲ್ಲಿ ವಿಜಯೀ ತಂಡ ಅಭಿಲಾಷಾ ಮಾತ್ರೆ ನಾಯಕತ್ವದ ಐಸ್ ದಿವಾಸ್ ವಿರುದ್ಧ 22–13ರಿಂದ ಗೆಲುವು ಗಳಿಸಿತು.
ಮೊದಲರ್ಧದಲ್ಲಿ ಸ್ಕೋರು 6ನೇ ನಿಮಿಷದಲ್ಲಿ 3–3ರಿಂದ, 16ನೇ ನಿಮಿಷದಲ್ಲಿ 8–8ರಿಂದ ಮತ್ತು 10–10ರಿಂದ ಸಮಗೊಂಡಿತ್ತು. ಆದರೆ ಉತ್ತರಾರ್ಧದ 26ನೇ ನಿಮಿಷದಿಂದ ಮಮತಾ ಬಳಗ ಅತ್ಯುತ್ತಮವಾಗಿ ಆಡಿ 9 ಪಾಯಿಂಟ್ಸ್ ಕಲೆ ಹಾಕಿದರೆ, ಐಸ್ ದಿವಾಸ್ ಒಂದೂ ಪಾಯಿಂಟ್ ಗಳಿಸ ಲಾಗಲಿಲ್ಲ. ಈಗಾಗಲೇ ಫೈನಲ್ ತಲುಪಿ ರುವ ಕ್ವೀನ್ಸ್ ತಂಡವನ್ನು ಮಮತಾ ನೇತೃತ್ವದ ತಂಡ ಎದುರಿಸಲಿದೆ.
ಇದಕ್ಕೆ ಮೊದಲು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಮತಾ ಪೂಜಾರಿ ‘ಪ್ರೊ ಕಬಡ್ಡಿಯಿಂದಾಗಿ ಈ ದೇಶದಲ್ಲಿ ನಮ್ಮಂಥವರಿಗೆ ಉತ್ತಮ ವೇದಿಕೆ ಸಿಕ್ಕಿದೆ. ಹಿಂದೆಲ್ಲಾ ನಾನು ಏಷ್ಯಾ ಮತ್ತು ವಿಶ್ವಕಪ್ ಕಬಡ್ಡಿ ಕೂಟಗಳಲ್ಲಿ ಗೆದ್ದಾಗ ಜನರು ನನ್ನನ್ನು ಅಂತರ ರಾಷ್ಟ್ರೀಯ ಆಟಗಾರ್ತಿ ಎಂದಷ್ಟೇ ಗುರುತಿಸುತ್ತಿದ್ದರು. ಆದರೆ ಈಗ ಪ್ರೊ ಕಬಡ್ಡಿ ನನ್ನಂಥ ಆಟಗಾರ್ತಿಯರನ್ನು ಸ್ಟಾರ್‌ಗಳನ್ನಾಗಿ ಮಾಡಿದೆ’ ಎಂದರು.
ಮುಖ್ಯಾಂಶಗಳು
* ಫೈನಲ್ ಪ್ರವೇಶಿಸಿದ ಫೈರ್‌ಬರ್ಡ್ಸ್ ತಂಡ
* ಕಬಡ್ಡಿ ಲೀಗ್ ಬಗ್ಗೆ ಮಮತಾ ಪೂಜಾರಿ ಮೆಚ್ಚುಗೆ
* ಕಾಶಿನಾಥ್, ಮೆರಾಜ್ ತಲಾ 11 ಪಾಯಿಂಟ್ ಗಳಿಸಿದರು
Comments are closed.