
ನವದೆಹಲಿ: ಇತ್ತೀಚೆಗಷ್ಟೇ ಬಿಜೆಪಿಯಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ಮಾಜಿ ಕ್ರಿಕೆಟಿಗ ನವ್ಜೋತ್ ಸಿಂಗ್ ಸಿಧು ಸೋಮವಾರ ರಾಜೀನಾಮೆ ನೀಡಿದ್ದು, ಅವರು ಎಎಪಿ ಸೇರಲಿದ್ದಾರೆ ಎಂಬ ಸುದ್ದಿ ಸಂಚಲನ ಮೂಡಿಸಿದೆ.
ಸೋಮವಾರ ರಾಜ್ಯ ಸಭಾಧ್ಯಕ್ಷರಿಗೆ ರಾಜೀ ನಾಮೆ ಪತ್ರ ನೀಡಿದ ಅವರು, ರಾಜ್ಯಸಭೆ ಸದಸ್ಯತ್ವ ಹೊರೆಯಂತಾಗಿದೆ. ಇದರ ಮೂಲ ಉದ್ದೇಶವೇ ಮರೆಯಾದ ನಂತರ ಸದಸ್ಯತ್ವ ಸ್ಥಾನದಲ್ಲಿ ಮುಂದುವರಿಯಲಾರೆ. ಪಂಜಾಬ್ನ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 2014ರ ಲೋಕಸಭೆ ಚುನಾವಣೆ ವೇಳೆ ಅಮೃತಸರ ಕ್ಷೇತ್ರವನ್ನು ಬಿಜೆಪಿ ಮುಖಂಡ ಅರುಣ್ ಜೇಟ್ಲಿಗೆ ಬಿಟ್ಟುಕೊಟ್ಟ ನಂತರದಿಂದ ಸಿಧು ಪಕ್ಷದ ಮುಖಂಡರೊಂದಿಗೆ ಮುನಿಸಿಕೊಂಡಿದ್ದಾರೆ. ಬಿಜೆಪಿ ಮೈತ್ರಿಪಕ್ಷ ಅಕಾಲಿ ದಳ ಮುಖಂಡರ ಜತೆಗಿನ ಸಂಬಂಧವನ್ನೂ ಹದಗೆಡಿಸಿಕೊಂಡಿದ್ದಾರೆ.
ಎಎಪಿ ಸೇರ್ತಾರಾ?: 2017ರಲ್ಲಿ ನಡೆಯುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸುತ್ತಿದ್ದು, ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಸಿಧು ಅವರನ್ನು ಘೊಷಿಸುವ ಸಾಧ್ಯತೆಯಿದೆ. ಪೂರ್ವ ಅಮೃತಸರ ಕ್ಷೇತ್ರದ ಶಾಸಕಿಯಾಗಿರುವ ಸಿಧು ಪತ್ನಿ ನವ್ಜೋತ್ ಸಿಂಗ್ ಕೌರ್ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿ, ಎಎಪಿ ಸೇರುವ ಸಾಧ್ಯತೆಯಿದೆ. ಕಳೆದ ಏಪ್ರಿಲ್ 1ರಂದೇ ಕೌರ್ ಫೇಸ್ಬುಕ್ನಲ್ಲಿ ರಾಜೀನಾಮೆ ನೀಡಿರುವುದಾಗಿ ಘೊಷಿಸಿದ್ದರು. ಆದರೆ ನಂತರ ಮನಸು ಬದಲಿಸಿ, ಶಾಸಕಿಯಾಗಿ ಮುಂದುವರಿದಿದ್ದರು. ಡ್ರಗ್ಸ್ ಸೇರಿ ಹಲವು ವಿಚಾರಗಳ ಬಗ್ಗೆ ಅಕಾಲಿ ದಳ ಹಾಗೂ ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಕೌರ್ ಧ್ವನಿ ಎತ್ತಿದ್ದರು.
ಮುಕ್ತ ಸ್ವಾಗತ: ಸಿಧು ಎಎಪಿ ಸೇರುವುದಾದರೆ ಮುಕ್ತ ಸ್ವಾಗತ ಕೋರಲಾಗುವುದು ಎಂದು ಎಎಪಿ ಸಂಸದ ಭಗವಂತ ಮಾನ್ ಹೇಳಿದ್ದಾರೆ. ಸಿಎಂ ಅಭ್ಯರ್ಥಿ ಬಗ್ಗೆ ಪಕ್ಷ ತೀರ್ವನಿಸಲಿದೆ ಎಂದಿದ್ದಾರೆ. ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದು, ಸಿಧು ನಿರ್ಧಾರ ಸ್ವಾಗತಾರ್ಹ ಎಂದಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಸಿಧು ನಿರ್ಧಾರ ಶ್ಲಾಘನಾರ್ಹ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿಗೆ ಹಿನ್ನಡೆ
ಸಿಧು ರಾಜೀನಾಮೆ ನೀಡಿರುವುದು 2017ರ ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಪಂಜಾಬ್ನ ಪ್ರಮುಖ ರಾಜಕಾರಣಿಗಳಲ್ಲಿ ಸಿಧು ಒಬ್ಬರಾಗಿದ್ದು, ಅವರು ಎಎಪಿಗೆ ಸೇರಿದಲ್ಲಿ ಪಕ್ಷದ ಬಲ ಹೆಚ್ಚಲಿದೆ. ಸಿಧು ರಾಜ್ಯಾದ್ಯಂತ ಸಾಕಷ್ಟು ಬೆಂಬಲಿಗರನ್ನು ಹೊಂದಿದ್ದಾರೆ.
Comments are closed.