ರಾಷ್ಟ್ರೀಯ

ಕಟ್ಟಡದಿಂದ ಬಿದ್ದ ನಾಯಿ ‘ಭದ್ರ’ ಸೇಫ್:ಎಸೆದ ಕ್ರೂರಿಗಳಿಬ್ಬರು ಅರೆಸ್ಟ್

Pinterest LinkedIn Tumblr

dogಚೆನ್ನೈ: ಇಲ್ಲಿನ ಎಂಬಿಬಿಎಸ್‌ ವಿದ್ಯಾರ್ಥಿಯೊಬ್ಬ ಮೂರಂತಸ್ತಿನ ಕಟ್ಟಡವೊಂದರ ಟೆರೇಸ್‌ ನಿಂದ ಕೆಳೆಗೆಸೆದ ನಾಯಿ ಮರಿ ಜೀವಂತವಾಗಿ ಪತ್ತೆಯಾಗಿದ್ದು ಅದಕ್ಕೆ ಮದ್ರಾಸ್‌ ಪಶು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಕಟ್ಟಡದಿಂದ ಎಸೆದು, ಚಿತ್ರೀಕರಣ ನಡೆಸಿ ಜನಾಕ್ರೋಶಕ್ಕೆ ಕಾರಣವಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ಸ್ಥಳೀಯ ಕೋರ್ಟ್ ಬುಧವಾರ ಸಂಜೆ ಬೇಲ್ ಮೇಲೆ ಬಿಡುಗಡೆ ಮಾಡಿದೆ.

ನಾಯಿಯ ಕಾಲು ಮುರಿತಕ್ಕೊಳಗಾಗಿದ್ದು ತೀವ್ರವಾದ ಭೀತಿಗೊಳಗಾಗಿದ್ದು ಅದಕ್ಕೀಗ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೆಡಿಕಲ್‌ ಕಾಲೇಜಿನ ಪಶು ವೈದ್ಯ ಜಯಪ್ರಕಾಶ್‌ ತಿಳಿಸಿದ್ದಾರೆ. ಕಟ್ಟಡದಿಂದ ಬಿದ್ದು ಬದುಕುಳಿದ ನಾಯಿಗೆ ಪ್ರಾಣಿಪ್ರಿಯರು ‘ಭದ್ರ’ ಎನ್ನುವ ಹೆಸರಿಟ್ಟಿದ್ದಾರೆ.

ನಾಯಿ ಕಟ್ಟಡದಿಂದ ಬಿದ್ದ 2 ಗಂಟೆ ಯ ಬಳಿಕ 2 ಕೀಮಿ ದೂರದಲ್ಲಿ ಶ್ರವಣ ಕೃಷ್ಣನ್‌ ಎನ್ನುವವರಿಗೆಪತ್ತೆಯಾಗಿತ್ತು .ಅದರ ಚಿತ್ರವನ್ನು ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿಕೊಂಡಿದ್ದರು. ಕೃತ್ಯದ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರೀ ಸುದ್ದಿ ಮಾಡಿತ್ತು, ಆ ಬಳಿಕ ಪ್ರಾಣಿಪ್ರಿಯರು ಚೆನ್ನೈನ ಕುಂಡ್ರತ್ತೂರು ಪೊಲೀಸರಲ್ಲಿ ದೂರು ದಾಖಲಿಸಿದ್ದರು.

ಅಮಾನುಷ ಕೃತ್ಯ ಎಸಗಿದ ವ್ಯಕ್ತಿಯನ್ನು ಮಾಧಾ ಮೆಡಿಕಲ್‌ ಕಾಲೇಜಿನಲ್ಲಿ ಓದುತ್ತಿರುವ ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿ ಗೌತಮ್‌ ಎಸ್‌. ಎಂದು ಗುರುತಿಸಲಾಗಿದೆ. ಈತನ ಸಹಪಾಠಿಗಳಾಗಿರುವ ಮಾಧಾ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳೇ ಈ ಘಟನೆಯ ವಿವರಗಳನ್ನು ಮಾಧ್ಯಮಗಳಿಗೆ ಕಳಿಸಿ ಕೃತ್ಯ ಎಸಗಿದಾತನ ಗುರುತು, ಹೆಸರನ್ನು ತಿಳಿಸಿದ್ದರು.

ವಿಡಿಯೋವನ್ನು ಸ್ಲೋ ಮೋಷನ್‌ನಲ್ಲಿ ಚಿತ್ರೀಕರಿಸಲಾಗಿದ್ದು ಅಸಹಾಯಕ ನಾಯಿ ಮರಿ ಪ್ರಾಣಭಯದಲ್ಲಿ ಚೀರಾಡುತ್ತಾಅಂತಿಮವಾಗಿ ಅದು ನೆಲಕ್ಕೆ ಅಪ್ಪಳಿಸುವುದನ್ನು ಕಂಡರೆ ಯಾರಿಗೇ ಆದರೂ ಸಂಕಟವಾಗುವಂತಿತ್ತು.
-ಉದಯವಾಣಿ

Comments are closed.