ಅಂತರಾಷ್ಟ್ರೀಯ

ರೋಮ್ ಬಿಡ್ ಗೆದ್ದರೆ ಒಲಿಂಪಿಕ್ಸ್​ಗೆ ಕ್ರಿಕೆಟ್!

Pinterest LinkedIn Tumblr

cricket

ಎಡಿನ್ಬರ್ಗ್: ಜಾಗತಿಕ ಕ್ರೀಡೆಯ ಮಹಾನ್ ಟೂರ್ನಿ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಯ ಕುರಿತು ಸಿಹಿಸುದ್ದಿ ಸಿಕ್ಕಿದೆ. 2024ರ ಒಲಿಂಪಿಕ್ಸ್ನ ಬಿಡ್ಅನ್ನು ಇಟಲಿ ರಾಜಧಾನಿ ರೋಮ್ ಗೆದ್ದಲ್ಲಿ, ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆಯಾಗಲಿದೆ ಎಂದು ಇಟಲಿ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸಿಮೋನ್ ಗ್ಯಾಂಬಿನೋ ಹೇಳಿದ್ದಾರೆ. ಎಡಿನ್ಬರ್ಗ್ನಲ್ಲಿ ಐಸಿಸಿಯ ವಾರ್ಷಿಕ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿಯೇ ಗ್ಯಾಂಬಿನೋ ಈ ಹೇಳಿಕೆ ನೀಡಿದ್ದಾರೆ.

‘2024ರಲ್ಲಿ ಒಲಿಂಪಿಕ್ಸ್ಗೆ ರೋಮ್ ಆತಿಥ್ಯ ವಹಿಸಿಕೊಂಡರೆ, ಕ್ರಿಕೆಟ್ ಸೇರಿಸಲಿದ್ದೇವೆ. ಸಂಘಟನಾ ಸಮಿತಿಯೊಂದಿಗೆ ಈ ವಿಚಾರವಾಗಿ ನಾವು ಸ್ಪಷ್ಟ ನಿಲುವು ಹೊಂದಿದ್ದೇವೆ’ ಎಂದು ಗ್ಯಾಂಬಿನೋ ವಿವರಿಸಿದ್ದಾರೆ. 2024ರ ಬೇಸಿಗೆ ಒಲಿಂಪಿಕ್ಸ್ಗೆ ರೋಮ್ ಜತೆ, ಪ್ಯಾರಿಸ್, ಅಮೆರಿಕದ ಲಾಸ್ ಏಂಜಲಿಸ್ ಹಾಗೂ ಹಂಗೆರಿ ರಾಜಧಾನಿ ಬುಡಾಪೆಸ್ಟ್ ಬಿಡ್ ಸಲ್ಲಿಸಲಿದೆ. ಆತಿಥ್ಯ ದೇಶಕ್ಕೆ ನಿಯಮಾವಳಿಯ ಅನುಸಾರ 5 ಕ್ರೀಡೆಗಳನ್ನು ಒಲಿಂಪಿಕ್ಸ್ಗೆ ಸೇರಿಸುವ ಅವಕಾಶವೂ ಇರಲಿದೆ. ರೋಮ್ ಬಿಡ್ ಗೆದ್ದಲ್ಲಿ, ಒಲಿಂಪಿಕ್ಸ್ ಕ್ರಿಕೆಟ್ ಪಂದ್ಯಗಳು ಬೊಲೊಗ್ನಾ ಸ್ಥಳದಲ್ಲಿ ನಡೆಯಲಿವೆ. ಇದೇ ಸ್ಥಳದಲ್ಲಿ 2010ರ ವಿಶ್ವ ಕ್ರಿಕೆಟ್ ಲೀಗ್ನ 4ನೇ ಡಿವಿಜನ್ನ ಪಂದ್ಯಗಳು ನಡೆದಿದ್ದವು.

1900 ಒಲಿಂಪಿಕ್ಸ್ನಲ್ಲಿ ಇದ್ದ ಗೇಮ್ 1900ರಲ್ಲಿ ಪ್ಯಾರಿಸ್ನಲ್ಲಿ ನಡೆದಿದ್ದ ಗೇಮ್ಸ್ನಲ್ಲಿ ಕ್ರಿಕೆಟ್ಅನ್ನು ಮೊದಲ ಹಾಗೂ ಕೊನೆಯ ಬಾರಿಗೆ ಆಡಿಸಲಾಗಿತ್ತು. ಆ ಬಳಿಕ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಪ್ರಯತ್ನದ ನಡುವೆಯೂ ಐಸಿಸಿ ಮಾತ್ರ ಒಲಿಂಪಿಕ್ಸ್ನಿಂದ ದೂರ ಉಳಿಯುವ ತೀರ್ವನ ಮಾಡಿತ್ತು. ಆದರೆ, ಟಿ20 ಕ್ರಿಕೆಟ್ ಉದಯದ ಬಳಿಕ ಕ್ರಿಕೆಟ್ಅನ್ನು ಜಾಗತಿಕ ಕ್ರೀಡಾಕೂಟಕ್ಕೆ ಮರು ಸೇರ್ಪಡೆ ಮಾಡುವ ಕುರಿತು ಹೆಚ್ಚಿನ ಬಹುಮತ ಬಂದಿವೆ.

ಐಸಿಸಿ ಸಭೆಯಲ್ಲಿ ಸೌದಿ ಅರೇಬಿಯಾ ಬಗ್ಗೆ ಚರ್ಚೆ: ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ 39ನೇ ಸದಸ್ಯ ರಾಷ್ಟ್ರವಾಗಿ ಸೌದಿ ಅರೇಬಿಯಾವನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು. ಅದರೊಂದಿಗೆ ಅಮೆರಿಕ ಹಾಗೂ ನೇಪಾಳ ಕ್ರಿಕೆಟ್ ಸಂಸ್ಥೆ ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

Comments are closed.