
ಹರಾರೆ: ಪೂರ್ವಾಪರ ವಿಚಾರಿಸದೇ ತತ್ ಕ್ಷಣದ ಸುದ್ದಿ ನೀಡುವ ಭರದಲ್ಲಿ ಅಂತರ್ಜಾಲ ಪತ್ರಿಕೆ ವರದಿಯನ್ನಾಧರಿಸಿ ಜಿಂಬಾಬ್ವೆ ಮಾಧ್ಯಮಗಳು ಮಾಡಿದ ಯಡವಟ್ಟಿನಿಂದಾಗಿ ಇದೀಗ ಭಾರತೀಯ ಕ್ರಿಕೆಟಿಗರಿಗೆ ಕಳಂಕ ಬರುವಂತಾಗಿದೆ.
ಜಿಂಬ್ವಾಬ್ವೆ ಅತ್ಯಾಚಾರ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ದೊರೆತಿದ್ದು, ಅತ್ಯಾಚಾರ ಮಾಡಿದ ಆರೋಪವಿರುವುದು ಭಾರತ ಮೂಲದ ವ್ಯಕ್ತಿಗಳ ಮೇಲಷ್ಟೇ.. ಭಾರತ ಕ್ರಿಕೆಟ್ ತಂಡದ ಆಟಗಾರರ ವಿರುದ್ಧವಲ್ಲ ಎಂಬುದು ಇದೀಗ ಮನವರಿಕೆಯಾಗಿದೆ. ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಜಿಂಬಾಬ್ವೆ ರಿಪಬ್ಲಿಕನ್ ಪೊಲೀಸರು ಪ್ರಸ್ತುತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರೂ ಭಾರತ ಮೂಲದ ವ್ಯಕ್ತಿಗಳು ಎಂದು ತಿಳಿದುಬಂದಿದೆ. ಬಂಧಿತ ವ್ಯಕ್ತಿಗಳನ್ನು ಕೃಷ್ಣ ಸತ್ಯನಾರಾಯಣ ಮತ್ತು ರಾಜ್ ಕುಮಾರ್ ಕೃಷ್ಣನ್ ಎಂದು ಗುರುತಿಸಲಾಗಿದ್ದು, ಈ ಪೈಕಿ ಕೃಷ್ಣ ಸತ್ಯನಾರಾಯಣ ಟೂರ್ನಿಯ ಕಾರ್ಯಕ್ರಮ ನಿರ್ವಹಣಾ ಸಂಸ್ಥೆ ಐಟಿಡಬಲ್ಯೂ ಸಂಸ್ಥೆಯ ಸದಸ್ಯನಾಗಿದ್ದು, ಮತ್ತೋರ್ವ ಆರೋಪಿ ರಾಜ್ ಕುಮಾರ್ ಕೃಷ್ಣನ್ ಝಾಂಬಿಯಾ ಮೂಲದ ಉಧ್ಯಮಿ ಎಂದು ತಿಳಿದುಬಂದಿದೆ.
ಕೃಷ್ಣ ಸತ್ಯನಾರಾಯಣ ಐ ಟೀಮ್ ವರ್ಕ್ಸ್ ಸಂಸ್ಥೆ ಸಹ ಸಂಸ್ಥಾಪಕನಾಗಿದ್ದು, ಇದೇ ಸಂಸ್ಥೆ ಇಂಡೋ-ಜಿಂಬಾಬ್ವೆ ಟೂರ್ನಿ ಈವೆಂಟ್ ಆರ್ಗನೈಸ್ ಹೊಣೆ ಹೊತ್ತಿತ್ತು ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಂಬಾಬ್ವೆ ಹಿರಿಯ ಸಹಾಯಕ ಪೊಲೀಸ್ ಆಯುಕ್ತ ಚಾರಿತಿ ಚರಂಬಾ ಅವರು, ಅತ್ಯಾಚಾರ ಪ್ರಕರಣದಲ್ಲಿ ಭಾರತೀಯ ಕ್ರಿಕೆಟಿಗರ ಕೈವಾಡವಿಲ್ಲ. ಪ್ರಕರಣ ಸಂಬಂಧ ಇಬ್ಬರು ಭಾರತ ಮೂಲದ ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.
ಅಂತರ್ಜಾಲ ಪತ್ರಿಕೆಯ ಯಡವಟ್ಟಿನಿಂದಾಗಿ ಹರಾಜಾಯ್ತು ಭಾರತ ಕ್ರಿಕೆಟ್ ತಂಡದ ಮಾನ
ಇನ್ನು ಅತ್ತ ಅತ್ಯಾಚಾರ ಆರೋಪ ಕೇಳಿಬರುತ್ತಿದ್ದಂತೆಯೇ ಜಿಂಬಾಬ್ವೆಯ ಅಂತರ್ಜಾಲ ಪತ್ರಿಕೆ ( newzimbabwe.com)ಯೊಂದು ಈ ಬಗ್ಗೆ ವರದಿ ಮಾಡಿತ್ತು. ಆರೋಪಿಗಳಾದ ಕೃಷ್ಣ ಸತ್ಯನಾರಾಯಣ ಮತ್ತು ರಾಜ್ ಕುಮಾರ್ ಕೃಷ್ಣನ್ ಇಬ್ಬರೂ ಟೀಂ ಇಂಡಿಯಾ ಆಟಗಾರರು ಉಳಿದುಕೊಂಡಿದ್ದ ಖಾಸಗಿ ಹೊಟೆಲ್ ನಲ್ಲಿನ ಮತ್ತೊಂದು ಬದಿಯ ಕೊಠಡಿಗಳಲ್ಲಿ ಇದ್ದರು. ಇದನ್ನೇ ತಪ್ಪಾಗಿ ಭಾವಿಸಿದ ಅಂತರ್ಜಾಲ ಪತ್ರಿಕೆ ವರದಿಗಾರ ಇವರೂ ಭಾರತ ತಂಡದ ಆಟಗಾರರಿರಬಹುದು ಎಂದು ಭಾವಿಸ ವರದಿ ಮಾಡಿದ್ದಾನೆ. ಅಲ್ಲದೇ ಅತ್ಯಾಚಾರಕ್ಕೊಳಗಾದ ಮಹಿಳೆ ಕೂಡ ಇದೇ ಹೊಟೆಲ್ ನಲ್ಲಿ ಇದ್ದಳು ಎಂದು ಹೇಳಲಾಗುತ್ತಿದೆ.
ಇನ್ನು ಅಂತರ್ಜಾಲ ಪತ್ರಿಕೆ ಪ್ರಕಟಿಸಿದ ವರದಿಯನ್ನೇ ಆಧರಿಸಿ ಜಿಂಬಾಬ್ವೆ ಮಾಧ್ಯಮಗಳು ವರದಿ ಬಿತ್ತರಿಸಿದ್ದು, ವಿಶ್ವಾದ್ಯಂತ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಭಾರತೀಯ ಕ್ರಿಕೆಟಿಗರ ಮಾನ ಹರಾಜಾಗಿತ್ತು. ಆದರೆ ಸತ್ಯಾಂಶ ಹೊರಗೆ ಬಂದ ಬಳಿಕ ಅಂತರ್ಜಾಲ ಪತ್ರಿಕೆ ತನ್ನ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿದೆ.
ಕ್ರಿಕೆಟಿಗರಿಗೆ ಸಂಬಂಧಿಕರಿಂದ ದೂರವಾಣಿ ಕರೆಗಳ ಸುರಿಮಳೆ
ರಾಷ್ಟ್ರೀಯ ಸುದ್ದಿಮಾಧ್ಯಮಗಳಲ್ಲಿ ಅತ್ಯಾಚಾರ ಆರೋಪ ಕುರಿತ ವರದಿಗಳು ಪ್ರಸಾರವಾಗುತ್ತಿದ್ದಂತೆಯೇ ಜಿಂಬಾಬ್ವೆ ಪ್ರವಾಸದಲ್ಲಿರುವ ಕ್ರಿಕೆಟಿಗರಿಗೆ ಅವರ ಸಂಬಂಧಿಕರು ದೂರವಾಣಿ ಕರೆಗಳ ಸುರಿಮಳೆ ಗೈದಿದ್ದು, ಪ್ರಕರಣ ಸಂಬಂಧ ಆಘಾತ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಸುದ್ದಿ ನಿಜವೆಂದು ನಂಬಿ ಕ್ರಿಕೆಟಿಗರನ್ನು ತರಾಟೆಗೆ ತೆಗೆದುಕೊಂಡ ಉದಾಹರಣೆ ಕೂಡ ಇದೆ. ಇದೀಗ ಆರೋಪಿಗಳನ್ನು ಜಿಂಬಾಬ್ವೆ ಪೊಲೀಸರು ಬಂಧಿಸಿದ್ದು, ಕ್ರಿಕೆಟಿಗರು ನಿರಮ್ಮಳರಾಗಿದ್ದಾರೆ.
ಶವ ಸಂಸ್ಕಾರಕ್ಕೆ ಆಗಮಿಸಿದ್ದ ಮಹಿಳೆ ಮೇಲೆ ಅತ್ಯಾಚಾರ?
ಪೊಲೀಸ್ ಮೂಲಗಳ ಪ್ರಕಾರ ಆಫ್ರಿಕಾ ಮೂಲದ ಮಹಿಳೆ ಸಂಬಂಧಿಕರ ಶವ ಸಂಸ್ಕಾರಕ್ಕಾಗಿ ಹರಾರೆಗೆ ಆಗಮಿಸಿದ್ದರು ಮತ್ತು ಕ್ರಿಕೆಟಿಗರು ಉಳಿದುಕೊಂಡಿದ್ದ ಅದೇ ಹೊಟೆಲ್ ನಲ್ಲಿಯೇ ಆಕೆ ಕೂಡ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ. ಪ್ರಸ್ತುತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ ಪೊಲೀಸರು ಆಕೆಯ ಮೇಲೆ ಅತ್ಯಾಚಾರವಾಗಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಅಂತೆಯೇ ಅತ್ಯಾಚಾರ ಆರೋಪ ಎದುರಿಸುತ್ತಿರುವ ಭಾರತ ಮೂಲದ ಕೃಷ್ಣ ಸತ್ಯನಾರಾಯಣ ಮತ್ತು ರಾಜ್ ಕುಮಾರ್ ಕೃಷ್ಣನ್ ರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಇವರನ್ನು ಪ್ರಸ್ತುತ ನ್ಯಾಯಾಂಗ ವಶಕ್ಕೆ ನೀಡಿದ್ದು, ಇವರ ವೈದ್ಯಕೀಯ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
Comments are closed.