ಶ್ರೀನಗರ್: ಮುಸ್ಲಿಂ ಮಹಿಳಾ ಶಿಕ್ಷಕಿಯರು ತರಗತಿಗೆ ಬರೋವಾಗ ಬುರ್ಖಾ ಧರಿಸಬಾರದು ಎಂದು ಕಾಶ್ಮೀರದಲ್ಲಿರುವ ಪ್ರತಿಷ್ಠಿತ ದಿಲ್ಲಿ ಪಬ್ಲಿಕ್ ಸ್ಕೂಲ್(ಡಿಪಿಎಸ್) ಸೂಚನೆ ನೀಡಿದ್ದು, ಇದು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಮುಸ್ಲಿಂ ಪ್ರಾಬಲ್ಯ ಹೊಂದಿರುವ ರಾಜ್ಯದಲ್ಲಿ ಈ ರೀತಿಯ ಆದೇಶ ನೀಡಿರುವುದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರ, ಕಾಶ್ಮೀರ ರಾಜ್ಯವೇನು ಫ್ರಾನ್ಸ್ ಅಲ್ಲ ಎಂದು ಹೇಳಿದೆ.
ಡಿಎನ್ಎ ದೈನಿಕದ ಪ್ರಕಾರ, ಮೆಹಬೂಬಾ ಮುಫ್ತಿ ನೇತೃತ್ವದ ಸರ್ಕಾರ ಶಾಲಾ ಆಡಳಿತ ಮಂಡಳಿಗೆ ಕಠಿಣವಾದ ಎಚ್ಚರಿಕೆಯ ಸಂದೇಶ ರವಾನಿಸಿದ್ದು, ಜಮ್ಮು ಕಾಶ್ಮೀರ ಫ್ರಾನ್ಸ್ ಅಲ್ಲ. ಜನರು ಯಾವ ಬಟ್ಟೆ ಧರಿಸಬೇಕೆಂಬುದನ್ನು ಸರ್ಕಾರವಾಗಲಿ ಅಥವಾ ಯಾವುದೇ ಇನ್ಸ್ ಟಿಟ್ಯೂಟ್ ನಿರ್ಧರಿಸುವುದಲ್ಲ ಎಂದು ಹೇಳಿದೆ.
ಶುಕ್ರವಾರ ವಿಜ್ಞಾನ ಶಿಕ್ಷಕಿಯೊಬ್ಬರು ಬುರ್ಖಾ ಧರಿಸಿ ಬಂದಿದ್ದಕ್ಕೆ ಅವರಿಗೆ ತರಗತಿ ಪ್ರವೇಶಿಸಲು ಅನುಮತಿ ನೀಡಿರಲಿಲ್ಲವಾಗಿತ್ತು. ಇದನ್ನು ಖಂಡಿಸಿ ಪ್ರತಿಭಟನೆ ನಡೆದಿತ್ತು ಎಂದು ವರದಿ ತಿಳಿಸಿದೆ.
-ಉದಯವಾಣಿ
Comments are closed.