ಗುಜರಾತ್: ಪ್ರಾಧ್ಯಾಪಕರು ಚಾಪೆ ಕೆಳಗೆ ನುಗ್ಗಿದರೆ ರಂಗೋಲಿ ಕೆಳಗೆ ನುಗ್ಗಲು ಯತ್ನಿಸುವಂತಹ ಮಕ್ಕಳ ಬಗ್ಗೆ ನಾವು ಬಹಳ ಕೇಳಿದ್ದೇವೆ, ಅಂತೆಯೇ ಗುಜಾರತ್ ನ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತಾನು ಬರೆದ ಉತ್ತರ ಪತ್ರಿಕೆಯನ್ನು ತಾನೇ ತಿದ್ದಿ ನೂರಕ್ಕೆ ನೂರು ಅಂಕ ಪಡೆಯುವ ವಿಫಲ ಯತ್ನವನ್ನು ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಅಹ್ಮದಾಬಾದ್ ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹರ್ಷದ್ ಸರ್ವಯ್ಯ ಎಂಬಾತ ಭೂವಿಜ್ಞಾನ ಹಾಗೂ ಅರ್ಥಶಾಸ್ತ್ರ ಉತ್ತರ ಪತ್ರಿಕೆಗಳನ್ನು ತಾನೇ ತಿದ್ದುಪಡಿ ಮಾಡಿ ಬಳಿಕ ನೂರಕ್ಕೆ ನೂರು ಅಂಕಗಳನ್ನು ಪಡೆಯಲೆತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಈತನ ಮೇಲೆ ಗುಜರಾತ್ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ ಪ್ರಕರಣ ದಾಖಲಿಸಲು ನಿರ್ಧರಿಸಿದೆ.
ಸಿಕ್ಕಿಬಿದ್ದಿದ್ದು ಹೇಗೆ ?
ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ “ಬುದ್ದಿವಂತ” ಬಾಲಕ ಹರ್ಷದ್ ಅರ್ಥಶಾಸ್ತ್ರ ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ತಾನು ಪಾಸಾಗುತ್ತೇನೆ ಎಂಬ ಭ್ರಮೆಯೋ ಏನೋ ಹೇಗಾದರೂ ಮಾಡಿ ಅರ್ಥಶಾಸ್ತ್ರ ಮತ್ತು ಭೂವಿಜ್ಞಾನದಲ್ಲಿ ಪಾಸಾಗಬೇಕೆಂಬ ಆಸೆಯಿಂದ ತಾನು ಬರೆದ ಉತ್ತರ ಪತ್ರಿಕೆಗಳಿಗೆ ತಾನೇ ಕರೆಕ್ಷನ್ ಮಾಡಿದ್ದಾನೆ. ಆದರೆ ತನ್ನ ಮೇಲೆ ಯಾವುದೇ ರೀತಿಯ ಅನುಮಾನ ಬಾರದಿರಲು ಉತ್ತರ ಪತ್ರಿಕೆಯ ಮುಖಪುಟಕ್ಕೆ ಅಂಕಗಳನ್ನು ನಮೂದಿಸದೇ ಹಾಗೆಯೇ ಬಿಟ್ಟಿದ್ದ.
ಆದರೆ ಆತನ ಉತ್ತರವನ್ನು ಪ್ರಕಟಿಸಲು ಕಂಪ್ಯೂಟರ್ ನಲ್ಲಿಅಪ್ಲೋಡ್ ಮಾಡುತ್ತಿದ್ದ ವೇಳೆ ಆತನ ಭೂಗೋಳಶಾಸ್ತ್ರದಲ್ಲಿ (34) ಗುಜರಾತಿ (13), ಇಂಗ್ಲೀಷ್ (12), ಸಂಸ್ಕೃತ (4), ಸಮಾಜಶಾಸ್ತ್ರ (20), ಮನೋವಿಜ್ಞಾನ (5) ಹಾಗೂ ಭೂಗೋಳಶಾಸ್ತ್ರ (35) ಅಂಕಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ಮತ್ತೊಮ್ಮೆ ಈತನ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡಲು ಆದೇಶಿಸಿದ್ದಾರೆ.
ಮೌಲ್ಯಮಾಪನ ಮಾಡಿದ್ದ ಏಳು ಪ್ರಾಧ್ಯಾಪಕರೂ ಸಸ್ಪೆಂಡ್
ಹರ್ಷದ್ ಏನೋ ತಾನು ಬರೆದ ಉತ್ತರ ಪತ್ರಿಕೆಗೆ ತಾನೇ ಕರೆಕ್ಷನ್ ಮಾಡಿ ಹೋಗಿದ್ದ, ಆದರೆ ಇನ್ನು ಮೌಲ್ಯಮಾಪನ ಮಾಡಿದ ಏಳು ಮಂದಿ ಪ್ರಧ್ಯಾಪಕರಿಗೆ ಅರಿವಿರಲಿಲ್ಲವೇ? ಎಂಬ ಪ್ರಶ್ನೆ ಉದ್ಬವವಾಗಿದೆ. “ಪ್ರಾಧ್ಯಾಪಕರು ಕೇವಲ ಅಂಕಗಳನ್ನು ಕ್ರೂಢೀಕರಿಸಿ ನೂರಕ್ಕೆ ನೂರು ಅಂಕಗಳನ್ನು ನೀಡಿದ್ದಾರೆ. ಈತನ ಉತ್ತರ ಪತ್ರಿಕೆಯನ್ನು ಯಾವುದೇ ಪ್ರಧ್ಯಾಪಕನೂ ಸರಿಯಾಗಿ ಗಮನಿಸಿಲ್ಲ ಆದ್ದರಿಂದ ಅವರ ಮೇಲೂ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ.” ಎಂದು ಗುಜರಾತ್ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿಯ ಕಾರ್ಯದರ್ಶಿ ಪಟೇಲ್ ತಿಳಿಸಿದ್ದಾರೆ.
Comments are closed.