ರಾಷ್ಟ್ರೀಯ

26/11 ಮುಂಬೈ ದಾಳಿ ವೇಳೆ ಪಾಕ್ ಆತಿಥ್ಯ ಸ್ವೀಕಾರ; ಆರೋಪ ತಳ್ಳಿ ಹಾಕಿದ ಮಧುಕರ್ ಗುಪ್ತ

Pinterest LinkedIn Tumblr

madhukar-guptaನವದೆಹಲಿ: 26/11 ಮುಂಬೈ ಮೇಲೆ ಉಗ್ರ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತದ ಗೃಹ ಸಚಿವಾಲಯ ಅಧಿಕಾರಿಗಳು ಪಾಕಿಸ್ತಾನದಿಂದ ಆತಿಥ್ಯ ಸ್ವೀಕಾರ ಮಾಡುತ್ತಿದ್ದರು ಎಂಬ ಆರೋಪವನ್ನು ಮಾಜಿ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತ ಅವರು ಶನಿವಾರ ತಳ್ಳಿಹಾಕಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, 26/11 ಮುಂಬೈ ದಾಳಿ ಸಮಯದಲ್ಲಿ ದ್ವಿಪಕ್ಷೀಯ ಮಾತುಕತೆಗೆ ತೆರಳಲಾಗಿತ್ತು. ಈ ವೇಳೆ ಇಸ್ಲಾಮಾಬಾದಿನ ಪರ್ವತ ಪ್ರದೇಶವಾದ ಮುರ್ರೆಯಲ್ಲಿ ರಜಾದ ಮಜಾ ಅನುಭವಿಸುತ್ತಿದ್ದವೆಂದು ಕೆಲವು ಆರೋಪಗಳು ಕೇಳಿಬಂದಿವೆ. ಇಂತಹ ವರದಿಗಳು ಎಲ್ಲಿಂದ ಬರುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಮುರ್ರೆಯಲ್ಲಿ ನೆಟವರ್ಕ್ ಸಮಸ್ಯೆಯಿತ್ತು. ದಾಳಿ ದಿನ ನನಗೆ ಭಾರತದಿಂದ ಕರೆಯೊಂದು ಬಂದಿತ್ತು. ದಾಳಿ ಕುರಿತಂತೆ ಮಾಹಿತಿ ನೀಡಿದರು. ನಂತರ ಟಿವಿಯನ್ನು ನೋಡಿದಾಗ ವಿಚಾರ ತಿಳಿಯಿತು.
ಸುದ್ದಿ ತಿಳಿಯುತ್ತಿದ್ದಂತೆ ಭಾರತದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. 26/11 ದಾಳಿ ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ಮುಂಬೈ ಮೇಲಿನ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಂತಹ ಪ್ರಕರಣಗಳು ಭಾರತದಲ್ಲಿ ನಡೆದಿರುವುದು ಇದು ಮೊದಲೇನಲ್ಲ. ದಾಳಿ ನಡೆದ ದಿನ ಭಾರತದ ಅಧಿಕಾರಿಗಳೊಂದಿಗೆ ಸುಧೀರ್ಘವಾಗಿ ಸಂಪರ್ಕದಲ್ಲಿದ್ದೆವು.
ದೇಶದಲ್ಲಿ ಯಾವುದೇ ಘಟನೆಗಳು ಸಂಭವಿಸಿದ್ದರೂ ಒಬ್ಬರಲ್ಲ ಒಬ್ಬರೊಂದಿಗೆ ಸಂಪರ್ಕದಲ್ಲಿರುತ್ತೇನೆ. 8 ವರ್ಷಗಳ ಬಳಿಕ ಇಂತಹ ವರದಿಗಳಿಂದ ಏನನ್ನೂ ಸಾಬೀತು ಪಡಿಸಲು ಹೋಗುತ್ತಿದ್ದಾರೆ. ಇದರ ಹಿಂದೆ ಯಾವ ಪಿತೂರಿಯಿದೆ ಎಂಬುದು ನನಗೆ ತಿಳಿಯುತ್ತಿಲ್ಲ. ಭೌತಿಕ ಉಪಸ್ಥಿತಿಯಿಂದ ಏನನ್ನು ಬದಲಾಯಿಸಲು ಸಾಧ್ಯ. ದಾಳಿ ವೇಲೆ ಎನ್ಎಸ್ ಜಿ ಬೀಡುಬಿಟ್ಟು ಕಾರ್ಯಾಚರಣೆ ನಡೆಸುತ್ತಿತ್ತು. ಸ್ಥಳದಲ್ಲಿ ನಾನಿದ್ದರೆ ಮಾತ್ರ ಯಾವ ಬದಲಾವಣೆಯಾಗುತ್ತಿತ್ತು ಎಂದು ಹೇಳಿದ್ದಾರೆ.
26/11 ಮುಂಬೈ ದಾಳಿ ವೇಳೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಹೋಗಿದ್ದ ಭಾರತದ ಗೃಹ ಸಚಿವಾಲಯ ಅಧಿಕಾರಿಗಳಿಗೆ ತಮ್ಮ ಪ್ರವಾಸವನ್ನು ಮುಂದುವರಿಸುವಂತೆ ಪಾಕಿಸ್ತಾನ ಮಾಡಿತ್ತು. 2008 ನವೆಂಬರ್ 25ರಂದು ಭಾರತದ ಅಧಿಕಾರಿಗಳು ಪಾಕಿಸ್ತಾನದಲ್ಲಿದ್ದರು. ನವೆಂಬರ್ 26, 2008ರಂದು ಲಷ್ಕರ್ ಇ-ತೊಯ್ಬಾದ 10 ಮಂದಿ ಉಗ್ರಗಾಮಿಗಳು ಮುಂಬೈಯ ಪ್ರಮುಖ ತಾಣಗಳ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಭಾರತದ ಭದ್ರತಾ ಅಧಿಕಾರಿಗಳು ಇಸ್ಲಾಮಾಬಾದಿನ ಪರ್ವತ ಪ್ರದೇಶವಾದ ಮುರ್ರೆಯಲ್ಲಿ ರಜಾದ ಮಜಾ ಅನುಭವಿಸುತ್ತಿದ್ದರು ಎಂಬ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು.

Comments are closed.