ಕರ್ನಾಟಕ

ಸಿದ್ದುಗೆ ಹೊಸ ವಾಹನ ಯೋಗ

Pinterest LinkedIn Tumblr

cm-new-carಬೆಂಗಳೂರು, ಜೂ. ೧೧- ಮೂಢನಂಬಿಕೆ ವಿರುದ್ಧ ಸಮರ ಸಾರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ತಾವೇ ಅಂಧವಿಶ್ವಾಸಕ್ಕೆ ಬಲಿಯಾದ ಅನುಮಾನ ಕಾ‌ಡುವಂತಾಗಿದೆ.
ಇದೇ ಜೂನ್ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಬಲಭಾಗದ ಮೇಲೆ ಮರಿ ಕಾಗೆ ಕುಳಿತು ಕಾಡಿದ್ದು ಸುದ್ದಿಯಾಗಿತ್ತು. ಚಾಲಕ ಕಾಗೆಯನ್ನು ಓಡಿಸಲು ಕಾರನ್ನು ಹಿಂದೆ-ಮುಂದೆ ಚಲಾಯಿಸಿದರೂ ಕಾಗೆ ಕುಳಿತ ಜಾಗದಿಂದ ಕದಲಿರಲಿಲ್ಲ. ಇದು ಸಿಎಂಗೆ ಅಪಶಕುನದ ಸಂಕೇತ ಎಂದು ಆಸ್ತಿಕರು ವಿಶ್ಲೇಷಿಸಿದ್ದರು. ಆದರೆ ಇಂತಹ ಮಾತುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಗೊಡಲಾರರು ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಸಿಎಂ ತಮ್ಮ ಕಾರು ಬದಲಿಸಲು ತೀರ್ಮಾನಿಸಿ, ಹೊಸ ಕಾರನ್ನು ಖರೀದಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ 35 ಲಕ್ಷ ರೂಪಾಯಿ ವೆಚ್ಚದ ಫಾರ್ಚೂನರ್ ಹೈ ಎಂಡ್ 2016 ಮಾಡೆಲ್ ಬಿಳಿಯ ಬಣ್ಣದ ಕಾರು ಖರೀದಿಸಿದ್ದಾರೆ. ಕಾರು ಈಗಾಗಲೇ ಕುಮಾರಕೃಪಾ ಕಾಂಪೌಂಡ್ ಒಳಗೆ ಬಂದು ನಿಂತಿದೆ. ಕಾರಿಗೆ ನೋಂದಣಿ ಸಂಖ್ಯೆ ಅಳವಡಿಕೆಯಾಗಬೇಕಿದ್ದು, ಮುಂದಿನ ವಾರದಲ್ಲಿ ಹೊಸ ಕಾರನ್ನು ಬಳಸಲಿದ್ದಾರೆ ಬಳಸಲಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಇನ್ನು ಕಳೆದ ಮೂರು ವರ್ಷಗಳಿಂದಲೂ ಒಂದೇ ಕಾರಿನಲ್ಲಿ ಸಂಚರಿಸುತ್ತಿದ್ದ ಸಿದ್ದರಾಮಯ್ಯ ಇದೀಗ ಧೀಡಿರ್ ಕಾರು ಬದಲಾಯಿಸಿದ್ದು, ಕಾಗೆ ಅಪಶಕುನ ಎಂದು ಭಾವಿಸಿ ಹೊಸ ಕಾರು ಖರೀದಿಸಿರಬಹುದು ಎಂಬ ಅನುಮಾನ ಹುಟ್ಟುಹಾಕಿದೆ. ಕಾಗೆ ಸಿಎಂ ಕಾರಿನಲ್ಲಿ ಕೂತು ಅವಾಂತರ ಸೃಷ್ಟಿಸಿದ ಬಳಿಕ ಮಾಧ್ಯಮಗಳಲ್ಲಿ ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದವು. ಕಾಗೆಗಳು ಅಪಶಕುನ ಹಾಗೂ ಮುಂದಾಗುವ ಅನಾಹುತಗಳ ಸಂಕೇತ ಎಂದು ಜೋತ್ಯಿಷಿಗಳು ವಿಶ್ಲೇಷಣೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಕಾರು ಬದಲಾಯಿಸಿದ್ದಾರೆ ಎನ್ನಲಾಗಿದೆ.

Comments are closed.