ಪಾಟ್ಣಾ: ಬಿಹಾರ್ ಪಿಯುಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ವಿಜ್ಞಾನ ವಿಷಯದಲ್ಲಿ ಟಾಪ್ ರ‍್ಯಾಂಕ್ ಪಡೆದಿದ್ದ ವಿದ್ಯಾರ್ಥಿ ಹಾಜಿಪುರದ ಸೌರಭ್ ಜೂನ್ 3 ರಂದು ನಡೆದ ಮರು ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾನೆ.
ಟಾಪರ್‌ಗಳು ಬಹುಸುಲಭ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾಗಿದ್ದರಿಂದ ಅವರು ಅಕ್ರಮವಾಗಿ ಪರೀಕ್ಷೆಯಲ್ಲಿ ಟಾಪ್ ರ‍್ಯಾಂಕ್ ಗಳಿಸಿದ ಆರೋಪ ಕೇಳಿಬಂದಿತ್ತು. ಹೀಗಾಗಿ ಪಿಯು ಪರೀಕ್ಷಾ ಮಂಡಳಿ ಮರು ಪರೀಕ್ಷೆ ನಡೆಸಿತ್ತು.
ಅದರಂತೆ ಜೂನ್ 3 ರಂದು ನಡೆದ ಮರುಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಟಾಪರ್ ಆಗಿದ್ದ ಸೌರಭ್ ಅನುತ್ತೀರ್ಣನಾಗಿದ್ದಾನೆ. ಬಿಹಾರ ಶಿಕ್ಷಣ ಇಲಾಖೆ ಮುಖಭಂಗಕ್ಕೊಳಗಾಗಿದೆ. 13 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಸೌರಭ್ ಮತ್ತು ಮತ್ತೊಬ್ಬ ವಿದ್ಯಾರ್ಥಿ ರಾಹುಲ್ ಪಿಯು ಫಲಿತಾಂಶವನ್ನು ಇಲಾಖೆ ರದ್ದುಗೊಳಿಸಿದೆ.
ಕಲಾ ವಿಭಾಗದಲ್ಲಿ ಟಾಪರ್ ಆಗಿದ್ದ ವಿದ್ಯಾರ್ಥಿನಿ ರೂಬಿ ರೈ ಮರುಪರೀಕ್ಷೆಗೆ ಹಾಜರಾಗಿಲ್ಲ. ನನ್ನ ಮಗಳು ಖಿನ್ನತೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಹೋಗಿದ್ದಾಳೆ. ಚಿಕಿತ್ಸೆಯಿಂದ ಮರಳಿದ ಬಳಿಕ ಆಕೆ ಪರೀಕ್ಷೆಯನ್ನು ಎದುರಿಸಲಿದ್ದಾಳೆ ಎಂದು ಹೇಳಿದ್ದಾರೆ. ಆಕೆ ಪರೀಕ್ಷೆಯಲ್ಲಿ ಗೈರು ಹಾಜರಾಗಿದ್ದಕ್ಕೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ್ ಪಿಯು ಪರೀಕ್ಷೆಯಲ್ಲಿ ಟಾಪರ್ ಆದ ವಿದ್ಯಾರ್ಥಿಗಳಿಗೆ ಮಾಧ್ಯಮದವರು ಸಂದರ್ಶನ ನಡೆಸಿದಾಗ ಅವರಲ್ಲಿ ಕೆಲವರು ಸರಳ ಪ್ರಶ್ನೆಗಳಿಗೆ ಉತ್ತರಿಸಲು ತಿಣುಕಾಡಿದ್ದರು. ಅವರಲ್ಲೊಬ್ಬರು ರಾಜ್ಯಶಾಸ್ತ್ರ ಎಂದರೆ ಅಡುಗೆಗೆ ಸಂಬಂಧಿಸಿದ ವಿಷಯ ಎಂದುತ್ತರಿಸಿ ಪರೀಕ್ಷಾ ಅಕ್ರಮದ ಕುರಿತು ದೇಶವ್ಯಾಪಿ ಅನುಮಾನವನ್ನು ಹುಟ್ಟುಹಾಕಿದ್ದರು.
Comments are closed.