ರಾಷ್ಟ್ರೀಯ

ಬೆಳೆಯುತ್ತಿದೆ ವಿಐಪಿ ಸೆಕ್ಯುರಿಟಿ ಪಟ್ಟಿ

Pinterest LinkedIn Tumblr

vipಒಬ್ಬರು ರಾಜಕಾರಣಿಯೂ, ಸಚಿವರೋ ಇದ್ದರೆ ಅವರ ಸುತ್ತಲೂ ಹತ್ತಿಪ್ಪತ್ತು ಮಂದಿ ಬಂದೂಕುಧಾರಿ ಭದ್ರತಾ ಸಿಬ್ಬಂದಿಗಳು. ಇನ್ನೂ ಸ್ವಲ್ಪ ಪ್ರಮುಖ ವ್ಯಕ್ತಿಯಾದ್ರೆ ಹತ್ತರೆ ಸುಳಿಯುವಂತೆಯೇ ಇಲ್ಲ. ಅಷ್ಟೊಂದು ಭದ್ರತೆ. ವಿಐಪಿ ಭದ್ರತೆ ಹೆಸರಲ್ಲಿ ಸಚಿವರುಗಳು, ರಾಜಕಾರಣಿಗಳು ವಿವಿಧ ಕಾರಣಕ್ಕಾಗಿ ಭದ್ರತೆ ಪಡೆಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದೆ. ಹಲವರಿಗೆ ನಾನಾ ರೀತಿಯ ವಿಐಪಿ ಭದ್ರತೆ ಇದ್ದು, ಕೇಂದ್ರ ಸರ್ಕಾರವೊಂದನ್ನೇ ಲೆಕ್ಕಹಾಕಿದರೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಸದ್ಯ ಎನ್‌ಡಿಎ ಸರ್ಕಾರವಿದ್ದು, ಇದರ ವಿಐಪಿ ಭದ್ರತಾ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಇದೀಗ 454 ಮಂದಿಗೆ ಭದ್ರತೆ ಇದೆ. ಈ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಭದ್ರತೆ ಪಡೆವವರ ಸಂಖ್ಯೆ ಎಷ್ಟು ಹೆಚ್ಚಾಗಿದೆ? ವಿಐಪಿ ಭದ್ರತೆ ಹೇಗೆ ಕೊಡುತ್ತಾರೆ? ಯಾವೆಲ್ಲ ರೀತಿಯ ಭದ್ರತೆ ಇದೆ ಎಂಬ ಕುರಿತ ವಿವರಗಳು ಇಲ್ಲಿವೆ.

ವಿಐಪಿ ಭದ್ರತೆ ನೀಡಲು ಮಾನದಂಡವೇನು?
ವಿಐಪಿ ಭದ್ರತೆಯನ್ನು ಸರ್ಕಾರದಲ್ಲಿ ವ್ಯಕ್ತಿಯೋರ್ವರು ಹೊಂದಿರುವ ಹುದ್ದೆಗಳಿಗೆ ಅನುಗುಣವಾಗಿ ನಿರ್ಧರಿತವಾಗುತ್ತದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿಗಳು ಮುಂತಾದವರು ವಿವಿಐಪಿಗಳಾದರೆ (ಅತಿ ಮುಖ್ಯ ವ್ಯಕ್ತಿಗಳು) ಲೋಕಸಭೆಯ ಸ್ಪೀಕರ್‌, ಸೇನೆಯ ವಿವಿಧ ಮುಖ್ಯಸ್ಥರು, ಭದ್ರತಾ ಸಂಸ್ಥೆಗಳ ಮುಖ್ಯಸ್ಥರು ಇತ್ಯಾದಿ ಹುದ್ದೆಗಳಿಗೆ ಅನುಸಾರವಾಗಿ ಭದ್ರತೆ ಇರುತ್ತದೆ.

ಇದು ಹೊರತಾಗಿ ಸರ್ಕಾರದ ಸೂಕ್ಷ್ಮ ವಿಚಾರಗಳು, ರಾಷ್ಟ್ರಿಯ ಭದ್ರತಾ ಹಿತಾಸಕ್ತಿಗೆ ಪೂರಕವಾಗಿ, ಮಹತ್ವದವರು ಎನಿಸಿರುವ ವ್ಯಕ್ತಿಗಳಿಗೆ ವಿಐಪಿ (ಮುಖ್ಯ ವ್ಯಕ್ತಿಗಳು) ಭದ್ರತೆ ಇರುತ್ತದೆ. ವ್ಯಕ್ತಿ/ಹುದ್ದೆಗೆ ಇರುವ ಬೆದರಿಕೆಯ ಪ್ರಮಾಣವನ್ನು ಭದ್ರತಾ ಸಂಸ್ಥೆಗಳು, ಗುಪ್ತಚರ ಸಂಸ್ಥೆಗಳು ಪರಾಮರ್ಶೆ ನಡೆಸಿ ಅವುಗಳ ಸೂಚನೆ ಮೇರೆಗೆ ಭದ್ರತೆ ನೀಡಲು ಕೇಂದ್ರ ಗೃಹಸಚಿವಾಲಯ ಸೂಚಿಸುತ್ತದೆ. ರಾಜ್ಯ ಮಟ್ಟದಲ್ಲಿ ರಾಜ್ಯಗಳು ಈ ತೀರ್ಮಾನ ಕೈಗೊಳ್ಳುತ್ತವೆ.

ಕಾಲ ಕಾಲಕ್ಕೆ ಭದ್ರತಾ ಪಟ್ಟಿ ಪರಿಷ್ಕರಣೆ
ವಿಐಪಿಗಳ ಭದ್ರತಾ ಪಟ್ಟಿಯನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಣೆಮಾಡಲಾಗುತ್ತದೆ. ವ್ಯಕ್ತಿಗಿರುವ ಬೆದರಿಕೆ ಪ್ರಮಾಣಕ್ಕೆ ಅನುಸಾರವಾಗಿ ಭದ್ರತಾ ಸಂಸ್ಥೆಗಳ, ಗುಪ್ತಚರ ಸಂಸ್ಥೆಗಳ (ಪ್ರಮುಖವಾಗಿ ಇಂಟೆಲಿಜೆನ್ಸ್‌ ಬ್ಯೂರೋ) ಶಿಫಾರಸು ಅನ್ವಯ ಈ ಪಟ್ಟಿ ಪರಿಷ್ಕರಣೆಯಾಗುತ್ತದೆ. ಅದರಂತೆ ವ್ಯಕ್ತಿಯೋರ್ವರಿಗೆ ಕೇಂದ್ರ ಸರ್ಕಾರ ಭದ್ರತೆ ನೀಡಬಹುದು, ಅಥವಾ ಹಿಂತೆಗೆದುಕೊಳ್ಳಬಹುದು. ಅಥವಾ ಭದ್ರತಾ ಪ್ರಮಾಣವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

ಏರುತ್ತಲೇ ಇದೆ ವಿಐಪಿ ಭದ್ರತೆ ಹೊಂದಿರುವವರ ಪಟ್ಟಿ!
ವಿಐಪಿ ಭದ್ರತೆ ಹೊಂದಿರುವವರ ಪಟ್ಟಿ ಈಗೀಗ್ಗೆ ಏರುತ್ತಲೇ ಇದೆ! 2012ರಲ್ಲಿ 332 ಮಂದಿ ವಿಐಪಿಗಳು ಕೇಂದ್ರದಿಂದ ಭದ್ರತೆ ಹೊಂದಿದ್ದು, 2016ರ ವೇಳೆಗೆ ಇದು 454ಕ್ಕೇರಿದೆ. 2012ರಲ್ಲಿ ಝಡ್‌ ಪ್ಲಸ್‌ ಭದ್ರತೆ ಹೊಂದಿರುವವರು 20 ಮಂದಿ ಇದ್ದರೆ, ಸದ್ಯ ಆ ಸಂಖ್ಯೆ 49ಕ್ಕೇರಿದೆ. ಹಾಗೆಯೇ ಝಡ್‌ ಮಾದರಿ ಭದ್ರತೆ ಹೊಂದಿರುವವರು 2012ರಲ್ಲಿ 48 ಮಂದಿ ಇದ್ದರೆ, 2016ರಲ್ಲಿ 72 ಮಂದಿ ಇದ್ದಾರೆ. ಎನ್‌ಎಸ್‌ಜಿಯಿಂದ ಹಿಡಿದು ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ, ಸಿಐಎಸ್‌ಎಫ್ ಪಡೆಗಳ ವರೆಗೆ ವಿವಿಧ ಹಂತಗಳ ಭದ್ರತೆಗಳನ್ನು ಈ ವಿಐಪಿಗಳಿಗೆ ಒದಗಿಸಲಾಗುತ್ತದೆ.

ಭದ್ರತೆಯ ಮಾದರಿಗಳು
ಭಾರತದಲ್ಲಿ ಕೇಂದ್ರ ಸರ್ಕಾರ ವಿವಿಧ ರೀತಿಯ ವಿಐಪಿ ಭದ್ರತಾ ಮಾದರಿಗಳನ್ನು ಒಳಗೊಂಡಿದೆ. ಬೆದರಿಕೆ ಪ್ರಮಾಣ,ವ್ಯಕ್ತಿಯನ್ನು ಅನುಸರಿಸಿಕೊಂಡು ಇದು ವ್ಯತ್ಯಾಸವಾಗುತ್ತದೆ. ಕೆಲವೊಂದು ಖಾಸಗಿ ವ್ಯಕ್ತಿಗಳಿಗೂ ಈ ವಿಐಪಿ ಭದ್ರತೆ ಇದೆ. ಅವರು ಭದ್ರತೆ ಪಡೆದಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಹಣ ಪಾವತಿಸಬೇಕಿರುತ್ತದೆ.
ಎಸ್‌ಪಿಜಿ : ಪ್ರಧಾನಿಗಳ ಭದ್ರತೆಗೆ
ಝಡ್‌ ಪ್ಲಸ್‌ : 36 ಮಂದಿ ಭದ್ರತಾ ಸಿಬ್ಬಂದಿಗಳು (10 ಮಂದಿ ಎನ್‌ಎಸ್‌ಜಿ ಕಮಾಂಡೋಗಳು ಸೇರಿ) +ಪೊಲೀಸ್‌ ಸಿಬ್ಬಂದಿ
ಝಡ್‌ : 22 ಮಂದಿ ಭದ್ರತಾ ಸಿಬ್ಬಂದಿಗಳು (4 ರಿಂದ 5 ಮಂದಿ ಎನ್‌ಎಸ್‌ಜಿ ಕಮಾಂಡೋಗಳು ಸೇರಿ) +ಪೊಲೀಸ್‌ ಸಿಬ್ಬಂದಿ
ವೈ : 11 ಮಂದಿ ಭದ್ರತಾ ಸಿಬ್ಬಂದಿಗಳು (ಇಬ್ಬರು ಎನ್‌ ಎಸ್‌ಜಿ ಕಮಾಂಡೋಗಳು ಸೇರಿ) + ಪೊಲೀಸ್‌ ಸಿಬ್ಬಂದಿ
ಎಕ್ಸ್‌ : 5 ಮಂದಿ ಭದ್ರತಾ ಸಿಬ್ಬಂದಿಗಳು (ಎನ್‌ಎಸ್‌ಜಿ ಕಮಾಂಡೋಗಳಿಲ್ಲ) + ಶಸ್ತ್ರ ಸಜ್ಜಿತ ಪೊಲೀಸ್‌ ಸಿಬ್ಬಂದಿ
-ಉದಯವಾಣಿ

Comments are closed.