ರಾಷ್ಟ್ರೀಯ

ಜಯಲಲಿತಾ, ಮಮತಾಗೆ ಗೆಲುವು

Pinterest LinkedIn Tumblr

Mamatha-Jayalalithaಬೆಂಗಳೂರು: ಕುತೂಹಲ ಮೂಡಿಸಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದ್ದು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌, ತಮಿಳುನಾಡಿನಲ್ಲಿ ಎಐಎಡಿಎಂಕೆ, ಕೇರಳದಲ್ಲಿ ಎಡರಂಗ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿವೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಜನಪರ ಯೋಜನೆಗಳ ವರ್ಚ್ಚಸು ಕೆಲಸ ಮಾಡಿದ್ದು ಮತದಾರರು ಮತ್ತೆ ತೃಣ ಮೂಲ ಕಾಂಗ್ರೆಸಿನ ಕೈಹಿಡಿದಿದ್ದಾರೆ. ಬಂಗಾಳದಲ್ಲಿ ಅಧಿಕಾರದ ಕನಸು ಕಂಡಿದ್ದ ಎಡ ಪಕ್ಷಗಳಿಗೆ ತೀವ್ರ ನಿರಾಸೆಯಾಗಿದೆ. ಟಿಎಂಸಿ 212 ಸ್ಥಾನಗಳನ್ನು ಪಡೆದರೆ, ಎಡಪಕ್ಷಗಳು 75 ಸ್ಥಾನಗಳನ್ನು ಗೆದ್ದಿವೆ. ಬಿಜೆಪಿ ಕೇವಲ 3 ಸ್ಥಾನಗಳನ್ನು ಪಡೆದಿದೆ.

ಅಸ್ಸಾಂನಲ್ಲಿ ಬಿಜೆಪಿಗೆ ಗೆಲುವು…
ಇದೇ ಮೊದಲ ಬಾರಿಗೆ ಅಸ್ಸಾಂನಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿದೆ. ಆಡಳಿತರೂಢ ಕಾಂಗ್ರಸ್‌ ಪಕ್ಷವನ್ನು ಸೋಲಿಸುವ ಮೂಲಕ ಬಿಜೆಪಿ ಮೈತ್ರಿಕೂಟ ಈಶಾನ್ಯ ಭಾಗಕ್ಕೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಬಿಜೆಪಿ ಮುಖಂಡ ಸರ್ಬಾನಂದ ಸೊನವಾಲ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಒಟ್ಟು 126 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 85 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್‌ ಕೇವಲ 24 ಸ್ಥಾನಗಳನ್ನು ಪಡೆದಿದೆ.

ಮತ್ತೆ ಗೆಲುವಿನ ನಗೆ ಬೀರಿದ ಜಯಲಲಿತಾ…
ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ವಿರೋಧ ಪಕ್ಷ ಡಿಎಂಕೆಯನ್ನು ಮಣಿಸುವಲ್ಲಿ ಯಶಸ್ವಿಯಾಗಿರುವ ಜಯಲಲಿತಾ ಎರಡನೇ ಅವಧಿಗೆ ಅಧಿಕಾರ ಹಿಡಿದಿದ್ದಾರೆ. ಎಐಎಡಿಎಂಕೆ 135 ಸ್ಥಾನಗಳನ್ನು ಗೆದ್ದುಕೊಂಡರೆ, ಡಿಎಂಕೆ ಕೇವಲ 95 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕೇರಳದಲ್ಲಿ ಎಡರಂಗ ಅಧಿಕಾರಕ್ಕೆ…
ಕೇರಳದಲ್ಲಿ ಎಡಪಕ್ಷಗಳು, ಕಾಂಗ್ರೆಸ್‌ ಮೈತ್ರಿಕೂಟವನ್ನು ಸೋಲಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಎಡ ಪಕ್ಷಗಳು 85 ಸ್ಥಾನಗಳನ್ನು ಗೆದ್ದುಕೊಂಡಿವೆ. ಕಾಂಗ್ರೆಸ್‌ ಮೈತ್ರಿಕೂಟ ಕೇವಲ 45 ಸ್ಥಾನಗಳನ್ನು ಪಡೆದಿದೆ. ಕೇರಳದಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆಯುವ ಮೂಲಕ ವಿಧಾನಸಭೆ ಪ್ರವೇಶಿಸಿದೆ.

ಪುದುಚೆರಿ ಕಾಂಗ್ರೆಸ್‌ ತೆಕ್ಕೆಗೆ…
ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೆರಿಯಲ್ಲಿ ಕಾಂಗ್ರೆಸ್‌ ಮೈತ್ರಿ ಕೂಟ ಗೆಲುವು ಸಾಧಿಸಿದೆ. ಒಟ್ಟು 30 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 15, ಎನ್‌ಆರ್‌ ಕಾಂಗ್ರೆಸ್‌ 8 ಸ್ಥಾನಗಳನ್ನು ಪಡೆದಿವೆ.

Comments are closed.