ರಾಷ್ಟ್ರೀಯ

ಗೋದ್ರಾ: 14 ವರ್ಷಗಳ ನಂತರ ಪ್ರಮುಖ ಆರೋಪಿ ಸೆರೆ

Pinterest LinkedIn Tumblr

godhraಹೊಸದಿಲ್ಲಿ: ಗೋದ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಪ್ರಮುಖ ಸಂಚುಕೋರ ಫಾರೂಖ್‌ ಮೊಹಮ್ಮದ್‌ ಬಾನಾನನ್ನು ಗುಜರಾತ್‌ ಎಟಿಎಸ್‌ ಬುಧವಾರ ಬಂಧಿಸಿದೆ.

ಶಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಬಿದ್ದ ನಂತರ ತಲೆಮರಿಸಿಕೊಂಡಿದ್ದ ಪ್ರಮುಖ ಸಂಚುಕೋರನನ್ನು ಗುಜರಾತ್‌ ಉಗ್ರ ನಿಗ್ರಹ ದಳ 14 ವರ್ಷಗಳ ನಂತರ ಬಂಧಿಸಿದೆ.

‘2002 ಫೆಬ್ರವರಿ 27ರಂದು ಗೋದ್ರಾ ರೈಲು ನಿಲ್ದಾಣದಲ್ಲಿ ರೈಲಿಗೆ ಬೆಂಕಿ ಹಚ್ಚುವ ಸಂಚು ರೂಪಿಸಿದ್ದ ಬಾನಾ, ಪ್ರಕರಣದ ಪ್ರಮುಖ ಆರೋಪಿ,’ ಎಂದು ಎಟಿಎಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ 59 ಮಂದಿ ಮೃತಪಟ್ಟಿದ್ದರು. ನಂತರ ನಡೆದ ಕೋಮು ಗಲಭೆಯಲ್ಲಿ 1,000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು.

‘ಘಟನೆ ನಡೆದ ಸಂದರ್ಭದಲ್ಲಿ ಗೋದ್ರಾದ ಕಾರ್ಪೊರೇಟರ್‌ ಆಗಿದ್ದ ಬಾನಾ, ಬಂಧನದಿಂದ ಪಾರಾಗಲು ಮುಂಬಯಿಯಲ್ಲಿ ತಲೆಮರೆಸಿಕೊಂಡಿದ್ದ. ಕೆಲ ವರ್ಷಗಳ ನಂತರ ಅಲ್ಲಿ ಆಸ್ತಿ ಮಾರಾಟ ಮಾಡುವ ಮಧ್ಯವರ್ತಿಯಾಗಿದ್ದ. ಖಚಿತ ಮಾಹಿತಿ ಮೇರೆಗೆ ಪಂಚಮಹಲ್‌ ಜಿಲ್ಲೆಯ ಕಲೊಲ್‌ ಪಟ್ಟಣದ ಟೋಲ್‌ ಕೇಂದ್ರದ ಬಳಿ ಆತನನ್ನು ಬಂಧಿಸಲಾಯಿತು,’ಎಂದು ಎಟಿಎಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗೋದ್ರಾ ರೈಲು ನಿಲ್ದಾಣದ ಬಳಿಯ ಅಮನ್‌ ಅತಿಥಿ ಗೃಹದಲ್ಲಿ ಇತರ ಆರೋಪಿಗಳ ಜತೆ ಮಾತುಕತೆ ನಡೆಸಿದ ಬಾನಾ, ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚುವ ಸಂಚು ರೂಪಿಸಿದ್ದ ಎಂದು ಎಫ್‌ಐಆರ್‌ನಲ್ಲಿ ಅರೋಪಿಸಲಾಗಿದೆ.

Comments are closed.